ADVERTISEMENT

ಬೆಳೆ ಹಾನಿ; ಅಧಿಕಾರಿಗಳ ಜತೆ ಶಾಸಕ ಭೇಟಿ

​ಪ್ರಜಾವಾಣಿ ವಾರ್ತೆ
Published 9 ಮೇ 2022, 15:57 IST
Last Updated 9 ಮೇ 2022, 15:57 IST
ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧಿಕಾರಿಗಳೊಂದಿಗೆ ತಾವರೆಕಟ್ಟೆ ಮೋಳೆ ಗ್ರಾಮದಲ್ಲಿ ಬೆಳೆ ಹಾನಿ ಸಂಭವಿಸಿದ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧಿಕಾರಿಗಳೊಂದಿಗೆ ತಾವರೆಕಟ್ಟೆ ಮೋಳೆ ಗ್ರಾಮದಲ್ಲಿ ಬೆಳೆ ಹಾನಿ ಸಂಭವಿಸಿದ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಚಾಮರಾಜನಗರ: ಎರಡು ದಿನಗಳಿಂದಸುರಿದ ಗಾಳಿ–ಮಳೆಗೆ ಬಾಳೆ, ತೆಂಗು ಬೆಳೆ ಹಾನಿಗೀಡಾದ ತಾಲ್ಲೂಕಿನ ಹರದನಹಳ್ಳಿ ಹೋಬಳಿ ವ್ಯಾಪ್ತಿಯ ತಾವರೆಕಟ್ಟೆ ಮೋಳೆ, ಅಮಚವಾಡಿ ಗ್ರಾಮಗಳ ವಿವಿಧ ಜಮೀನಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹರದನಹಳ್ಳಿ, ತಾವರಕಟ್ಟೆಮೋಳೆ, ಅಮಚವಾಡಿ ಗ್ರಾಮಗಳಲ್ಲಿ ಕಟಾವಿಗೆ ಬಂದಿದ್ದ ಬಾಳೆ ನೆಲಕಚ್ಚಿದ್ದು, 32 ಎಕರೆಯಷ್ಟು ಬೆಳೆ ಹಾನಿಯಾಗಿದೆ.

ಇದೇ ವೇಳೆ ರೈತರು ಮಾತನಾಡಿ ‘ಸಾಲ ಮಾಡಿ ಬೆಳೆ ಹಾಕಿದ್ದೆವು. ಬಿರುಗಾಳಿ ಮಳೆಗೆ ನಮ್ಮ ಫಸಲು ನಷ್ಟವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಆಗಿರುವ ಬೆಳೆಯ ನಷ್ಟದ ಅಂದಾಜನ್ನು ಪರಿಶೀಲಿಸಿ, ಸರ್ಕಾರದಿಂದ ವೈಜ್ಞಾನಿಕ ಪರಿಹಾರ ಮಂಜೂರು ಮಾಡಿಸಿ ಕೊಡಬೇಕು’ ಎಂದು ಶಾಸಕರಿಗೆ ಮನವಿ ಮಾಡಿದರು.

ADVERTISEMENT

‘ಬೆಳೆ ನಾಶದಿಂದ ಕಂಗಾಲಾಗಿರುವ ರೈತರ ಬೆಳೆ ನಷ್ಟದ ಅಂದಾಜನ್ನು ಪರಿಶೀಲಿಸಿ, ಸೂಕ್ತ ಪರಿಹಾರ ಮಂಜೂರಾಗುವ ನಿಟ್ಟಿನಲ್ಲಿ ಸರ್ಕಾರಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳ ಮೂಲಕ ವರದಿ ಸಲ್ಲಿಸಬೇಕು. ಈ ಕೆಲಸ ತುರ್ತಾಗಿ ಆಗಬೇಕು’ ಎಂದು ಸ್ಥಳದಲ್ಲಿ ಹಾಜರಿದ್ದ ತಹಶೀಲ್ದಾರ್, ತೋಟಗಾರಿಕೆ, ಕೃಷಿ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

ತಾಲ್ಲೂಕು ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಸಿದ್ದರಾಜು, ಸಹಾಯಕ ನಿರ್ದೇಶಕ ಕೆಂಪರಾಜು, ಜಂಟಿ ಕೃಷಿ ನಿರ್ದೇಶಕಿ ಎಚ್.ಟಿ.ಚಂದ್ರಕಲಾ, ತಹಶೀಲ್ದಾರ್ ಬಸವರಾಜು, ಮುಖಂಡರಾದ ರಮೇಶ್, ಮಹದೇವಶೆಟ್ಟಿ, ರಾಜಸ್ವ ನಿರೀಕ್ಷಕರು, ಗ್ರಾಮಲೆಕ್ಕಿಗರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.