ADVERTISEMENT

ನೀರಾವರಿ ಯೋಜನೆ ಶೀಘ್ರ ಸಭೆ: ರಮೇಶ್ ಜಾರಕಿಹೊಳಿ

ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಭರವಸೆ; ಅನುದಾನ ನೀಡಲು ಶಾಸಕರ ಮನವಿ

​ಪ್ರಜಾವಾಣಿ ವಾರ್ತೆ
Published 29 ಮೇ 2020, 16:02 IST
Last Updated 29 ಮೇ 2020, 16:02 IST
ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಅವರು ಶುಕ್ರವಾರ ಕೊಳ್ಳೇಗಾಲದ ಸರಗೂರು ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು
ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಅವರು ಶುಕ್ರವಾರ ಕೊಳ್ಳೇಗಾಲದ ಸರಗೂರು ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು   

ಚಾಮರಾಜನಗರ: ಕೊಳ್ಳೇಗಾಲದ ಸರಗೂರು ಗ್ರಾಮದಿಂದ ಕಾವೇರಿ ನದಿ ನೀರನ್ನು ಹನೂರು ತಾಲ್ಲೂಕಿನ ಗುಂಡಾಲ್‌ ಜಲಾಶಯ ಹಾಗೂ ಎರಡು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ಎಲ್ಲ ನೀರಾವರಿ ಯೋಜನೆಗಳ ಬಗ್ಗೆ ಮುಂದಿನ ವಾರವೇ ಸಭೆ ನಡೆಸಿ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಭರವಸೆ ನೀಡಿದರು.

ಹನೂರು ತಾಲ್ಲೂಕಿನ ಗುಂಡಾಲ್‌ ಜಲಾಶಯದ‌ಲ್ಲಿರುವ ಕಾವೇರಿ ನೀರಾವರಿ ನಿಗಮದ ಪ‍್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ‘ಸ್ಥಳೀಯ ಶಾಸಕರು ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸಲಾಗುವುದು. ನೀರಾವರಿ ವಿಚಾರದಲ್ಲಿ ಇಲಾಖೆ ಪಕ್ಷಾತೀತವಾಗಿ ಕೆಲಸ ಮಾಡಲಿದೆ’ ಎಂದರು.

ಇದಕ್ಕೂ ಮೊದಲು ಅವರು ಸರಗೂರು ಗ್ರಾಮಕ್ಕೆ ಭೇಟಿ ನೀಡಿ, ಯೋಜನೆ ಕಾಮಗಾರಿ ಪ್ರಗತಿಯನ್ನು ಪರಿಶೀಲಿಸಿದರು. ನಂತರ ಗುಂಡಾಲ್‌ ಜಲಾಶಯದ ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಮುಖಂಡರೊಂದಿಗೆ ಸಭೆ ನಡೆಸಿ ಯೋಜನೆಯ ಪ್ರಗತಿಯನ್ನು ಪರಾಮರ್ಶಿಸಿದರು.

ADVERTISEMENT

ಹನೂರು ಶಾಸಕ ಆರ್‌.ನರೇಂದ್ರ ಮಾತನಾಡಿ, ‘ಸರಗೂರು ಏತ ನೀರಾವರಿ ಯೋಜನೆ ನನ್ನ ಕನಸಿನ ಯೋಜನೆ. ಎಂಟು ವರ್ಷಗಳಿಂದ ಇದಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ನೀರಾವರಿ ಹಾಗೂ ಕುಡಿಯುವ ಉದ್ದೇಶಕ್ಕೆ ನೀರು ಕಾವೇರಿ ನದಿಯಿಂದ ನೀರೆತ್ತಿ ಗುಂಡಾಲ್‌ ಜಲಾಶಯ, ರಾಮನಗುಡ್ಡೆ ಕೆರೆ ಮತ್ತು ಹುಬ್ಬೆಹುಣಸೆ ಕೆರೆಗಳಿಗೆ ತುಂಬಿಸುವ ಯೋಜನೆ ಇದು. ಅಂದಾಜು ₹132 ಕೋಟಿ ವೆಚ್ಚದಲ್ಲಿ ಜಾರಿಯಾಗಿದೆ. 22 ಹಳ್ಳಿಗಳಿಗೆ ಹಾಗೂ 20 ಸಾವಿರ ಎಕರೆ ಕೃಷಿ ಭೂಮಿಗೆ ಇದರಿಂದ ಅನುಕೂಲವಿದೆ. ಶೀಘ್ರದಲ್ಲಿ ಯೋಜನೆ ಪೂರ್ಣಗೊಳಿಸಲು ಕ್ರಮ ವಹಿಸಬೇಕು’ ಎಂದು ಸಚಿವರಿಗೆ ಮನವಿ ಮಾಡಿದರು.

