ADVERTISEMENT

ಸದ್ದಿದಿಲ್ಲದೆ ಹಬ್ಬುತ್ತಿದೆ ‘ಹವಳ’ ಕಳೆ

ಸ್ಥಳೀಯ ಸಸ್, ಹುಲ್ಲಿನ ಪ್ರಬೇಧಗಳಿಗೆ ಮಾರಕ: ಆತಂಕ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 3:04 IST
Last Updated 9 ಆಗಸ್ಟ್ 2025, 3:04 IST
ಯಳಂದೂರು ತಾಲ್ಲೂಕಿನಲ್ಲಿ ವ್ಯಾಪಿಸಿಕೊಂಡಿರುವ ಹವಳದ ಕಳೆ
ಯಳಂದೂರು ತಾಲ್ಲೂಕಿನಲ್ಲಿ ವ್ಯಾಪಿಸಿಕೊಂಡಿರುವ ಹವಳದ ಕಳೆ   

ಯಳಂದೂರು: ತಾಲ್ಲೂಕಿನಾದ್ಯಂತ ತುಂತರು ಮಳೆಗೆ ಮೆಕ್ಸಿಕನ್ (ಹವಳ) ಸಸ್ಯ ಹೂಬಿಟ್ಟು ನಳನಳಿಸುತ್ತಿದೆ. ರಸ್ತೆಗಳ ಬದಿ, ಹೊಲ, ಗದ್ದೆ, ಮರಗಳನ್ನು ಅಪ್ಪಿಕೊಂಡು ಹಬ್ಬುತ್ತಿದೆ. ಲಂಟಾನ ಮತ್ತು ಪಾರ್ಥೇನಿಯಂ ಸಸ್ಯದಂತೆ ಸದ್ದಿಲ್ಲದೆ ಆಕ್ರಮಣಕಾರಿಯಾಗಿ ಬೆಳೆಯುತ್ತಿದ್ದು, ರೈತರ ನಿದ್ದೆಗೆಡಿಸಿದೆ. ಕೃಷಿ ಭೂಮಿ, ಬೇಲಿ, ಬದು ಹೀಗೆ ಎಲ್ಲಿ ನೋಡಿದರಲ್ಲಿ ಕಾಣುತ್ತಿರುವ ಸಸ್ಯ ಸ್ಥಳೀಯ ಸಸ್ಯ ಪ್ರಭೇದಗಳನ್ನು ಆವರಿಸುತ್ತಿದೆ.

‘ಗ್ರಾಮೀಣ ಹಾಗೂ ಪಟ್ಟಣದ ಪರಿಸರಗಳಲ್ಲಿ ಒಂದು ದಶಕದಿಂದ ಸಸ್ಯ ಹಬ್ಬುತ್ತಿದೆ. ಮೇ ಹಾಗೂ ಜೂನ್ ತಿಂಗಳಲ್ಲಿ ವಿಶಾಲವಾಗಿ ಹರಡಿಕೊಳ್ಳುತ್ತದೆ. ಗೆಡ್ಡೆ ಇಲ್ಲವೇ ಸಸ್ಯದ ತುಣುಕು ಭೂಮಿಗೆ ಬಿದ್ದರೂ ಚಿಗುರುವ ಸಸ್ಯ ಜಾನುವಾರುಗಳಿಗೆ ಪ್ರಮುಖ ಆಹಾರವಾದ ಹುಲ್ಲು ಸೇರಿದಂತೆ ಹತ್ತಾರು ಬಗೆಯ ಸಸ್ಯ ವರ್ಗಗಳನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ಸಾಕು ಪ್ರಾಣಿಗಳ ಮೇವಿಗೆ ಕೊರತೆ ಉಂಟಾಗುವ ಭೀತಿ ಎದುರಾಗಿದೆ’ ಎನ್ನುತ್ತಾರೆ ಕೃಷಿಕರು.

‘ಹೊಲ, ಗದ್ದೆಗಳಲ್ಲಿ  ವಿಪರೀತ ಹಾವಳಿ ಮಾಡುತ್ತಿದ್ದು ಹತ್ತಾರು ಮೀಟರ್ ಹಬ್ಬುತ್ತಿದೆ. ಕತ್ತರಿಸಿದರೂ ಬೆಳೆಯುತ್ತಿದ್ದು, ನಿರ್ವಹಣೆ ಸವಾಲಾಗಿ ಪರಿಣಮಿಸಿದೆ’ ಎಂದು ಹೊನ್ನೂರು ಬೇಸಾಯಗಾರ ಪ್ರಸಾದ್ ಹೇಳುತ್ತಾರೆ.

ADVERTISEMENT

ಏನಿದು ಮೆಕ್ಸಿಕನ್ ಕಳೆ?: ಮೆಕ್ಸಿಕೋದಲ್ಲಿ ಬೆಳೆಯುವ ಈ ಕಳೆಗೆ ಆಂಟಿಗೋನಾನ್ ಲೆಪ್ಟೊಪಸ್ ಎಂಬ ವೈಜ್ಞಾನಿಕ ಹೆಸರಿದೆ. ಇದು ಪಾಲಿಗೊನೇಸಿ ಕುಟುಂಬಕ್ಕೆ ಸೇರಿದ್ದು, ಅಲಂಕಾರಿಕ ಸಸ್ಯದಂತೆ ಕಾಣುವ ಇದು ಮುಂಗಾರಿನಲ್ಲಿ ತುಸು ತಿಳಿ ಗುಲಾಬಿ ಬಣ್ಣದ ಹೂಗಳನ್ನು ಅರಳಿಸಿ ಕಣ್ಮನ ಸೆಳೆಯುತ್ತದೆ. ಹೀಗಾಗಿಯೇ ದಾರಿಹೋಕರು ಹೂವಿನ ಮೋಡಿಗೆ ಸಿಲುಕಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದೂ ಉಂಟು. 

‌‘ಚಿಟ್ಟೆ, ಜೇನು ಮತ್ತು ಪಕ್ಷಿಗಳಿಂದ ಪರಾಗ ಸ್ಪರ್ಶವಾಗಿ ಗೆಡ್ಡೆಯ ಆಕಾರದ ಬೇರಿನಿಂದ ಕಳೆಯಾಗಿ ಬೆಳೆಯುತ್ತದೆ. ಕಾನನಗಳಲ್ಲಿ ಕಳೆ ಸಸ್ಯದ ಹಾವಳಿ ಹೆಚ್ಚಾದರೆ ಬಹುಬೇಗ ಅಲ್ಲಿನ ಸಸ್ಯ ವೈವಿಧ್ಯತೆಯನ್ನು ದುರ್ಬಲಗೊಳಿಸುವ ಅಪಾಯ ಎದುರಾಗುತ್ತದೆ’ ಎನ್ನುತ್ತಾರೆ ಏಟ್ರಿ ಸಂಸ್ಥೆಯ ವಿಜ್ಞಾನಿ ಸಿದ್ದಪ್ಪಶೆಟ್ಟಿ.  

ಅತಿವೇಗವಾಗಿ ವೃದ್ಧಿಸುವ ಶಕ್ತಿಯುಳ್ಳ ಹವಳದ ಸಸ್ಯಗಳ ಕಳೆ ಹೆಚ್ಚಾಗದಂತೆ ಎಚ್ಚರವಹಿಸಬೇಕು. ಕೊಮಾನಪುರ

-ಮಲ್ಲೇಶಪ್ಪ. ಪರಿಸರವಾದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.