ADVERTISEMENT

ಬಂಡೀಪುರ: ಕಳ್ಳಬೇಟೆಗೆ ಬಿದ್ದಿದೆ ಕಡಿವಾಣ

9 ವರ್ಷಗಳಿಂದ ವಿಶೇಷ ಹುಲಿ ಸಂರಕ್ಷಣಾ ದಳ ಸ್ಥಾಪನೆ

ಮಲ್ಲೇಶ ಎಂ.
Published 29 ಜುಲೈ 2019, 2:59 IST
Last Updated 29 ಜುಲೈ 2019, 2:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಿಶೇಷ ಹುಲಿ ಸಂರಕ್ಷಣಾ ದಳ ಸ್ಥಾಪನೆ ಮಾಡಿದ ನಂತರ ಕಾಡಂಚಿನ ಗ್ರಾಮಗಳಲ್ಲಿ ನಡೆಯುತ್ತಿದ್ದ ಕಳ್ಳಬೇಟೆ ಪ್ರಕರಣಗಳಿಗೆ ಕಡಿವಾಣ ಬಿದ್ದಿದೆ. ಇತ್ತೀಚಿನ ದಿನಗಳಲ್ಲಿ ಉರುಳು ಪತ್ತೆಯಾಗಿರುವ ಪ್ರಕರಣಗಳು ಎಲ್ಲೂ ವರದಿಯಾಗಿಲ್ಲ.

2010ರಲ್ಲಿ ಸ್ಥಾಪಿಸಲಾದ ಈ ದಳದ ಸಿಬ್ಬಂದಿ ಪ್ರತಿ ತಿಂಗಳು ಕಾಡಂಚಿನ ಗ್ರಾಮಗಳ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಆನೆ ಕಂದಕ ಹಾಗೂ ಅಳವಡಿಸಿರುವ ಸೋಲಾರ್ ಬೇಲಿಗಳ ಬಳಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಉರುಳು ಪತ್ತೆಯಾಗುತ್ತಿತ್ತು. ಆದರೆ, ಕ್ರಮೇಣ ಉರುಳು ಪತ್ತೆಯಾಗುತ್ತಿದ್ದುದು ಕಡಿಮೆಯಾಯಿತು ಎಂದು ಹೇಳುತ್ತಾರೆ ಸಿಬ್ಬಂದಿ.

ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವಕುಂದುಕೆರೆ, ಗೋಪಾಲಸ್ವಾಮಿ ಬೆಟ್ಟ, ಮದ್ದೂರು, ಮೂಲೆಹೊಳೆ, ಓಂಕಾರ, ನುಗು, ಯಡಿಯಾಲ, ಮೊಳೆಯೂರು ವಲಯಗಳು ಕಾಡಂಚಿನ ಪ್ರದೇಶದಲ್ಲಿವೆ. ಈ ಭಾಗದಲ್ಲಿ ಕಳ್ಳಬೇಟೆಗಾರರು ಜಿಂಕೆ, ಹುಲಿಗಾಗಿ ಉರುಳು ಹಾಕುತ್ತಿದ್ದರು. ಬೈಕ್‌ನ ಕೇಬಲ್ ವೈರ್, ಬ್ರೇಕ್ ವೈರ್‌ಗಳನ್ನು ಬಳಸಿ ಉರುಳು ಸಿದ್ಧಪಡಿಸುತ್ತಿದ್ದರು. ಕೆಲವೊಂದು ಕಡೆ ಸೋಲಾರ್ ತಂತಿಗಳಿಂದಲೂ ಉರುಳು ಮಾಡಿ ಪ್ರಾಣಿಗಳನ್ನು ಹಿಡಿಯುತ್ತಿದ್ದರು.

ADVERTISEMENT

ಉರುಳಿನಲ್ಲಿ ಸಿಕ್ಕಿ ಹಾಕಿಕೊಂಡ ಹುಲಿಯನ್ನು ಕತ್ತಿನ ಭಾಗದಲ್ಲಿ ಚುಚ್ಚಿ ಕೊಂದು ಬಳಿಕ ಚರ್ಮವನ್ನು ತೆಗೆದುಕೊಂಡು ಹೋಗುತ್ತಿದ್ದರು. ಕಾಳ ಸಂತೆಯಲ್ಲಿ ಹುಲಿಯ ಉಗುರು, ಹಲ್ಲು, ಮೂಳೆಗಳಿಗೆ ಬೇಡಿಕೆ ಇದೆ.

