ADVERTISEMENT

ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಭ್ರಮ; ಶೇ 66.69 ಹಾಜರಿ

ಅದ್ಧೂರಿಯಾಗಿ ಸ್ವಾಗತಿಸಿದ ಶಿಕ್ಷಕರು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 16:16 IST
Last Updated 25 ಅಕ್ಟೋಬರ್ 2021, 16:16 IST
ಚಾಮರಾಜನಗರದ ಉಪ್ಪಾರ ಬೀದಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ದೊಡ್ಡ ರಂಗೋಲಿ ಬಿಡಿಸಿ ಮಕ್ಕಳನ್ನು ತರಗತಿಗಳಿಗೆ ಸ್ವಾಗತಿಸಿದರು
ಚಾಮರಾಜನಗರದ ಉಪ್ಪಾರ ಬೀದಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ದೊಡ್ಡ ರಂಗೋಲಿ ಬಿಡಿಸಿ ಮಕ್ಕಳನ್ನು ತರಗತಿಗಳಿಗೆ ಸ್ವಾಗತಿಸಿದರು   

ಚಾಮರಾಜನಗರ: ಜಿಲ್ಲೆಯಾದ್ಯಂತ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಚಿಣ್ಣರ ಚಿಲಿಪಿಲಿ ಸೋಮವಾರದಿಂದಆರಂಭವಾಗಿದೆ.1ರಿಂದ 5ನೇ ತರಗತಿಯ ಮಕ್ಕಳಿಗೆ ಭೌತಿಕ ತರಗತಿಗಳು ಶುರುವಾಗಿದ್ದು, ಮಕ್ಕಳು ಸಂಭ್ರಮದಿಂದಲೇ ಮೊದಲ ದಿನ ತರಗತಿಗಳಿಗೆ ಹಾಜರಾದರು.

ಒಂದೂವರೆ ವರ್ಷಗಳ ನಂತರ ಶಾಲೆಗಳತ್ತ ಹೆಜ್ಜೆ ಹಾಕಿದ ಮಕ್ಕಳನ್ನು ಶಿಕ್ಷಕರು, ಶಾಲೆಯ ಆಡಳಿತ ಮಂಡಳಿಯ ಸದಸ್ಯರು ಪ್ರೀತಿಯಿಂದ ಅದ್ಧೂರಿಯಾಗಿ ಸ್ವಾತಿಸಿದರು.

ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 911 ಕಿರಿಯ ಪ್ರಾಥಮಿಕ ಹಾಗೂ ಹಿರಿಯಪ್ರಾಥಮಿಕ ಶಾಲೆಗಳಿವೆ. 1ರಿಂದ 5ನೇ ತರಗತಿವರೆಗೆ 58,533 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಈ ಪೈಕಿ ಮೊದಲ ದಿನ 37,581 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಶೇಕಡವಾರು ಲೆಕ್ಕಾಚಾರದಲ್ಲಿ ಶೇ 66.69 ಮಕ್ಕಳು ಶಾಲೆಗೆ ಭೌತಿಕ ತರಗತಿಗಳಿಗೆ ಸೋಮವಾರ ಬಂದಿದ್ದಾರೆ.

ADVERTISEMENT

ಚಾಮರಾಜನಗರ ತಾಲ್ಲೂಕಿನಲ್ಲಿ ಶೇ 56.3, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಶೇ 63.3ರಷ್ಟು, ಹನೂರಿನಲ್ಲಿ ಶೇ 73.57,ಕೊಳ್ಳೇಗಾಲದಲ್ಲಿ ಶೇ 64 ಹಾಗೂ ಯಳಂದೂರು ತಾಲ್ಲೂಕಿನಲ್ಲಿ ಶೇ 64.62 ಮಕ್ಕಳು ಹಾಜರಾಗಿದ್ದಾರೆ.