‘ಗುಂಡಾಲ್‌ ಜಲಾಶಯ ನಿರ್ಮಾಣ ಆದ ನಂತರ ಇದುವರೆಗೆ ಒಮ್ಮೆ ಮಾತ್ರ ಭರ್ತಿಯಾಗಿದೆ. ಹೂಳಿನ ಸಮಸ್ಯೆ ಇದೆ, ನಾಲೆಗಳು ನಿರ್ವಹಣೆ ಇಲ್ಲದೆ ಹಾಳಾಗಿವೆ. ತೋರುಗಾಲುವೆಗಳನ್ನು ನಿರ್ಮಿಸಬೇಕಿದೆ. ಅದೇ ರೀತಿ ತಾಲ್ಲೂಕಿನ ಇನ್ನೊಂದು ಜಲಾಶಯ ಉಡುತೊರೆಯು ಕೂಡ ನಿಗದಿಯಷ್ಟು ಪ್ರದೇಶಕ್ಕೆ ನೀರುಣಿಸಲು ವಿಫಲವಾಗಿದೆ. ನಾಲೆಗಳು ಮುಚ್ಚಿ ಹೋಗಿವೆ. ಇವುಗಳ ನಿರ್ವಹಣೆಯನ್ನು ಸರಿಪಡಿಸಬೇಕು’ ಎಂದರು.

ಕಚೇರಿ ಸ್ಥಳಾಂತರಿಸಿ: ‘ತಾಲ್ಲೂಕಿನ ಅಜ್ಜೀಪುರದಲ್ಲಿ ಕಾವೇರಿ ನಿಗಮಕ್ಕೆ ಸೇರಿದ ಕಟ್ಟಡಗಳು ಇವೆ. ನಿಗಮದ ಕಚೇರಿಯನ್ನು ಅಲ್ಲಿಗೆ ಸ್ಥಳಾಂತರಿಸಿದರೆ ನಮಗೆ ಅನುಕೂಲವಾಗುತ್ತದೆ’ ಎಂದು ಮನವಿ ಮಾಡಿದರು.

‘ಹಲವು ಕೆರೆಗಳು ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸಲೂ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.

ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಮಾತನಾಡಿ, ‘ನನ್ನ ಕ್ಷೇತ್ರದಲ್ಲಿ ಕಾವೇರಿ ನಿಗಮದ ವ್ಯಾಪ್ತಿಯಲ್ಲಿ ಬರುವ ಯೋಜನೆಗಳಿಗಾಗಿ ₹329 ಕೋಟಿ ಮೊತ್ತದ ಅವಶ್ಯಕತೆ ಇದೆ. ₹140 ಕೋಟಿ ವೆಚ್ಚದಲ್ಲಿ ಮಾಲಂಗಿ ಬಳಿಯಿಂದ ನೀರೆತ್ತಿ ಕೊಳ್ಳೇಗಾಲ ಮತ್ತು ಯಳಂದೂರು ತಾಲ್ಲೂಕಿನ ಆರು ಕೆರೆಗಳನ್ನು ತುಂಬಿಸುವ ಯೋಜನೆ ಕೈಗೆತ್ತಿಕೊಳ್ಳಬೇಕು. ಇದಲ್ಲದೇ, ₹112 ಕೋಟಿ ವೆಚ್ಚದಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಪ್ರಮುಖ ಕಾಲುವೆಗಳನ್ನು ದುರಸ್ತಿ ಮಾಡುವ ಅಗತ್ಯವಿದೆ. ಇದರ ಜೊತೆಗೆ ಕೊಳ್ಳೇಗಾಲ ನಗರ ವ್ಯಾಪ್ತಿಯ ಎರಡು ಕೆರೆಗಳ ಹೂಳು ತೆಗೆದು, ಅಭಿವೃದ್ಧಿ ಪಡಿಸಿ, ಉದ್ಯಾನ ನಿರ್ಮಾಣ ಮಾಡಿದರೆ ಜನರಿಗೆ ಅನುಕೂಲವಾಗುತ್ತದೆ. ಈ ಮೂರು ಯೋಜನೆಗಳಿಗೆ ಆದ್ಯತೆ ನೀಡಬೇಕು’ ಎಂದು ಕೇಳಿಕೊಂಡರು.

