ADVERTISEMENT

97 ಬಸ್ ಸಂಚಾರ, 200ಕ್ಕೂ ಹೆಚ್ಚು ನೌಕರರು ಹಾಜರಿ

ಮುಷ್ಕರದ ಐದನೇ ದಿನ, ಪ್ರಯಾಣಿಕರ ಸಂಖ್ಯೆ ಕಡಿಮೆ, ಖಾಸಗಿ ಬಸ್‌ ಜೊತೆ ಜಂಟಿ ಸಂಚಾರ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 13:54 IST
Last Updated 11 ಏಪ್ರಿಲ್ 2021, 13:54 IST
ಚಾಮರಾಜನಗರದ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಭಾನುವಾರ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಖ್ಯೆ ಹೆಚ್ಚಿತ್ತು
ಚಾಮರಾಜನಗರದ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಭಾನುವಾರ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಖ್ಯೆ ಹೆಚ್ಚಿತ್ತು   

ಚಾಮರಾಜನಗರ: ಸಾರಿಗೆ ನೌಕರರ ಮುಷ್ಕರದ ನಡುವೆಯೇ, ಕೆಲಸಕ್ಕೆ ಹಾಜರಾಗುತ್ತಿರುವ ನೌಕರರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದ್ದು, ಭಾನುವಾರ 200ಕ್ಕೂ ಹೆಚ್ಚು ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಚಾಮರಾಜನಗರ ವಿಭಾಗದಲ್ಲಿ ಸಂಜೆ 6 ಗಂಟೆಯವರೆಗೆ 97 ಬಸ್‌ಗಳು ಓಡಾಟ ನಡೆಸಿವೆ. ನಗರದ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಖ್ಯೆ ಹೆಚ್ಚು ಕಂಡು ಬಂತು.

ಖಾಸಗಿ ಬಸ್‌ಗಳು ಕೂಡ ನಿಲ್ದಾಣದಿಂದಲೇ ಕಾರ್ಯಾಚರಿಸಿದವು. ಭಾನುವಾರ ರಜಾ ದಿನವಾಗಿದ್ದರಿಂದ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು.

ADVERTISEMENT

‘ಶನಿವಾರಕ್ಕಿಂತ ಹೆಚ್ಚು ನೌಕರರು ಕೆಲಸಕ್ಕೆ ಹಾಜರಾಗಿದ್ದಾರೆ. ಅಂದಾಜು 100 ಬಸ್‌ಗಳು ಓಡಾಟ ನಡೆಸಿವೆ. ಸೋಮವಾರ ಮತ್ತಷ್ಟು ಹೆಚ್ಚು ನೌಕರರು ಕರ್ತವ್ಯಕ್ಕೆ ಹಾಜರಾಗುವ ನಿರೀಕ್ಷೆ ಇದೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಬಿ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಾರ್ಚ್‌ ವೇತನ ಬಿಡುಗಡೆ: ನೌಕರರು ಮುಷ್ಕರ ಆರಂಭಿಸಿದ್ದರಿಂದ ಕೆಎಸ್‌ಆರ್‌ಟಿಸಿಯು ಎಲ್ಲರ ವೇತನ ತಡೆ ಹಿಡಿದಿತ್ತು. ಈಗ ಕರ್ತವ್ಯಕ್ಕೆ ಹಾಜರಾಗುತ್ತಿರುವವರ ವೇತನವನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಈ ಸಂಬಂಧ ಸೋಮವಾರ ಆದೇಶ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಚಾಮರಾಜನಗರ ವಿಭಾಗದಲ್ಲಿ ಮುಷ್ಕರ ನಿರತ 67 ನೌಕರರನ್ನು ವರ್ಗಾವಣೆ ಮಾಡಲಾಗಿದೆ ಎಂದು ನೌಕರರು ಆರೋಪಿಸಿದ್ದಾರೆ. ಇದನ್ನು ನಿರಾಕರಿಸಿರುವ ಶ್ರೀನಿವಾಸ ಅವರು, 25 ಮಂದಿಯನ್ನಷ್ಟೇ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು.

ಅಂಗವಿಕಲ ನೌಕರನ ವರ್ಗಾವಣೆಗೆ ಆಕ್ಷೇಪ

ನೌಕರರಿಗೆ ಮುಷ್ಕರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಚಾಮರಾಜನಗರ ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿಯಲ್ಲಿ ಕಿರಿಯ ಸಹಾಯಕ ಮತ್ತು ಡಾಟಾ ಎಂಟ್ರಿ ಆಪ‍ರೇಟರ್‌ ಆಗಿರುವ ರಾಮಣ್ಣ ಎಂಬುವವರನ್ನು ದಾವ‌ಣೆಗೆರೆಗೆ ವರ್ಗಾವಣೆ ಮಾಡಲಾಗಿದೆ.

‘ರಾಮಣ್ಣ ಅವರು ಅಂಗವಿಕಲರಾಗಿದ್ದು, ಅವರು ಇಚ್ಛೆ ಪಟ್ಟರೆ ಮಾತ್ರ ವರ್ಗಾವಣೆ ಮಾಡಬಹುದು. ಕೋವಿಡ್‌ ಸಂದರ್ಭದಲ್ಲಿ ಅಂಗವಿಕಲ ನೌಕರರನ್ನು ಎಲ್ಲಿಗೂ ಕಳುಹಿಸುವಂತಿಲ್ಲ ಎಂಬ ಸುತ್ತೋಲೆಯೂ ಇದೆ. ಹಾಗಿದ್ದರೂ ಅವರನ್ನು ವರ್ಗಾವಣೆ ಮಾಡಲಾಗಿದೆ’ ಎಂದು ನೌಕರರು ಆರೋಪಿಸಿದ್ದಾರೆ.

‘ಮಾರ್ಚ್‌ 30ರಿಂದ ಏಪ್ರಿಲ್‌ 10ರವರೆಗೆ ನಾನು ರಜೆ ಹಾಕಿದ್ದೆ. ಕಾರಣವಿಲ್ಲದೇ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಆದೇಶವನ್ನು ಅಧಿಕೃತವಾಗಿ ನನಗೆ ನೀಡಿಲ್ಲ. ವಾಟ್ಸ್‌ಆ್ಯಪ್‌ನಲ್ಲಿ ಬಂದಿದೆ. ತರಾತುರಿಯಲ್ಲಿ ಬಿಡುಗಡೆ ಆದೇಶವನ್ನೂ ನೀಡಲಾಗಿದೆ. ಇದು ಅಂಗವಿಕಲರಿಗೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆ. ಇದನ್ನು ಅಂಗವಿಕಲರ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆ’ ಎಂದು ರಾಮಣ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಬಿ. ಅವರು, ‘ರಾಮಣ್ಣ ಅವರು ನೌಕರರಿಗೆ ಪ್ರಚೋದನೆ ನೀಡಿರುವುದಕ್ಕೆ ನಮ್ಮ ಬಳಿ ದಾಖಲೆಗಳಿವೆ. ಆಡಳಿತ ಮಂಡಳಿ ವಿರೋಧ ಕೃತ್ಯಗಳಲ್ಲಿ ಅವರು ತೊಡಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.