ADVERTISEMENT

ಜಗತ್ತಿಗೆ ಸತ್ಯ ಅಹಿಂಸಾ ಸಂದೇಶ ನೀಡಿದ ಚೇತನ: ಡಾ.ಅಕ್ಷತಾ

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಭಗವಾನ್ ಮಹಾವೀರ ಜಯಂತಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 14:00 IST
Last Updated 10 ಏಪ್ರಿಲ್ 2025, 14:00 IST
ಚಾಮರಾಜನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಗುರುವಾರ ಮಹಾವೀರ ಜಯಂತಿ ಆಚರಿಸಲಾಯಿತು
ಚಾಮರಾಜನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಗುರುವಾರ ಮಹಾವೀರ ಜಯಂತಿ ಆಚರಿಸಲಾಯಿತು   

ಚಾಮರಾಜನಗರ: ಸತ್ಯ, ಅಹಿಂಸೆಯ ಮೂಲಕ ಜಗತ್ತಿಗೆ ದಿವ್ಯ ಸಂದೇಶವನ್ನು ನೀಡಿದ ಮಹಾವೀರರ ಜೀವನ ಮತ್ತು ಮಾನವ ಪ್ರೀತಿ ವಿಶ್ವಕ್ಕೆ ಮಾದರಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯೆ ಡಾ.ಅಕ್ಷತಾ ಜೈನ್ ತಿಳಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಮಹಾವೀರರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಮಹಾವೀರರ ಆದರ್ಶಗಳು ಬದುಕಿಗೆ ಪ್ರೇರಣೆಯಾಗಲಿ ಎಂದರು.

ರಾಮಸಮುದ್ರದ ಜನಪದ ಮಹೇಶ್ ಮಾತನಾಡಿ, ಮಹಾವೀರರು ಶ್ರೇಷ್ಠ ಸಂತರಾಗಿದ್ದು ಜೈನ ಧರ್ಮವನ್ನು ಬೆಳೆಸುವ ಮೂಲಕ ಕೋಟ್ಯಂತರ ಅನುಯಾಯಿಗಳನ್ನು ಸಂಪಾದಿಸಿದ್ದು ಸಮಾಜದಲ್ಲಿ ಅಹಿಂಸೆ, ಶಾಂತಿ, ಪ್ರೀತಿ, ಸಹಬಾಳ್ವೆ ನೆಲೆಸಲು ಶ್ರಮಿಸಿದರು ಎಂದರು.

ADVERTISEMENT

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಮಾತನಾಡಿ ಕ್ಷತ್ರಿಯ ಕುಲದಲ್ಲಿ ಜನಿಸಿ ರಾಜ ವೈಭೋಗ ಅನುಭವಿಸುವ ಅವಕಾಶ ಇದ್ದರೂ ಸತ್ಯವನ್ನು ಹುಡುಕುವ ಮಾರ್ಗದಲ್ಲಿ ಸಾಗಿದ ಮಹಾವೀರರು ತಪಸ್ಸಿನ ಮೂಲಕ ದಿವ್ಯ ಜ್ಞಾನ ಪಡೆದು ಸತ್ಯ, ಅಹಿಂಸೆ, ಬ್ರಹ್ಮಚರ್ಯ ಹಾಗೂ ಅಪರಿಗ್ರಹವನ್ನು ಜಗತ್ತಿಗೆ ಬೋಧಿಸಿದರು.

ಮಹಾವೀರರು ಶಾಂತಿಯ ಪ್ರತೀಕವಾಗಿದ್ದು ದೇಶದೆಲ್ಲೆಡೆ ಜೈನ ಕೇಂದ್ರಗಳು ಸ್ಥಾಪಿಸಿ ಧರ್ಮವನ್ನು ವಿದೇಶಗಳಿಗೂ ಪಸರಿಸಲು ಕಾರಣರಾಗಿದ್ದಾರೆ. ಶಾಂತ ಸಮಾಜ ನಿರ್ಮಾಣಕ್ಕೆ, ಅಹಿಂಸಾ ತತ್ವ ಪಾಲನೆಯ ಮೂಲಕ ವರ್ಧಮಾನ ಮಹಾವೀರರು ದೇಶದ ಗೌರವವನ್ನು ಇಮ್ಮಡಿಗೊಳಿಸಿದ್ದಾರೆ.

ದೇಶದ ಸಂಸ್ಕೃತಿ, ಆಧ್ಯಾತ್ಮ, ಧರ್ಮದ ಉನ್ನತಿ, ಮಾನವ ಕಲ್ಯಾಣದ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ. ಚಾಮರಾಜನಗರ ಜಿಲ್ಲೆಯ ಕನಕಗಿರಿ ಕ್ಷೇತ್ರ ಜೈನ ಕೇಂದ್ರವಾಗಿ, ಆಧ್ಯಾತ್ಮಿಕ ಶಕ್ತಿ ಕೇಂದ್ರವಾಗಿದೆ. ಜಿಲ್ಲೆಯ ಉಮ್ಮತ್ತೂರು, ಕೊಳ್ಳೇಗಾಲ, ಗುಂಡ್ಲುಪೇಟೆ ಯಳಂದೂರು ತಾಲ್ಲೂಕುಗಳಲ್ಲಿ ಜೈನ ಧರ್ಮದ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಇಂದಿಗೂ ಉಳಿದಿವೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪದ್ಮಾ ಪುರುಷೋತ್ತಮ್, ಸರಸ್ವತಿ, ಶಿವಲಿಂಗ ಮೂರ್ತಿ, ಬಿ.ಕೆ.‌ಆರಾಧ್ಯ, ನಿವೃತ್ತ ಶಿಕ್ಷಕಿ ಗೀತಾ, ಕೃಷ್ಣವೇಣಿ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ರಮೇಶ್ ಬಾಬು ಇದ್ದರು.

ರಾಜವೈಭೋಗ ತ್ಯಜಿಸಿ ಸತ್ಯದ ಹಾದಿ ಪಯಣ ವಿದೇಶಗಳಿಗೂ ಪಸರಿಸಿದ ಜೈನಧರ್ಮ ಶಾಂತ ಸಮಾಜ ನಿರ್ಮಾಣ ಮಹಾವೀರರ ಸಂಕಲ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.