ಮುಖಂಡರಾದ ಪರಿಮಳಾ ನಾಗಪ್ಪ, ಜಿ.ಎನ್‌.ನಂಜುಂಡಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಶಿವಮ್ಮ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಜಯಪ್ರಕಾಶ್‌, ಮುಖ್ಯ ಎಂಜಿನಿಯರ್‌ ಚಂದ್ರೇಗೌಡ, ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಚಂದ್ರಶೇಖರ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌, ಉಪವಿಭಾಗಾಧಿಕಾರಿ ನಿಖಿತಾ ಎಂ.ಚಿನ್ನಸ್ವಾಮಿ, ತಹಶೀಲ್ದಾರ್‌ ಕುನಾಲ್‌ ಹಾಗೂ ಅಧಿಕಾರಿಗಳು ಇದ್ದರು.

ಕೆರೆ ತುಂಬಿಸುವ ಯೋಜನೆ ತ್ವರಿತಗೊಳಿಸಿ

ಗುಂಡ್ಲುಪೇಟೆ ಶಾಸಕ ನಿರಂಜನ್‌ಕುಮಾರ್‌ ಮಾತನಾಡಿ, ‘ಕೊಳ್ಳೇಗಾಲ, ಹನೂರು ಭಾಗಗಳಲ್ಲಿ ನೀರಾವರಿ ವ್ಯವಸ್ಥೆ ಇದೆ. ಆದರೆ, ಚಾಮರಾಜನಗರ, ಗುಂಡ್ಲುಪೇಟೆಯ ರೈತರು ಮಳೆಯನ್ನೇ ನಂಬಿಕೊಂಡು ಕೃಷಿ ಮಾಡಬೇಕಿದೆ. ಹಾಗಾಗಿ, ಅಲ್ಲಿನ ಕೆರೆಗಳನ್ನು ತುಂಬಿಸುವ ಯೋಜನೆಗಳಿಗೆ ಒತ್ತು ನೀಡಬೇಕು. ನೀವು ಸರ್ಕಾರದಲ್ಲಿ ‌ಪ್ರಭಾವಿ ಹಾಗೂ ಶಕ್ತಿಯುತ ಸಚಿವರಾಗಿದ್ದೀರಿ. ನೀರಾವರಿ ಯೋಜನೆಗಳಲ್ಲಿ ನಮ್ಮ ಜಿಲ್ಲೆಗೇ ಹೆಚ್ಚು ಒತ್ತು ನೀಡಬೇಕು. ಅದರಲ್ಲೂ, ನಮ್ಮ ಭಾಗಕ್ಕೆ ಪ್ರಾಮುಖ್ಯ ನೀಡಬೇಕು’ ಎಂದರು.

