ಕೊಳ್ಳೇಗಾಲ: ‘ರಾಹುಲ್ ಗಾಂಧಿ ಅವರು ಮತಗಳ್ಳತನ ವಿರುದ್ಧ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದ ಮಾತು’ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಅಧಿಕ ಮತಗಳ್ಳತನ ನಡೆದು ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಇದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಒಂದು ವೇಳೆ ಮತಗಳ್ಳತನ ನಡೆದಿದ್ದರೆ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗಕ್ಕೆ ಅಥವಾ ನ್ಯಾಯಾಲಯಕ್ಕೆ ದೂರು ನೀಡಬೇಕು. ಸುದ್ದಿಗೋಷ್ಠಿ ಮಾಡುವುದು ಹಾಗೂ ಬಹಿರಂಗ ಸಭೆ ಮಾಡುವುದು ಸರಿಯಲ್ಲ. ಚುನಾವಣೆ ನಡೆದು ಒಂದೂವರೆ ವರ್ಷಕ್ಕೂ ಹೆಚ್ಚು ದಿನ ಕಳೆದಿದೆ. ಚುನಾವಣಾ ಫಲಿತಾಂಶ ಬಂದ ಸಂದರ್ಭದಲ್ಲಿ ಪ್ರಶ್ನೆ ಮಾಡುವುದು ಬಿಟ್ಟು ಈಗ ಮಾಡುತ್ತಿರುವುದು ಸರಿಯೇ ಎಂದು ಕೇಳಿದರು.
1971ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾಗಾಂಧಿ ಅವರು ಸ್ಪರ್ಧೆ ಮಾಡಿ ಗೆದ್ದರು. ಇವರ ವಿರುದ್ಧ ಚುನಾವಣೆಗೆ ನಿಂತ ರಾಜ ನಾರಾಯಣ ಸೋತರು. ನಂತರ ಇವರು ಅಲಹಾಬಾದ್ ಹೈಕೋರ್ಟ್‌ನಲ್ಲಿ ಇಂದಿರಾಗಾಂಧಿ ಅವರು ಅಕ್ರಮವಾಗಿ ಮತಗಳ್ಳತನ ಮಾಡಿ ಗೆದ್ದಿದ್ದಾರೆ, ಸರ್ಕಾರಿ ಮತಯಂತ್ರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದೂರು ನೀಡಿದರು. 1975ರಲ್ಲಿ ನಾಲ್ಕು ವರ್ಷಗಳ ನಂತರ ಇಂದಿರಾ ಗಾಂಧಿ ಅಕ್ರಮವಾಗಿ ಮತಗಳ್ಳತನ ಮಾಡಿರುವುದು ಸಾಬೀತಾಯಿತು. ಇದಾದ ನಂತರ ನ್ಯಾಯಾಲಯ ಮುಂದಿನ ಆರು ವರ್ಷ ಚುನಾವಣೆಯಲ್ಲಿ ನಿಲ್ಲಬಾರದು ಎಂದು ತೀರ್ಪು ನೀಡಿತು. ಇದರ ಬೆನ್ನಲ್ಲೇ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದರು. ಇದು ನ್ಯಾಯವೇ? ಅವರ ಕುಟುಂಬದಲ್ಲಿಯೇ ಮತಗಳ್ಳತನ ಮಾಡಿದ್ದಾರೆ. ಇದನ್ನು ರಾಹುಲ್ ಗಾಂಧಿ ತಿಳಿದುಕೊಳ್ಳಬೇಕು ಎಂದು ಹೇಳಿದರು.
ರಾಹುಲ್ ಗಾಂಧಿ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ಯಾಟಿಂಗ್ ಮಾಡುತ್ತಿದ್ದಾರೆ ಇದು ಸರಿಯಲ್ಲ ಎಂದರು.
ಬಿಜೆಪಿ ಎಸ್‌ಸಿ ಘಟಕದ ಅಧ್ಯಕ್ಷ ಸಿದ್ದಪ್ಪಾಜಿ, ಮುಖಂಡ ಸೋಮಣ್ಣ ಉಪ್ಪಾರ್, ವಿಜಯ್, ಶಿವಣ್ಣ ಇದ್ದರು.
‘ತಪ್ಪು ಗ್ರಹಿಕೆ ಸೃಷ್ಟಿಸುವ ತಂತ್ರ’
ಇದು ಒಂದು ರೀತಿ ಸಾರ್ವಜನಿಕರ ನಡುವೆ ತಪ್ಪು ಗ್ರಹಿಕೆ ಸೃಷ್ಟಿಸುವ ಕುತಂತ್ರ. ಕರ್ನಾಟಕ ನೂತನ ಚುನಾವಣಾ ಆಯೋಗದ ಆಯುಕ್ತ ಅನ್ಬು ಕುಮಾರ್ ಅವರು ರಾಹುಲ್ ಗಾಂಧಿಗೆ ಮನವಿ ಮಾಡಿದ್ದಾರೆ. ನೀವು ಈಗ ಏನು ಬಹಿರಂಗವಾಗಿ ಆರೋಪ ಮಾಡುತ್ತಿದ್ದೀರಾ ಅದನ್ನು ಅಫಿಡವಿಟ್ ಮೂಲಕ ಸಲ್ಲಿಸಿ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಆದರೂ ರಾಹುಲ್ ಗಾಂಧಿಯವರು ಸಾರ್ವಜನಿಕರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.