ಬಂಡೀಪುರದಲ್ಲಿ ವಿಶೇಷ ಹುಲಿ ಸಂರಕ್ಷಣಾ ದಳದಲ್ಲಿ ತಲಾ 30 ಸಿಬ್ಬಂದಿಯ ಎರಡು ತಂಡ ಕಾರ್ಯನಿರ್ವಹಿಸುತ್ತಿದೆ. ಒಂದು ತಂಡ ಮದ್ದೂರು ಮತ್ತು ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಕಾರ್ಯನಿರ್ವಹಿಸಿದರೆ ಇನ್ನೊಂದು ತಂಡ ಎಚ್‌.ಡಿ.ಕೋಟೆಯ ಹ್ಯಾಂಡ್‌ ಪೋಸ್ಟ್‌ ಬಳಿ ಸಕ್ರಿಯವಾಗಿದೆ.

ಕಾಡಂಚಿನ ಪ್ರದೇಶಗಳಲ್ಲಿ ಹುಲಿಯ ಮೇಲೆ ಹಾಗೂ ಕಳ್ಳಬೇಟೆಗಾರರ ಮೇಲೆ ನಿಗಾ ಇಡುವುದು ಈ ತಂಡದ ಕೆಲಸ.

ಸಿಬ್ಬಂದಿ ಕೊರತೆ: ಎರಡು ತಂಡದಲ್ಲಿದ್ದ ಕೆಲವು ಸಿಬ್ಬಂದಿ ಈಗ ಬೇರೆಡೆಗೆ ವರ್ಗಾವಣೆ ಆಗಿರುವುದರಿಂದ ಸಿಬ್ಬಂದಿ ಕೊರತೆ ಉಂಟಾಗಿದೆ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಇಂದು ಅಂತರರಾಷ್ಟ್ರೀಯ ಹುಲಿ ದಿನ

ಹುಲಿ ಸಂರಕ್ಷಣೆ ಮತ್ತು ಸಾರ್ವಜನಿಕರಲ್ಲಿ ಹುಲಿಗಳ ಬಗ್ಗೆ ಜಾಗೃತಿ ಮೂಡಿಸುವ ಅಂತರರಾಷ್ಟ್ರೀಯ ಹುಲಿ ದಿನಾಚರಣೆಯನ್ನು ಪ್ರತಿ ವರ್ಷ ಜುಲೈ 29ರಂದು ಆಚರಿಸಲಾಗುತ್ತಿದೆ. 2010ರ ಜುಲೈ 29ರಂದು ರಷ್ಯಾದ ಸೇಂಟ್‌ ಪೀಟರ್‌ಬರ್ಗ್‌ನಲ್ಲಿ ಹುಲಿಗಳಿಗೆ ಸಂಬಂಧಿಸಿದಂತೆ ನಡೆದ ಶೃಂಗಸಭೆಯಲ್ಲಿ ಮೊದಲ ಹುಲಿ ದಿನ ಆಚರಿಸಲಾಯಿತು.

ವಿಶ್ವದಾದ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಹುಲಿಗಳ ಸಂರಕ್ಷಣೆ ಹಾಗೂ ಅವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಈ ದಿನದ ಪ್ರಮುಖ ಉದ್ದೇಶ.

ಜಗತ್ತಿನ 13 ದೇಶಗಳಲ್ಲಿ ಮಾತ್ರ ಹುಲಿ ಸಂತತಿ ಬರುತ್ತದೆ. ಒಟ್ಟು 6 ಜಾತಿಯ ಹುಲಿಗಳಿದ್ದು, ಅತಿ ಹೆಚ್ಚು ಹುಲಿಗಳು ಏಷ್ಯಾ ಖಂಡದಲ್ಲಿವೆ. ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಅಂದಾಜು 2,264ಕ್ಕೂ ಹೆಚ್ಚು ಹುಲಿಗಳಿವೆ.

2016- 17ನೇ ಸಾಲಿನಲ್ಲಿ ನಡೆದ ಹುಲಿ ಗಣತಿಯ ಪ್ರಕಾರ, ಬಂಡೀಪುರದಲ್ಲಿ 139 ಹುಲಿಗಳು ಕಂಡು ಬಂದಿವೆ. ಇದೆ ದಾಖಲಾಗಿದ್ದವು.ಉತ್ತರಾಖಂಡ್‌ನ ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನದಲ್ಲಿ ಅತಿ ಹೆಚ್ಚು ಅಂದರೆ 215 ಹುಲಿಗಳು ಇವೆ. ನಂತರದ ಸ್ಥಾನದಲ್ಲಿ ಬಂಡೀಪುರ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.