ADVERTISEMENT

ಅಸಮರ್ಪಕ ನಿರ್ವಹಣೆಗೆ ನಲುಗಿದ ಜಲಾಶಯ, ಹೆಚ್ಚುತ್ತಿರುವ ಅನೈತಿಕ ಚಟುವಟಿಕೆಗಳು

ಮಿಣ್ಯತ್ತಹಳ್ಳ ಜಲಾಶಯ ಕುಡುಕರ ಹಾವಳಿ

ಬಿ.ಬಸವರಾಜು
Published 9 ಅಕ್ಟೋಬರ್ 2018, 20:00 IST
Last Updated 9 ಅಕ್ಟೋಬರ್ 2018, 20:00 IST
ಈಚೆಗೆ ಸುರಿದ ಮಳೆಯಿಂದಾಗಿ ಜಲಾಶಯ ಭರ್ತಿಯಾಗಿ ಹೊರ ಹೋಗುತ್ತಿರುವ ನೀರು
ಈಚೆಗೆ ಸುರಿದ ಮಳೆಯಿಂದಾಗಿ ಜಲಾಶಯ ಭರ್ತಿಯಾಗಿ ಹೊರ ಹೋಗುತ್ತಿರುವ ನೀರು   

ಹನೂರು: ನೂರಾರು ಎಕರೆ ಜಮೀನುಗಳಿಗೆ ನೀರುಣಿಸಿ, ಸಾವಿರಾರು ವನ್ಯಜೀವಿಗಳಿಗೆ ಜೀವನಾಡಿಯಾಗಿರುವ ಯರಂಬಾಡಿಯ ಮಿಣ್ಯತ್ತಹಳ್ಳ ಜಲಾಶಯ ನಿರ್ವಹಣೆಯ ಕೊರತೆಯಿಂದ ಕುಡುಕರ ಹಾಗೂ ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿವರ್ತನೆಯಾಗಿದೆ.

ಇಲ್ಲಿನ ನೆಲ್ಲೂರು, ಹಂಚಿಪಾಳ್ಯ, ಪೆದ್ದನಪಾಳ್ಯ, ಕೂಡ್ಲೂರು, ಜಲ್ಲಿಪಾಳ್ಯ ಹಾಗೂ ಹೂಗ್ಯಂ ಗ್ರಾಮಗಳ ವ್ಯಾಪ್ತಿಯಜಮೀನಿಗೆ ನೀರಿನ ಸೌಲಭ್ಯ ಒದಗಿಸುವ ದೃಷ್ಟಿಯಿಂದ 1983ರಲ್ಲಿ ಅಂದಿನ ಮುಖ್ಯಮಂತ್ರಿ ಆರ್‌.ಗುಂಡೂರಾವ್‌ ಈ ಜಲಾಶಯವನ್ನು ಲೋಕಾರ್ಪಣೆಗೊಳಿಸಿದ್ದರು. ಅಂದಿನಿಂದ ಸಣ್ಣ ನೀರಾವರಿ ಇಲಾಖೆಯ ತೆಕ್ಕೆಯಲ್ಲಿರುವ ಜಲಾಶಯ, ಈ ಭಾಗದ ರೈತರ ಜಮೀನುಗಳಿಗೆ ಹಾಗೂ ಮಲೆಮಹದೇಶ್ವರ ವನ್ಯಧಾಮದ ಸಾವಿರಾರು ವನ್ಯಪ್ರಾಣಿಗಳಿಗೆ ಜೀವಜಲದ ಸೆಲೆಯಾಗಿದೆ.

ತಮಿಳುನಾಡಿನ ಮಾಸನಪಾಳ್ಯ, ಗುಂಡರೆ ಹಾಗೂ ಕರ್ನಾಟಕದ ಪಿ.ಜಿ.ಪಾಳ್ಯ, ಅಂಡಕುರುಬನದೊಡ್ಡಿ, ಬೈಲೂರು ಮುಂತಾದ ಕಡೆ ಉತ್ತಮ ಮಳೆಯಾದರೆ ಈ ಜಲಾಶಯ ಭರ್ತಿಯಾಗುತ್ತದೆ. ಕಳೆದ ವರ್ಷ ಉತ್ತಮ ಮಳೆಯಾಗಿ ಭರ್ತಿಯಾಗಿದ್ದ ಜಲಾಶಯಕ್ಕೆ ಚಿತ್ರನಟ ಪ್ರಕಾಶ್‌ ರೈ ಬಾಗಿನ ಅರ್ಪಿಸಿದ್ದರು. ಈ ಬಾರಿಯೂ ಉತ್ತಮ ಮಳೆ ಆಗುತ್ತಿರುವುದರಿಂದ ಜಲಾಶಯ ಭರ್ತಿಯಾಗಿ ತುಂಬಿ ಹರಿಯುತ್ತಿದೆ. ಸುತ್ತಲೂ ಬೆಟ್ಟಗುಡ್ಡಗಳಿಂದಲೇ ಆವೃತವಾಗಿರುವ ಜಲಾಶಯ, ಇತ್ತೀಚಿನ ದಿನಗಳಲ್ಲಿ ಪ್ರವಾಸಿ ತಾಣವಾಗಿ ಬದಲಾಗುತ್ತಿದೆ. ಇದನ್ನು ಮನಗಂಡ ಅರಣ್ಯ ಇಲಾಖೆಯು ಜಲಾಶಯಕ್ಕೆ ಅಂಟಿಕೊಂಡಂತೆ ಇರುವ ಖಾಲಿ ಸ್ಥಳದಲ್ಲಿ ವೃಕ್ಷವನ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಅದು ನನೆಗುದಿಗೆ ಬಿದ್ದಿದೆ.

