ಕೊಳ್ಳೇಗಾಲ: ಬಿಸಿಲಿನ ಬೇಗೆಗೆ ತಾಲ್ಲೂಕಿನ ಕೆರೆಕಟ್ಟೆಗಳಲ್ಲಿ ನೀರಿನ ಸೆಲೆ ಬರಿದಾಗುತ್ತಿದ್ದು ಜನ–ಜಾನುವಾರುಗಳಿಗೆ ಸಂಕಷ್ಟ ಎದುರಾಗುವ ಆತಂಕ ಕಾಡುತ್ತಿದೆ. ನೀರಿನ ಮೂಲಗಳು ಒಣಗುತ್ತಿದ್ದು ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ.
ಕೆರೆಕಟ್ಟೆಗಳಲ್ಲಿ ಹೂಳು ತುಂಬಿಕೊಂಡು ಜಲಾವರಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ನೀರು ಸಂಗ್ರಹ ಸಾಧ್ಯವಾಗದೆ ಜಾನುವಾರುಗಳು ಕುಡಿಯುವ ನೀರಿಗೆ ಪರದಾಡುತ್ತಿವೆ. ಮುಂಗಾರು ಪೂರ್ವ ಮಳೆ ಆರಂಭವಾಗಿ ತಿಂಗಳು ಕಳೆದರೂ ಕೆರೆಗಳಲ್ಲಿ, ಹಳ್ಳಕೊಳ್ಳಗಳಲ್ಲಿ ಜೀವಜಲ ಕಾಣುತ್ತಿಲ್ಲ.
ಪ್ರಸಕ್ತ ವರ್ಷ ಪೂರ್ವ ಮುಂಗಾರು ಮಳೆ ಕೊರತೆಯಿಂದ ರೈತರು ಆಕಾಶ ನೋಡುವಂತಾಗಿದೆ. ತಾಲ್ಲೂಕಿ ಬಹುತೇಕ ಕೆರೆಕಟ್ಟೆಗಳು ನೀರಿಲ್ಲದೆ ಬಣಗುಡುತ್ತಿದ್ದು ಬರಡು ಭೂಮಿಯಾಗಿ ಮಾರ್ಪಟ್ಟಿವೆ. ಬಿಸಿಲಿನ ತಾಪಕ್ಕೆ ಕೆರೆಗಳು ಒಣಗಿದ್ದು ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳಲ್ಲಿ ನೀರು ಬರುತ್ತಿಲ್ಲ. ಕೆಲವು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಕೆರೆ ಹೂಳು ತೆಗೆಸಿಲ್ಲ: ತಾಲ್ಲೂಕಿನಲ್ಲಿ 250ಕ್ಕೂ ಹೆಚ್ಚು ಕೆರೆಗಳಿದ್ದು ಯಾವ ಕೆರೆಯಲ್ಲೂ ಸರಿಯಾಗಿ ಹೂಳು ತೆಗೆಸದೆ ನೀರು ಸಂಗ್ರಹವಾಗುತ್ತಿಲ್ಲ. ಮಳೆಗಾಲದಲ್ಲಿ ಸಂಗ್ರಹವಾಗುವ ನೀರು ಜನವರಿ ಹೊತ್ತಿಗೆ ಪೂರ್ತಿ ಖಾಲಿಯಾಗುತ್ತದೆ. ಪರಿಣಾಮ ಜಾನುವಾರುಗೆ ನೀರಿನ ಕೊರತೆ ಎದುರಾಗುತ್ತದೆ. ಕೃಷಿಗೂ ನೀರು ಸಾಲುತ್ತಿಲ್ಲ.