‘ಆಲಂಬೂರು ಯೋಜನೆ ಅಡಿಯಲ್ಲಿ ಹುತ್ತೂರು ಕೆರೆಯವರೆಗೆ ನೀರು ಬಂದಿದೆ. ಇನ್ನೂ ಒಂಬತ್ತು ಕೆರೆಗಳಿಗೆ ನೀರು ಹರಿಯಬೇಕಿದೆ. ಅದೇ ರೀತಿ ಗಾಂಧಿ ಗ್ರಾಮ ಯೋಜನೆ ಅಡಿಯಲ್ಲಿ ಮೂರು ಕೆರೆಗಳು ಮಾತ್ರ ತುಂಬಿವೆ. ಇನ್ನೂ ಏಳು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಆಗಿಲ್ಲ. ಕಳೆದ ವರ್ಷ ಕೆರೆಗೆ ನೀರು ತುಂಬಿಸಲು ಆರಂಭಿಸುವ ಹೊತ್ತಿಗೆ ನದಿಯಲ್ಲಿ ನೀರು ಖಾಲಿಯಾಗಿತ್ತು. ಈ ವರ್ಷ ಜೂನ್‌ 1ರಿಂದಲೇ ನೀರು ತುಂಬಿಸಬೇಕು. ನುಗು ಎರಡನೇ ಹಂತದ ಯೋಜನೆಗೆ ಅನುಮತಿ ನೀಡಬೇಕು’ ಎಂದು ಮನವಿ ಮಾಡಿದರು.

ಕೊಳ್ಳೇಗಾಲದ ಸರಗೂರು ಗ್ರಾಮದಿಂದ ಕಾವೇರಿ ನದಿ ನೀರನ್ನು ಹನೂರು ತಾಲ್ಲೂಕಿನ ಗುಂಡಾಲ್‌ ಜಲಾಶಯ ಹಾಗೂ ಎರಡು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ಎಲ್ಲ ನೀರಾವರಿ ಯೋಜನೆಗಳ ಬಗ್ಗೆ ಮುಂದಿನ ವಾರವೇ ಸಭೆ ನಡೆಸಿ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು

ಕೆರೆಗಳ ಪರಿಶೀಲನೆ

ಇದಕ್ಕೂ ಮೊದಲು, ರಮೇಶ್‌ ಜಾರಕಿಹೊಳಿ ಅವರು ಕೊಳ್ಳೇಗಾಲದ ಕೊಂಗರ ಕೆರೆ, ಚಿಕ್ಕರಂಗನಾಥನ ಕೆರೆ ಮತ್ತು ತಟ್ಟೆ ಕೆರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ‘ಕೆರೆಗಳನ್ನುನೀರುತುಂಬಿಸಿರೈತರಿಗೆಅನುಕೂಲ ಮಾಡಿಕೊಡಲಾಗುವುದು. ಅನೇಕ ವರ್ಷಗಳಿಂದ ಹೂಳು ತೆಗೆಯದೆ ಕೆರೆಗಳು ಹಾಳಾಗಿವೆ. ನಗರದಕೊಂಗರಕೆರೆ,ಚಿಕ್ಕರಂಗನಾಥನಕೆರೆ, ತಟ್ಟೆಕೆರೆಗಳನ್ನು ಸೌಂದರ್ಯ ತಾಣವಾಗಿ ಮಾಡುವುದಕ್ಕೆ ಅನುದಾನ ಹಾಗೂಕ್ಷೇತ್ರವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ₹329 ಕೋಟಿ ಅನುದಾನ ನೀಡಲಾಗುವುದು’ ಎಂದು ಭರವಸೆನೀಡಿದರು.

ಮನವಿ: ‘ತಾಲ್ಲೂಕಿನಸರಗೂರು ಗ್ರಾಮದಲ್ಲಿ ಇರುವ ನಾಯಕರ ಸಮುದಾಯ ಭವನವನ್ನು ₹20ಲಕ್ಷ ವೆಚ್ಚದಲ್ಲಿ ಒಂದು ಅಂತಸ್ತಿನಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ, ಗ್ರಾಮದಲ್ಲಿ ಹೆಚ್ಚು ಬಡವರುಇರುವುದರಿಂದ ಅವರಅನುಕೂಲಕ್ಕಾಗಿ ಸಮುದಾಯ ಭವನವನ್ನುಇನ್ನಷ್ಟು ಅಭಿವೃದ್ಧಿಗೊಳಿಸಲು ನೆರವಾಗಬೇಕು’ ಎಂದು ಗ್ರಾಮದ ನಾಯಕ ಸಮುದಾಯದ ಯಜಮಾನರು ಸಚಿವರಿಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.