ADVERTISEMENT

ಬೆಳ್ಳಿ ರಥದಲ್ಲಿ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ; ಕುಣಿದು ಕುಪ್ಪಳಿಸಿದ ಶಾಸಕರು

ಕೊಳ್ಳೇಗಾಲ: ಭೀಮನಗರದಲ್ಲಿ ಅಂಬೇಡ್ಕರ್ ಜಯಂತಿ ಜನ ಜಾತ್ರೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 14:13 IST
Last Updated 14 ಏಪ್ರಿಲ್ 2025, 14:13 IST
ಕೊಳ್ಳೇಗಾಲ ನಗರದ ನ್ಯಾಷನಲ್ ಮಿಡ್ಲಿ ಶಾಲೆಯ ಆವರಣದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜಿಸಿದ್ದ ಡಾ. ಬಿಆರ್ ಅಂಬೇಡ್ಕರ್ ಅವರ 134 ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಶಾಸಕ ಕೃಷ್ಣಮೂರ್ತಿ ಹಾಗೂ ಗಣ್ಯರು ಉದ್ಘಾಟನೆ ಮಾಡಿದರು
ಕೊಳ್ಳೇಗಾಲ ನಗರದ ನ್ಯಾಷನಲ್ ಮಿಡ್ಲಿ ಶಾಲೆಯ ಆವರಣದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜಿಸಿದ್ದ ಡಾ. ಬಿಆರ್ ಅಂಬೇಡ್ಕರ್ ಅವರ 134 ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಶಾಸಕ ಕೃಷ್ಣಮೂರ್ತಿ ಹಾಗೂ ಗಣ್ಯರು ಉದ್ಘಾಟನೆ ಮಾಡಿದರು   

ಕೊಳ್ಳೇಗಾಲ: ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ 134ನೇ ಜಯಂತಿ ಮೆರವಣಿಗೆ ಮೂಲಕ ಸೋಮವಾರ ಅದ್ದೂರಿಯಾಗಿ ನಡೆಯಿತು.

ನಗರದಲ್ಲಿ ಅಲಂಕಾರಗೊಂಡಿದ್ದ ಬೆಳ್ಳಿರಥದಲ್ಲಿ ಅಂಬೇಡ್ಕರ್ ಭಾವಚಿತ್ರ ಇಟ್ಟು ಪುಷ್ಪ ನಮನ ಸಲ್ಲಿಸುವ ಮೂಲಕ ಶಾಸಕ ಎ.ಆರ್.ಕೃಷ್ಣಮೂರ್ತಿ ಚಾಲನೆ ನೀಡಿ ಅಭಿಮಾನಿಗಳೊಂದಿಗೆ ಹೆಜ್ಜೆ ಹಾಕಿದರು.

ಬಳಿಕ ಭೀಮನಗರದಿಂದ ವಿವಿಧ ಕಲಾತಂಡಗಳೊಂದಿಗೆ ಹೊರಟ ಬೆಳ್ಳಿರಥದ ಮೆರವಣಿಗೆ ಆನಂದ ಜ್ಯೋತಿ ಕಾಲೋನಿ ರಸ್ತೆ, ಬೆಂಗಳೂರು ರಸ್ತೆ, ಡಾ.ಅಂಬೇಡ್ಕರ್ ಪ್ರತಿಮೆ ವೃತ್ತ, ಅಂಬೇಡ್ಕರ್ ರಸ್ತೆ, ಡಾ.ರಾಜಕುಮಾರ್ ರಸ್ತೆ, ಡಾ.ವಿಷ್ಣುವರ್ಧನ್ ರಸ್ತೆ, ಗುರುಕಾರ್ ವೃತ್ತ, ಎಂ.ಜಿ‌.ಎಸ್.ವಿ ರಸ್ತೆ ಮೂಲಕ ಸಾಗಿ ನ್ಯಾಷನಲ್ ಮಿಡ್ಲಿ ಶಾಲಾ ಮೈದಾನಕ್ಕೆ ತಲುಪಿತು.