ತಾಲ್ಲೂಕಿನ ಬಹುತೇಕ ಕೆರೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಕಸ, ಕಡ್ಡಿ, ತ್ಯಾಜ್ಯ, ಆಳೆತ್ತರದ ಗಿಡಗಂಟಿಗಳು ಬೆಳೆದು ನಿಂತಿವೆ. ಹಲವು ವರ್ಷಗಳಿಂದ ಕೆರೆಗಳ ಹೂಳೆತ್ತದೆ ಮಳೆಗಾಲದಲ್ಲಿ ಬಿದ್ದ ನೀರು ಗರಿಷ್ಠ ಮಟ್ಟದಲ್ಲಿ ಸಂಗ್ರಹ ಮಾಡಿಕೊಳ್ಳಲಾಗುತ್ತಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಬೇಸಿಗೆ ಆರಂಭವಾಗುತ್ತಿದ್ದಂತೆ ಕೆರೆಗಳೆಲ್ಲ ಖಾಲಿಯಾಗುತ್ತವೆ. ಸಂಬಂಧಪಟ್ಟ ನೀರಾವರಿ ಇಲಾಖೆ ಗ್ರಾಮಗಳಲ್ಲಿರುವ ಕೆರೆಗಳನ್ನು ಸ್ವಚ್ಛಗೊಳಿಸಿ ಹೂಳು ತೆಗೆಸಿ ರೈತರಿಗೆ ಹಾಗೂ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ರೈತ ಮುಖಂಡ ಕೀರ್ತಿ ಒತ್ತಾಯಿಸಿದ್ದಾರೆ.
ಒತ್ತುವರಿ ತೆರವು ಇಲ್ಲ: ತಾಲ್ಲೂಕಿನಲ್ಲಿ ಕೆರೆಗಳು ಒತ್ತುವಾರಿಯಾಗಿದ್ದು, ತೆರವುಗೊಳಿಸದಿರುವುದು ನೀರಿನ ಸಂಗ್ರಹ ಕುಸಿಯಲು ಪ್ರಮುಖ ಕಾರಣ ಎಂದು ದೂರುತ್ತಾರೆ ರೈತರು. ತಾಲ್ಲೂಕಿನ ಪ್ರಮುಖ ಹಳ್ಳ ಹಾಗೂ ನಾಲೆಗಳು ಒತ್ತುವರಿಯಾಗಿದ್ದು ಕೆರೆಗಳಿಗೆ ಮಳೆಯ ನೀರು ಸರಾಗವಾಗಿ ಹರಿಯುತ್ತಿಲ್ಲ.
ಉದ್ಯಮಿಗಳು, ಪ್ರಬಲರು, ಬಲಾಢ್ಯ ರೈತರು ನಾಲೆ, ಹಳ್ಳ ಕೊಳ್ಳಗಳು ಸೇರಿದಂತೆ ನೀರು ಹರಿದುಹೋಗುವ ದಾರಿಗಳನ್ನು ಒತ್ತುವರಿ ಮಾಡಿಕೊಂಡಿದ್ದು ತೆರವುಗೊಳಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಂದು ರೈತ ಮುಖಂಡ ದಶರಥ್ ಎಚ್ಚರಿಕೆ ನೀಡಿದ್ದಾರೆ.
ಪ್ರಮುಖ ಕೆರೆಗಳು ಖಾಲಿ ಖಾಲಿ: ದೊಡ್ಡ ರಂಗನಾಥನಕೆರೆ, ಚಿಕ್ಕ ರಂಗನಾಥನ ಕೆರೆ, ಮಧುವನಹಳ್ಳಿ ಕೆರೆ, ಪಾಪನಕೆರೆ, ಸರಗೂರು ಕೆರೆ, ಮುಳ್ಳೂರು ಕೆರೆ, ಕೆಂಪನಪಾಳ್ಯ ಕೆರೆ, ಹಳೆ ಹಂಪಾಪುರ ಕೆರೆ, ಕುಂತೂರು ಕೆರೆ, ಟಗರು ಪುರ ಕೆರೆ, ಆಲಹಳ್ಳಿ ಕೆರೆ, ಧನಗೆರೆ ಕೆರೆ, ಪಾಳ್ಯ ದೊಡ್ಡಕೆರೆ, ದೊಡ್ಡಿಂದು ವಾಡಿಕೆರೆ, ಹೊಸ ಮಾಲಂಗಿ ಕೆರೆ, ತೇರಂಬಳ್ಳಿ ಕೆರೆ ಸೇರಿದಂತೆ ತಾಲ್ಲೂಕಿನ ನೂರಾರು ಕೆರೆಗಳಲ್ಲಿ ನೀರಿಲ್ಲದೆ ಭಣಗುಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.