ADVERTISEMENT

ಬೀಡಾಡಿ ಹಸುಗಳಿಂದ ಸಾರ್ವಜನಿಕರಿಗೆ ತೊಂದರೆ

ಚಾಮರಾಜನಗರ: ಪ್ರಮುಖ ರಸ್ತೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಜಾನುವಾರುಗಳ ಓಡಾಟ

ರವಿ ಎನ್‌
Published 9 ಜೂನ್ 2019, 19:30 IST
Last Updated 9 ಜೂನ್ 2019, 19:30 IST
ಬಿ.ರಾಚಯ್ಯ ಜೋಡಿರಸ್ತೆ ಬದಿಯಲ್ಲಿ ವಿಶ್ರಮಿಸುತ್ತಿರುವ ಹಸುಗಳು
ಬಿ.ರಾಚಯ್ಯ ಜೋಡಿರಸ್ತೆ ಬದಿಯಲ್ಲಿ ವಿಶ್ರಮಿಸುತ್ತಿರುವ ಹಸುಗಳು   

ಚಾಮರಾಜನಗರ: ಕಾಂಕ್ರೀಟೀಕರಣ ಆದ ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ಹೆಚ್ಚಾಗಿರುವ ಬೆನ್ನಲ್ಲೇ ಬೀಡಾಡಿ ಹಸುಗಳ ಓಡಾಟವೂ ಹೆಚ್ಚಾಗುತ್ತಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ.

ಬಿ.ರಾಚಯ್ಯ ಜೋಡಿರಸ್ತೆ, ಭುವನೇಶ್ವರಿ ವೃತ್ತ, ಗುಂಡ್ಲುಪೇಟೆ ವೃತ್ತ, ಸತ್ತಿ ರಸ್ತೆ, ಸೋಮವಾರ ಪೇಟೆ, ಸಂತೇಮರಹಳ್ಳಿ ವೃತ್ತದಿಂದ ತಿ.ನರಸೀಪುರ ರಸ್ತೆ,ನಂಜನಗೂಡು ರಸ್ತೆಗಳಲ್ಲಿ ಹಸುಗಳು ಎಲ್ಲೆಂದರಲ್ಲಿ ಓಡಾಡುತ್ತವೆ.

ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಂಡು ಬರುವ ಜಾನುವಾರುಗಳಲ್ಲಿ ಸಾಕು ಹಸುಗಳೇ ಹೆಚ್ಚು. ಪ್ರತಿ ದಿನ ಬೆಳಿಗ್ಗೆ ಹಾಲು ಬಳಿಕ ಮಾಲೀಕರು ದನಗಳನ್ನು ಬೀದಿಗೆ ಅಟ್ಟುತ್ತಾರೆ.ಇದರ ಪರಿಣಾಮವಾಹನ ಸವಾರರು ಪರದಾಡುವಂತಾಗಿದೆ. ಜಾನುವಾರುಗಳು ಅಡ್ಡಬಂದು ಅಪಘಾತ ಸಂಭವಿಸಿದ ನಿದರ್ಶನಗಳೂ ಉಂಟು.

ADVERTISEMENT

‘ಕೆಲವೊಮ್ಮೆ ಹಸುಗಳು ರಸ್ತೆ ಮಧ್ಯದಲ್ಲಿ ನಿಂತಿದ್ದನ್ನು ಕಂಡು ಗಲಿಬಿಲಿಗೊಂಡ ದ್ವಿಚಕ್ರ ವಾಹನ ಸವಾರರು ಬ್ರೇಕ್‌ ಹಾಕಿಬಿದ್ದು ಸಣ್ಣ ಪುಟ್ಟ ಗಾಯ ಮಾಡಿಕೊಂಡ ಉದಾಹರಣೆಗಳು ಇವೆ. ಕಾರು, ಬಸ್‌ ಮತ್ತಿತರ ವಾಹನಗಳೂ ಸಣ್ಣ ಪ್ರಮಾಣದ ಅಪಘಾತಕ್ಕೆ ಒಳಗಾಗಿದ್ದು, ಮನುಷ್ಯರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ದನಗಳಿಗೂ ಪೆಟ್ಟಾಗಿರುವುದು ಕಂಡು ಬಂದಿದೆ. ಆದರೂ, ಜಾನುವಾರುಗಳ ಮಾಲೀಕರು ಇನ್ನೂ ಎಚ್ಚೆತ್ತುಕೊಳ್ಳುತ್ತಿಲ್ಲ’ ಎಂದು ತಳ್ಳುಗಾಡಿ ಬಾಳೆಹಣ್ಣು ಮಾರಾಟಗಾರ ಮಹೇಶ್ ಹೇಳುತ್ತಾರೆ.

ಆಹಾರ: ‘ಅನೇಕ ಜಾನುವಾರುಗಳಿಗೆ ನಾನು ಬಾಳೆಹಣ್ಣಿನ ಸಿಪ್ಪೆ ಹಾಗೂ ಹಣ್ಣನ್ನು ಕೊಡುತ್ತೇನೆ. ಅವುಗಳು ಆಹಾರಕ್ಕಾಗಿನಗರ ಸುತ್ತುತ್ತವೆ. ಹೋಟೆಲ್‌ ಮಾಲೀಕರು, ತಳ್ಳುಗಾಡಿಯವರು, ಚಿಲ್ಲರೆ ಅಂಗಡಿ ವ್ಯಾಪಾರರು ಏನಾದರೂ ಆಹಾರ ನೀಡುತ್ತಾರೆ. ಎಲ್ಲವನ್ನು ತಿಂದು ಮುಂದೆ ಹೋಗುತ್ತವೆ’ ಎಂದು ಅವರು ಹೇಳಿದರು.