ADVERTISEMENT

ಪ್ರಕೃತಿ ಸೌಂದರ್ಯದ ಮೂಲಕ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಈ ಜಲಾಶಯ ಇತ್ತೀಚಿನ ದಿನಗಳಲ್ಲಿ ಅನೈತಿಕ ಚಟುವಟಿಕೆಗಳಿಂದ ಸುದ್ದಿಯಾಗುತ್ತಿದೆ. ಜಲಾಶಯಕ್ಕೆ ಬರುವ ಕೆಲ ಕಿಡಿಗೇಡಿಗಳು ಕುಡಿದು ಎಲ್ಲೆಂದರಲ್ಲಿಮದ್ಯದ ಬಾಟಲಿಗಳನ್ನು ಎಸೆದು ಹೋಗುತ್ತಾರೆ.ವೀಕ್ಷಣಾ ಗೋಪುರದ ಮೇಲೆ ಕುಡುಕರ ಅಟ್ಟಹಾಸ ಎಲ್ಲೆ ಮೀರಿದೆ. ಬಾಟಲಿಗಳನ್ನು ಒಡೆದು ಬಿಸಾಡಿರುವುದರಿಂದ ಕುಟುಂಬ ಸಮೇತರಾಗಿ ಬರುವ ಪ್ರವಾಸಿಗರಿಗೆ ಕಿರಿಕಿರಿ ಉಂಟಾಗಿದೆ.

ವನ್ಯಜೀವಿಗಳ ಜೀವನಾಡಿ: ಮಲೆಮಹದೇಶ್ವರ ವನ್ಯಧಾಮದಲ್ಲಿರುವ ಉಡುತೊರೆ ಜಲಾಶಯ ಬಿಟ್ಟರೆ, ವನ್ಯಪ್ರಾಣಿಗಳ ದಾಹವನ್ನು ಇಂಗಿಸುವಲ್ಲಿ ಈ ಜಲಾಶಯ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಜಲಾಶಯದ ತೀರದಲ್ಲಿ ಕಿಡಿಗೇಡಿಗಳು ಎಸೆದಿರುವ ಮದ್ಯದ ಬಾಟಲಿ ಚೂರುಗಳು ವನ್ಯಪ್ರಾಣಿಗಳ ಕಾಲಿಗೆ ಚುಚ್ಚಿ ಗಾಯಗೊಂಡಿರುವ ಪ್ರಕರಣಗಳು ಸಾಕಷ್ಟು ಜರುಗಿವೆ.

ಇಲ್ಲಿಗೆ ಬರುವ ಕೆಲವುಕಿಡಿಗೇಡಿಗಳು ಪಾನಮತ್ತರಾಗಿ ವನ್ಯಜೀವಿಗಳ ಸ್ವಚ್ಛಂದ ಓಡಾಟಕ್ಕೆಧಕ್ಕೆ ಮಾಡುವುದಲ್ಲದೇ, ಎಲ್ಲೆಂದರಲ್ಲಿಪ್ಲಾಸ್ಟಿಕ್‌ ಹಾಗೂ ಗಾಜಿನ ಬಾಟಲಿಗಳನ್ನು ಎಸೆದು ಹೋಗುತ್ತಿದ್ದಾರೆ ಎಂದು ಇಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿ ದೂರುತ್ತಾರೆ.

‘ತಡೆಯುವುದಕ್ಕೆ ಆಗುತ್ತದೆಯೇ?’

ಈ ವಿಚಾರವಾಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದಸಣ್ಣ ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್‌ ವೆಂಕಟೇಶ್‌, ‘ಕುಡಿದು ಬರುವವರನ್ನು ನಾವು ತಡೆಯುವುದಕ್ಕಾಗುತ್ತದೆಯೇ? ಜಲಾಶಯದಲ್ಲಿ ಗಿಡ ಗಂಟಿಗಳನ್ನು ತೆರವುಗೊಳಿಸುವಾಗ ಅವರು ಎಸೆದಿರುವ ಬಾಟಲಿಗಳನ್ನು ತೆಗೆಯುತ್ತೇವೆ.ಅನೈತಿಕ ಚಟುವಟಿಕೆಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಎರಡು ಸಾವಿರ ಪ್ರದೇಶದಸುತ್ತಲೂ ಸೌರಬೇಲಿ ಹಾಕಲು ಸಾಧ್ಯವೇ? ಅದಕ್ಕೆಲ್ಲಾ ಹಣ ಎಲ್ಲಿಂದ ತರುವುದು?’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.