ಹಬ್ಬದ ವಾತಾವರಣ: ಮಕ್ಕಳ ಸ್ವಾಗತಕ್ಕಾಗಿ ಶಿಕ್ಷಕರು ಹಾಗೂ ಶಾಲೆಗಳ ಆಡಳಿತ ಮಂಡಳಿ ಶನಿವಾರವೇ ಸಿದ್ಧತೆ ನಡೆಸಿದ್ದರು. ಶಾಲೆಗಳ ಕೊಠಡಿಗಳನ್ನು ಶನಿವಾರವೇ ಸ್ವಚ್ಛಗೊಳಿಸಿ, ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿತ್ತು. ಸೋಮವಾರ ಶಾಲೆಗಳಲ್ಲಿ ಹಬ್ಬದ ವಾತಾವರಣ ಕಂಡು ಬಂತು.ಶಾಲೆಗಳನ್ನು ಬಾಳೆಕಂದು, ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಚಿಣ್ಣರ ಸ್ವಾಗತಕ್ಕಾಗಿ ಶಾಲಾ ಆವರಣವನ್ನು ರಂಗೋಲಿಗಳಿಂದ ಅಲಂಕರಿಸಲಾಗಿತ್ತು.

ಒಂದೂವರೆ ವರ್ಷದ ಬಳಿಕ ಶಾಲೆ ಆರಂಭವಾಗುತ್ತಿರುವುದರಿಂದ ಬಹುತೇಕ ಮಕ್ಕಳ ಪೋಷಕರು, ಚಿಣ್ಣರನ್ನು ಶಾಲೆವರೆಗೆ ಬಿಟ್ಟು ಬಂದರು. ಮಕ್ಕಳಿಗೆ ಹೂವು ನೀಡಿ, ಸಿಹಿ ನೀಡಿ ಶಿಕ್ಷಕರು ಬರಮಾಡಿಕೊಂಡರು. ಯಳಂದೂರು ತಾಲ್ಲೂಕಿನ ಹೊನ್ನೂರು ಸೇರಿದಂತೆ ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಪೂರ್ಣಕುಂಭಸ್ವಾಗತ ಕೋರಲಾಯಿತು. ಸರತಿ ಸಾಲಿನಲ್ಲಿ ಬಂದ ಮಕ್ಕಳಿಗೆ ಶಿಕ್ಷಕಿಯರು ಆರತಿ ಬೆಳಗಿ ಸ್ವಾಗತಿಸಿದರು.

ವಿಭಿನ್ನ ಸ್ವಾಗತ:ಚಾಮರಾಜನಗರತಾಲ್ಲೂಕಿನ ಬೂದಂಬಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ಅಲಂಕೃತ ಎತ್ತಿನ ಗಾಡಿಗಳಲ್ಲಿಮೆರವಣಿಗೆಯ ಮೂಲಕ ಶಾಲೆಗೆ ಕರೆತರಲಾಯಿತು.

ಕೊಳ್ಳೇಗಾಲ ತಾಲ್ಲೂಕಿನ ಇಕ್ಕಡಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅಲ್ಲಿನ ಶಿಕ್ಷಕರು ಪ್ರತಿ ಮಕ್ಕಳಿಗೆ ಹುಲಿಯ ಮುಖವಾಡ ತೊಡಿಸಿ, ಅವರಿಂದ ಹುಲಿ ನೃತ್ಯ ಮಾಡಿಸಿ ಸ್ವಾಗತಿಸಿದರು. ನಂತರ ಶಿಕ್ಷಕರು ಕೂಡ ಹುಲಿಯ ಮುಖವಾಡ ಧರಿಸಿ, ಮಕ್ಕಳೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಚಿನ್ನಾಟ:ಕೋವಿಡ್ ಕಾರಣದಿಂದ 18 ತಿಂಗಳುಗಳಿಂದ ಸಹಪಾಠಿಗಳಿಂದ ದೂರ ಇದ್ದ ಮಕ್ಕಳು, ಸ್ನೇಹಿತರೊಂದಿಗೆ ಸೇರಿ ಶಾಲಾ ಮೊಗಸಾಲೆ, ಮೈದಾನದಲ್ಲಿ ಓಡಾಡುತ್ತಿದ್ದುದು ಕಂಡು ಬಂತು.

ಕೋವಿಡ್‌ ಸೂಚನೆ ಪಾಲನೆ: ಕೋವಿಡ್‌ ಮುಂಜಾಗ್ರತಾ ಕ್ರಮವಾಗಿ ಮಕ್ಕಳು ಮಾಸ್ಕ್‌ ಧರಿಸಿದ್ದರು. ತರಗತಿ ಪ್ರವೇಶಿಸುವುದಕ್ಕೂ ಮುನ್ನ ಎಲ್ಲ ವಿದ್ಯಾರ್ಥಿಗಳ ಥರ್ಮಲ್‌ ಸ್ಕ್ರೀನಿಂಗ್‌ ನಡೆಸಲಾಯಿತು. ಸ್ಯಾನಿಟೈಸರ್ ನೀಡಲಾಯಿತು. ತರಗತಿಗಳಲ್ಲಿ ದೈಹಿಕ ಅಂತರ ಕಾಪಾಡುವುದಕ್ಕೂ ಶಿಕ್ಷಕರು ಒತ್ತು ನೀಡಿದರು.