ವಿಭಜಕದ ನಡುವೆ ವಿಶ್ರಾಂತಿ: ‘ರಸ್ತೆಯಲ್ಲಿನ ವಿಭಜಕಗಳ ಬಳಿಯೇ ಹಸುಗಳು ವಿಶ್ರಾಂತಿ ಪಡೆಯುತ್ತವೆ. ಹೋಟೆಲ್‌, ಅಂಗಡಿಗಳ ಎದುರೂ ವಿಶ್ರಮಿಸುತ್ತವೆ. ವಾಹನ ನಿಲುಗಡೆ ವೇಳೆ ಅವುಗಳು ಎದ್ದು ಹೋಗುವಾಗಲೂ ರಸ್ತೆಯಲ್ಲಿ ಬರುವವರಿಗೆ, ಸಂಚರಿಸುವ ವಾಹನ ಸವಾರರು ಸಮಸ್ಯೆ ಎದುರಿಸುವಂತಾಗಿದೆ’ ಎನ್ನುತ್ತಾರೆಅಂಗಡಿ ಮಾಲೀಕರು.

ಸಂಚಾರ ಅಸ್ತವ್ಯಸ್ತ: ‘ಕೆಲ ಸಂದರ್ಭದಲ್ಲಿ ಸಿಗ್ನಲ್‌ ಇರುವಾಗ ದನಗಳು ರಸ್ತೆ ನಡುವೆ ಹಾದುಹೋಗುತ್ತವೆ. ಆಗ ಯಾವುದೇ ತೊಂದರೆ ಇಲ್ಲ. ಆದರೆ, ಮತ್ತೊಂದು ಸಿಗ್ನಲ್‌ ಬಿದ್ದಾಗ ವಾಹನ ದಟ್ಟಣೆ ಹೆಚ್ಚುತ್ತದೆ. ಇದರಿಂದ ಅನೇಕ ಬಾರಿ ಸಮಸ್ಯೆ ಎದುರಾಗಿದೆ. ಈಗ ಭುವನೇಶ್ವರಿ ವೃತ್ತ ಸೇರಿದಂತೆ ವಿವಿಧ ಕಡೆಗಳಲ್ಲಿ ಸಿಗ್ನಲ್‌ ಅಳವಡಿಸಲಾಗಿದೆ. ಜಾನುವಾರು ಮಾಲೀಕರು ಹಸುಗಳನ್ನು ತಮ್ಮ ಮನೆಯಲ್ಲೇ ಇರಿಸಿಕೊಳ್ಳಬೇಕು. ಇಲ್ಲವಾದರೆ ಸಮಸ್ಯೆ ಎದುರಾಗುತ್ತದೆ’ ಎಂದು ಭುವನೇಶ್ವರಿ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರ ಪೊಲೀಸ್‌ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮನವಿಗೆ ಕಿವಿಗೊಡದ ಜನ: ಹಸುಗಳು, ಹಂದಿಗಳು, ನಾಯಿಗಳು ಸೇರಿದಂತೆ ಸಾಕು ಪ್ರಾಣಿಗಳನ್ನು ನಗರದ ನಿವಾಸಿಗಳು ಸಾರ್ವಜನಿಕ ಸ್ಥಳಗಳಿಗೆ ಬಿಡಬಾರದು ಎಂದು ನಗರಸಭೆ ಹಲವು ಬಾರಿ ಹೇಳಿದೆ. ಆದರೂ ಜಾನುವಾರುಗಳ ಮಾಲೀಕರು ಈ ಬಗ್ಗೆ ಗಮನ ಹರಿಸುತ್ತಿಲ್ಲ.

‘ಗೋಶಾಲೆ ತೆರೆಯಬೇಕು, ಹರಾಜು ಹಾಕಬೇಕು’
‘ಒಮ್ಮೊಮ್ಮೆ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್‌ಗಳ ಸಂಚಾರಕ್ಕೂ ದನಗಳು ಅಡ್ಡಪಡಿಸುತ್ತವೆ. ಜಿಲ್ಲಾ ಕೇಂದ್ರದ ಸಮೀಪವೇ ಗೋ ಶಾಲೆತೆರೆದುಅಲ್ಲಿಯೇ ಎಲ್ಲ ಜಾನುವಾರುಗಳ ಪೋಷಣೆಗೆಸಂಬಂಧಪಟ್ಟವರು ಮುಂದಾಗಬೇಕು’ ಎನ್ನುವುದು ಸೋಮವಾರಪೇಟೆ ನವೀನ್‌ ಅವರ ಸಲಹೆ.

‘ಕೆಲವರು ತಮ್ಮ ಜಾನುವಾರಗಳನ್ನು ರಾತ್ರಿ ವೇಳೆಯಲ್ಲೂ ಮನೆಯತ್ತ ಕರೆದುಕೊಂಡು ಹೋಗದೆ ಬೇಜವಾಬ್ದಾರಿತನ ಮೆರೆಯುತ್ತಾರೆ. ಬೀಡಾಡಿ ದನಗಳನ್ನು ನಗರಸಭೆ ಆಡಳಿತ ಸಿಬ್ಬಂದಿ ಹಿಡಿದು ಹರಾಜು ಹಾಕುವ ವ್ಯವಸ್ಥೆ ಮಾಡಬೇಕು.ಒಮ್ಮೆ ಈ ರೀತಿ ಮಾಡಿದರೆ ತಕ್ಷಣವೇ ಜಾನುವಾರು ಮಾಲೀಕರು ಎಚ್ಚೆತ್ತುಕೊಳ್ಳಬಹುದು’ ಎಂದು ನಗರ ನಿವಾಸಿ ಕುಮಾರ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.