ADVERTISEMENT

ಕೋವಿಡ್‌ ತಡೆ: ಶಾಸಕರು, ಅಧಿಕಾರಿಗಳೊಂದಿಗೆ ಸಚಿವ ಎಸ್‌.ಟಿ.ಸೋಮಶೇಖರ್‌ ಸಭೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 1:26 IST
Last Updated 7 ಆಗಸ್ಟ್ 2021, 1:26 IST
ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಶಾಸಕ ಎನ್‌.ಮಹೇಶ್‌ ಹಾಗೂ ಜಿಲ್ಲೆಯ ಅಧಿಕಾರಿಗಳೊಂದಿಗೆ ಕೆಕ್ಕನಹಳ್ಳ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಶಾಸಕ ಎನ್‌.ಮಹೇಶ್‌ ಹಾಗೂ ಜಿಲ್ಲೆಯ ಅಧಿಕಾರಿಗಳೊಂದಿಗೆ ಕೆಕ್ಕನಹಳ್ಳ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಚಾಮರಾಜನಗರ:ಕೋವಿಡ್-19 ನಿಯಂತ್ರಣಕ್ಕಾಗಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಕೋವಿಡ್ ಹಾಗೂ ನೆರೆ ಹಾವಳಿ ಪರಿಹಾರ ಕೆಲಸಗಳ ತ್ವರಿತ ನಿರ್ವಹಣೆಗೆ ಜಿಲ್ಲೆಯ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಕೋವಿಡ್-19 ನಿರ್ವಹಣೆ ಮತ್ತು ನೆರೆ ಹಾವಳಿ ಪರಿಹಾರ ಕಾರ್ಯಗಳ ಪೂರ್ವ ಸಿದ್ಧತೆ ಹಾಗೂ ಪರಿಹಾರ ಸಂಬಂಧ ಕೈಗೊಂಡಿರುವ ಕ್ರಮಗಳಿಗೆ ಸಂಬಂಧಿಸಿದಂತೆ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು,‘ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಳ ಮಾಡಬೇಕು. ಸೋಂಕು ವ್ಯಾಪಿಸದಂತೆ ತಡೆಯುವ ನಿಟ್ಟಿನಲ್ಲಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು’ ಎಂದರು.

‘ವೈದ್ಯರು, ಶುಶ್ರೂಷಕರು ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿ ಅವಶ್ಯಕ ತರಬೇತಿ ಹೊಂದಿರಬೇಕು. ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತರಬೇತಿಗೊಂಡವರು ಕೋವಿಡ್ ತಡೆಗೆ ಸನ್ನದ್ಧರಾಗುವಂತೆ ವ್ಯವಸ್ಥೆ ಮಾಡಬೇಕು. ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹೆಚ್ಚು ಮನವರಿಕೆ ಮಾಡಿಕೊಡುವ ಕೆಲಸವಾಗಬೇಕು’ ಎಂದರು.

ADVERTISEMENT

‘ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಹೊರಗುತ್ತಿಗೆ ಆಧಾರದಲ್ಲಿ ಅಗತ್ಯವಿರುವಷ್ಟು ಸಿಬ್ಬಂದಿಯನ್ನು ನಿಯೋಜಿಸಲು ಕ್ರಮ ವಹಿಸಲಾಗುವುದು. ಮೆಡಿಕಲ್ ಕಾಲೇಜು ಪಕ್ಕದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಆಸ್ಪತ್ರೆ ಕಟ್ಟಡವನ್ನು ಸದ್ಯದಲ್ಲೇ ಬಳಕೆಗೆ ಅನುಕೂಲ ಮಾಡಿಕೊಡಲಾಗುವುದು’ ಎಂದರು.

‘ಜಿಲ್ಲೆಯಲ್ಲಿನ ಕೋವಿಡ್ ಲಸಿಕೆಯ ಬೇಡಿಕೆ ಹಾಗೂ ಪೂರೈಕೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಬೇಡಿಕೆಗೆ ತಕ್ಕಂತೆ ವಿಶೇಷ ಹಾಗೂ ಹೆಚ್ಚುವರಿ ಕೋಟಾದಡಿ ಕೋವಿಡ್ ಲಸಿಕೆ ಪೂರೈಕೆಗೆ ಕ್ರಮ ವಹಿಸಲಾಗುವುದು. ಗಡಿಯಂಚಿನ ಗ್ರಾಮಗಳ ಜನರು ಕೋವಿಡ್ ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು’ ಎಂದು ಸಚಿವರು ತಿಳಿಸಿದರು.

