ಸಂತೇಮರಹಳ್ಳಿ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಕ್ಕೆ ಸೇರಿದ ಸಮುದಾಯಗಳ ಕುಂದು-ಕೊರತೆ ಸಭೆ ಈಚೆಗೆ ನಡೆಯಿತು.
ಈ ಸಂದರ್ಭದಲ್ಲಿ ಪಿಎಸ್‌ಐ ತಾಜುದ್ದೀನ್ ಮಾತನಾಡಿ, ‘ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಕೇಂದ್ರದಲ್ಲಿ ಪೊಲೀಸ್ ಠಾಣೆ ತೆರೆಯಲಾಗಿದೆ. ಈ ಠಾಣೆಯು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸಮಸ್ಯೆಗಳಿಗೆ ಸಂಬಂಧಿಸಿರುತ್ತದೆ. ಈ ಸಮುದಾಯಕ್ಕೆ ದೌರ್ಜನ್ಯ ಹಾಗೂ ಕಿರುಕುಳಗಳು ಕಂಡು ಬಂದಾಗ ಈ ಠಾಣೆಯಲ್ಲಿ ದೂರು ನೀಡಬಹುದು. ಒಂದು ವೇಳೆ ಠಾಣೆಗೆ ಹೋಗಲು ಸಾಧ್ಯವಿಲ್ಲದಿದ್ದರೆ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬಹುದು’ಎಂದರು.
‘ತನಿಖೆ ಮಾತ್ರ ಎಸ್ಸಿ ಎಸ್ಟಿ ದೌರ್ಜನ್ಯದ ಪೊಲೀಸ್ ಠಾಣೆಯಲ್ಲಿಯೇ ನಡೆಯುತ್ತದೆ. ಈ ತಿಂಗಳು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆಗಳು ಜಿಲ್ಲೆಯಾಧ್ಯಂತ ನಡೆಯುತ್ತಿರುವುದರಿಂದ ಮದ್ಯ ಮಾರಾಟ ನಿಷೇಧಿಸಬೇಕು. ಜಯಂತಿಯಲ್ಲಿ ಯಾವುದೇ ಸಮಸ್ಯೆಗಳು ಬಾರದಂತೆ ಅಚ್ಚುಕಟ್ಟಾಗಿ ನಡೆಸಬೇಕು. ಜೊತೆಗೆ ಎಸ್ಸಿ ಎಸ್ಟಿ ಬಡಾವಣೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಕಂಡು ಬಂದಾಗ ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡಬೇಕು’ಎಂದರು.
‘ಗ್ರಾಮಗಳಲ್ಲಿ ಜೂಜು ಹಾಗೂ ಅಕ್ರಮ ಮದ್ಯ ಮಾರಾಟ ಕಂಡು ಬಂದಾಗ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ತಿಳಿಸಿದರು.
ಪಿಎಸ್‌ಐ ಚಂದ್ರಶೇಖರ್, ಕಾನ್‌ಸ್ಟಬಲ್‌ಗಳಾದ ರಮೇಶ್, ರಾಜೇಶ್ವರಿ, ಗ್ರಾಮಪಂಚಾಯಿತಿ ಸದಸ್ಯ ಶಿವಯ್ಯ, ಮುಖಂಡರಾದ ಕಮರವಾಡಿ ರೇವಣ್ಣ, ಅನಿಲ್, ಮಹದೇವಸ್ವಾಮಿ, ಮಣಿಕಂಠ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.