4 ಸಾವಿರಕ್ಕೂ ಹೆಚ್ಚು ಜನ ಭಾಗಿ

 ತಾಲ್ಲೂಕಿನ 50ಕ್ಕೂ ಹೆಚ್ಚು ಗ್ರಾಮದವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮೆರವಣಿಗೆ ಉದ್ದಕ್ಕೂ ಮಜ್ಜಿಗೆ, ಪಾನಕ, ಕೋಸಂಬರಿ, ಬಾತ್, ಮೊಸರನ್ನ, ಕೇಸರಿಬಾತು, ಉಪ್ಪಿಟ್ಟು, ಕಲ್ಲಂಗರಿ ಹಣ್ಣು, ಬಾಳೆಹಣ್ಣು, ಮಿಣಕೆ ಹಣ್ಣು, ಐಸ್ ಕ್ರೀಮ್, ವಿವಿಧ ಬಗೆಯ ಸ್ವೀಟ್ ಸೇರಿದಂತೆ ದಾರಿ ಉದ್ದಕ್ಕೂ ಸಹ ಸ್ವಯಂ ಪ್ರೇರಿತರಾಗಿ ಕಾರು ಚಾಲಕ ಸಂಘದವರು, ಆಟೋ ಚಾಲಕ ಸಂಘದವರು, ಸೇರಿ ಅನೇಕ ಕೋಮಿನವರು ವಿತರಿಸಿದರು.

ನಂತರ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎ.ಆರ್.ಕೃಷ್ಣಮೂರ್ತಿ, ‘ವಿಶ್ವಕ್ಕೆ ಅತ್ಯಂತ ಶ್ರೇಷ್ಠ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ನೀಡಿದ್ದಾರೆ’ ಎಂದರು.

‘ಅಂಬೇಡ್ಕರ್ ಎಂದರೆ ಶಕ್ತಿ, ಬೆಳಕು, ಧೈರ್ಯ, ಜ್ಞಾನ, ಶ್ರೇಷ್ಠ, ಸಮಾನತೆ. ಪ್ರತಿಯೊಬ್ಬರೂ ಅವರ ತತ್ವ ಸಿದ್ಧಾಂತ ಪಾಲಿಸಬೇಕು. ಎಲ್ಲರಿಗೂ ಸಮಾನತೆ ಮುಖ್ಯ ಎಂದು ಸಂದೇಶ ಸಾರಿ ಅಸಮಾನತೆ ವಿರುದ್ಧ ಹೋರಾಡಿದ ಮಹಾನ್ ನಾಯಕ’ಎಂದರು.

ಕಾರ್ಯಕ್ರಮದಲ್ಲಿ ಚೆನ್ನಾಲಿಂಗನಹಳ್ಳಿ ಜೇತವನ ಬುದ್ಧವಿಹಾರ ಪೂಜ್ಯ ಮನೋರಖೀತ ಬಂತೇಜಿ ಅವರ ದಿವ್ಯ ಸಾನಿಧ್ಯ ವಹಿಸಿದ್ದರು. ಮುಖ್ಯ ಭಾಷಣಕಾರರಾಗಿ ಬೆಂಗಳೂರು ಪ್ರಾಧಿಕಾರ ಕನ್ನಡ ಪುಸ್ತಕ ಮಾಜಿ ಅಧ್ಯಕ್ಷ, ಸಾಹಿತಿಗಳು ಡಾ.ಬಂಜೆಗೆರೆ ಜಯಪ್ರಕಾಶ್ ಮಾತನಾಡಿದರು.

ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ.ಪಿ.ಶಂಕರ್, ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷೆ ರಾಜೇಂದ್ರ, ಭೀಮ ನಗರದ ದಲಿತ ಮುಖಂಡ ಚಿಕ್ಕಮಾಳಿಗೆ, ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್, ತಹಶಿಲ್ದಾರ್ ಬಸವರಾಜು, ತಾ.ಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಡಿವೈಎಸ್ಪಿ ಧರ್ಮೇಂದ್ರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೇಶವಮೂರ್ತಿ, ಬಿಇಒ ಮಂಜುಳಾ ಇದ್ದರು.

ADVERTISEMENT
ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗಿ.
ಡಾಕ್ಟರ್ ಬಿ ಆರ್ ಅಂಬೇಡ್ಕರ್ ಪ್ರತಿಮೆಗೆ ಶಾಸಕರು ಹಾಗೂ ಗಣ್ಯರು ಮಾಲಾರ್ಪಣೆ ಮಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.