ಶಾಸಕರಾದ ಆರ್.ನರೇಂದ್ರ, ಎನ್.ಮಹೇಶ್ ಹಾಗೂ ಸ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ, ‘ಕೋವಿಡ್ ಪರೀಕ್ಷೆಗಳನ್ನು ಪ್ರತಿದಿನವೂ ಹೆಚ್ಚಿನ ಪ್ರಮಾಣದಲ್ಲಿ ಮಾಡಬೇಕು. ರೋಗ ಲಕ್ಷಣ ಹೊಂದಿರುವವರನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಬೇಕು. ಜಿಲ್ಲೆಯ ಗುಂಡ್ಲುಪೇಟೆ ಹಾಗೂ ಹನೂರು ಗಡಿ ತಾಲ್ಲೂಕುಗಳಾಗಿದ್ದು, ಇಲ್ಲಿನ ಗಡಿಭಾಗಗಳಲ್ಲಿ ಕೋವಿಡ್ ಲಸಿಕೆ ಕೊರತೆ ಉಂಟಾಗದಂತೆ ಗಮನಹರಿಸಬೇಕು’ ಎಂದರು.

ನೆರೆ ನಿಭಾಯಿಸಲೂ ಸಿದ್ಧತೆ ಮಾಡಿ: ‘ಮಳೆಗಾಲದಲ್ಲಿ ಕಾವೇರಿ ಹಾಗೂ ಕಬಿನಿ ನದಿಯಿಂದ ನೀರು ಹೊರಬಿಡುವ ಸಂದರ್ಭದಲ್ಲಿ ಕೊಳ್ಳೇಗಾಲ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಉಂಟಾಗಬಹುದಾದ ನೆರೆ ಹಾವಳಿ ಪರಿಸ್ಥಿತಿಯನ್ನು ನಿಭಾಯಿಸಲು ಅಧಿಕಾರಿಗಳು ಸನ್ನದ್ಧರಾಗಿರಬೇಕು. ಇದಕ್ಕಾಗಿ ಜಿಲ್ಲಾಡಳಿತ ನಿಯೋಜಿಸಿರುವ ವಿಪತ್ತು ನಿರ್ವಹಣಾ ಕಾರ್ಯಪಡೆಯನ್ನು ಇನ್ನಷ್ಟು ಚುರುಕುಗೊಳಿಸಬೇಕು’ ಎಂದು ಸೋಮಶೇಖರ್‌ ಅವರು ಸೂಚಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಬಿ.ಶಾಂತಮೂರ್ತಿ ಕುಲಗಾಣ,ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಎಸ್‌ಪಿದಿವ್ಯಾ ಸಾರಾ ಥಾಮಸ್, ಜಿಲ್ಲಾ ಪಂಚಾಯಿತಿ ಸಿಇಒ ಅಧಿಕಾರಿ ಹರ್ಷಲ್ ಭೊಯರ್ ನಾರಾಯಣರಾವ್, ಎಡಿಸಿ ಎಸ್.ಕಾತ್ಯಾಯಿನಿದೇವಿ, ಎಸಿ ಡಾ. ಗಿರೀಶ್ ದಿಲೀಪ್ ಬಡೋಲೆ, ಡಿಎಚ್‌ಒ ಡಾ.ಎಂ.ಸಿ.ರವಿ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಡಾ.ಸಂಜೀವ್ ಇತರರು ಇದ್ದರು.

ಕೆಕ್ಕನಹಳ್ಳ ಚೆಕ್‌ಪೋಸ್ಟ್‌ಗೆ ಭೇಟಿ

ಗುಂಡ್ಲುಪೇಟೆ: ಜಿಲ್ಲಾ ಕೇಂದ್ರದಲ್ಲಿ ಸಭೆ ನಡೆಸಿದ ನಂತರ ಸಚಿವ ಸೋಮಶೇಖರ್‌ ಅವರು ತಾಲ್ಲೂಕಿನ ಗಡಿ ಭಾಗವಾದ ಕೆಕ್ಕನಹಳ್ಳ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರತಿ ದಿನ ಎಷ್ಟು ವಾಹನಗಳು ತಮಿಳುನಾಡಿನ ಕಡೆಯಿಂದ ಬರುತ್ತಿದೆ? ಎಲ್ಲರೂ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ತರುತ್ತಿದ್ದಾರೆಯೇ ಎಂದು ಚೆಕ್‌ಪೋಸ್ಟ್‌ ಸಿಬ್ಬಂದಿಯನ್ನು ಕೇಳಿದರು.

‘ಈಗಾಗಲೇ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಸರಿಯಾದ ದಾಖಲೆಗಳನ್ನು ನೀಡದೇ ಇದ್ದಲ್ಲಿ ವಾಹನಗಳನ್ನು ಮುಲಾಜಿಲ್ಲದೇ ವಾಪಸ್‌ ಕಳುಹಿಸಿ’ ಎಂದು ಸೂಚಿಸಿದರು.

‘ಅಂತರರಾಜ್ಯ ವಹಿವಾಟು ಸೇರಿದಂತೆ ವ್ಯಾಪಾರ ಇನ್ನಿತರ ಚಟುವಟಿಕೆಗಳಿಗೆ ತೊಂದರೆಯಾಗಬಾರದು. ಆದರೆ, ಕೋವಿಡ್‌ ನಿಯಂತ್ರಿಸಲು ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ’ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಎಂ.ಆರ್.ರವಿ, ಕೊಳ್ಳೇಗಾಲ ಶಾಸಕ ಮಹೇಶ್, ತಹಶಿಲ್ದಾರ್ ರವಿಶಂಕರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.