ADVERTISEMENT

ಜೂನ್‌ 4–6: ಕುಂಭಾಭಿಷೇಕ, ಕಳಶಾರೋಹಣ

ಚಾಮರಾಜೇಶ್ವರ ಸ್ವಾಮಿ ರಥೋತ್ಸವಕ್ಕೂ ಮುನ್ನ ಧಾರ್ಮಿಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 18 ಮೇ 2022, 16:13 IST
Last Updated 18 ಮೇ 2022, 16:13 IST
ಚಾಮರಾಜೇಶ್ವರಸ್ವಾಮಿ ದೇವಾಲಯದ ಹೊಸ ರಥಕ್ಕೆ ಪಾಲಿಶ್‌ ಹಾಗೂ ಗಾಲಿಗಳಿಗೆ ಬಣ್ಣ ಹಚ್ಚುವುದರಲ್ಲಿ ನಿರತರಾಗಿರುವ ಸಿಬ್ಬಂದಿ
ಚಾಮರಾಜೇಶ್ವರಸ್ವಾಮಿ ದೇವಾಲಯದ ಹೊಸ ರಥಕ್ಕೆ ಪಾಲಿಶ್‌ ಹಾಗೂ ಗಾಲಿಗಳಿಗೆ ಬಣ್ಣ ಹಚ್ಚುವುದರಲ್ಲಿ ನಿರತರಾಗಿರುವ ಸಿಬ್ಬಂದಿ   

ಚಾಮರಾಜನಗರ: ನಗರದ ಚಾಮರಾಜೇಶ್ವರಸ್ವಾಮಿ ದೇವಾಲಯದಲ್ಲಿ ಜೂನ್‌ 4ರಿಂದ ಮೂರು ದಿನ ಕುಂಭಾಭಿಷೇಕ ಹಾಗೂ ಕಳಶಾರೋಹಣ ನಡೆಯಲಿದೆ.

ಐದು ವರ್ಷದ ಬಳಿಕ ಬ್ರಹ್ಮರಥ ಸಿದ್ಧವಾಗಿದ್ದು, ಜುಲೈ 13ರಂದು ಅದ್ದೂರಿಯಾಗಿ ರಥೋತ್ಸವ ಆಚರಿಸಲು ಈಗಾಗಲೇ ನಿರ್ಧರಿಸಲಾಗಿದೆ. ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ ಬಳಿಕ ಕುಂಭಾಭಿಷೇಕ, ಕಳಶಾರೋಹಣ, ಗಿರಿಜಾ ಕಲ್ಯಾಣ ಕಾರ್ಯಕ್ರಮ ನಡೆದಿರಲಿಲ್ಲ. ರಥೋತ್ಸವಕ್ಕೂ ಮುನ್ನ ಈ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ.

ಬುಧವಾರ ದೇವಸ್ಥಾನದ ಆವರಣದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ, ನಗರದ ವಿವಿಧ ಜನಾಂಗಗಳ ಮುಖಂಡರು ಹಾಗೂ ಅಧಿಕಾರಿಗಳು ಸಭೆ ಸೇರಿ ಕುಂಭಾಭಿಷೇಕ ಕಾರ್ಯಕ್ರಮ ಹಾಗೂ ಅದಕ್ಕೆ ಮಾಡಬೇಕಾದ ಸಿದ್ಧತೆಗಳ ಬಗ್ಗೆ ಚರ್ಚಿಸಿದರು.

ADVERTISEMENT

ಸಭೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕ ಸಿ.ಪುಟ್ಟರಂಗಶೆಟ್ಟಿ, ‘ಜೂನ್‌ 4, 5, 6ರಂದು ಕುಂಭಾಭಿಷೇಕ, ಕಳಶಾರೋಹಣ ಕಾರ್ಯಕ್ರಮ ನಂಜನಗೂಡಿನ ಆಗಮಿಕರಿಂದ ನೆರವೇರವೇರಲಿದೆ. ಈಗಾಗಲೇ ಬ್ರಹ್ಮರಥ ನಿರ್ಮಾಣವಾಗಿದೆ. ಗೋಪುರ ಜೀರ್ಣೋದ್ಧಾರವೂ ಆಗಿದೆ. ಕುಂಭಾಭಿಷೇಕಕ್ಕೆ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿದೆ. ಹಾಗಾಗಿ, ದಾನಿಗಳ ನೆರವಿನಿಂದ ಕುಂಭಾಭಿಷೇಕ ನಡೆಸಲು ತೀರ್ಮಾನಿಸಲಾಗಿದೆ. ವಿಜೃಂಭಣೆಯಿಂದ ಈ ಕಾರ್ಯ ನಡೆಸಲಾಗುವುದು.ಜುಲೈ 13ರಂದು ರಥೋತ್ಸವ ನಡೆಯಲಿದೆ’ ಎಂದರು.

ವೆಂಕಟನಾಗಪ್ಪಶೆಟ್ಟಿ, ಬಾಬು, ಮರಿಸ್ವಾಮಿ, ಶ್ರೀನಿವಾಸಗೌಡ, ಸಿ.ಕೆ.ಮಹದೇವಶೆಟ್ಟಿ, ಮಸಣಶೆಟ್ಟಿ, ಶ್ರೀನಿವಾಸ, ಮಾದಣ್ಣ, ನಂಜಶೆಟ್ಟಿ, ಲೋಕನಾಥ್, ಮಹೇಶ್ ಕುದರ್‌, ಮಹದೇವನಾಯಕ, ಚಿನ್ನಸ್ವಾಮಿ, ಗಣೇಶ್ ದೀಕ್ಷಿತ್, ರಾಮಕೃಷ್ಣ, ಅರ್ಚಕ ರಾಮಕೃಷ್ಣ ಭಾರದ್ವಾಜ್, ಪುರುಷೋತ್ತಮ್, ಜಿಲ್ಲಾ ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಜಯಕುಮಾರ್‌ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.