ಎಲ್ಲ ಶಾಲೆಗಳ ಆರಂಭ: ಕಿರಿಯ ಪ್ರಾಥಮಿಕ ತರಗತಿಗಳ ಆರಂಭದೊಂದಿಗೆ 1ನೇ ತರಗತಿಯಿಂದ ದ್ವಿತೀಯ ಪಿಯುಸಿಯವರೆಗೆ ಎಲ್ಲ ತರಗತಿಗಳು ಆರಂಭಗೊಂಡಂತಾಗಿದೆ. ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಈಗಾಗಲೇ ಮಧ್ಯಾಹ್ನದ ಬಿಸಿಯೂಟ ಆರಂಭಿಸಲಾಗಿದೆ. 1ರಿಂದ 5ನೇ ತರಗತಿ ಮಕ್ಕಳಿಗೆ ಈವಾರ ಮಧ್ಯಾಹ್ನದವರೆಗೆ ಮಾತ್ರ ತರಗತಿಗಳು ನಡೆಯಲಿದ್ದು, ನವೆಂಬರ್‌ 2ರಿಂದ ಪೂರ್ಣ ಅವಧಿಗೆ ಇರಲಿದೆ. ಅಂದಿನಿಂದ ಅವರಿಗೂ ಬಿಸಿಯೂಟವನ್ನು ಶಿಕ್ಷಣ ಇಲಾಖೆ ನೀಡಲಿದೆ.

ಕೋವಿಡ್‌ ಭಯದ ನಡುವೆ ಪೋಷಕರ ನಿಟ್ಟುಸಿರು..

ಒಂದೂವರೆ ವರ್ಷದಿಂದ ಮಕ್ಕಳನ್ನು ಮನೆಯನ್ನೇ ಇರಿಸಿ, ತಮಗೆ ಸಾಧ್ಯವಾದಷ್ಟು ಮಟ್ಟಿಗೆ ಅವರಿಗೆ ಪಾಠ ಅಭ್ಯಾಸ ಮಾಡುತ್ತಿದ್ದ ಪೋಷಕರ ಮನಸ್ಸಿನಲ್ಲಿ ಇನ್ನೂ ಕೋವಿಡ್‌ ಭಯ ಇದೆ. ಹಾಗಿದ್ದರೂ, ಮಕ್ಕಳು ಮತ್ತೆ ಕಲಿಕೆಯತ್ತ ಮುಖ ಮಾಡುತ್ತಿರುವುದು ಅವರಿಗೆ ತುಸು ನೆಮ್ಮದಿ ತಂದಿದೆ.

‘ಸದ್ಯ ಶಾಲೆ ತೆರೆದಿರುವುದರಿಂದ ನೆಮ್ಮದಿ ಮೂಡಿದೆ. ಮಕ್ಕಳು ಇನ್ನು ಕಲಿಕೆಯಲ್ಲಿ ನಿರತರಾಗಲಿದ್ದಾರೆ. ಇದುವರೆಗೂ ಮನೆ, ಟಿವಿ ಮತ್ತು ಮೊಬೈಲ್‌ ಗುಂಗಿನಲ್ಲೇ ಇದ್ದ ಮಕ್ಕಳು ಇನ್ನು ಮುಂದೆ ಸ್ವಲ್ಪವಾದರೂ ಪುಸ್ತಕ ಬಿಡಿಸಲಿದ್ದಾರೆ’ ಎಂದು ಯಳಂದೂರು ತಾಲ್ಲೂಕಿನ ಪುರಾಣಿಪೋಡು ಆಶ್ರಮ ಶಾಲೆಯ ಪೋಷಕ ಮಾದೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್‌ ಭಯ ಇದ್ದೇ ಇದೆ. ಹಾಗಿದ್ದರೂ, ಧೈರ್ಯದಿಂದ ಮಕ್ಕಳನ್ನು ಕಳುಹಿಸಿದ್ದೇವೆ. ಶಿಕ್ಷಕರು ಕೂಡ ಜೋಪಾನವಾಗಿ ಮಕ್ಕಳನ್ನು ನೋಡಿಕೊಳ್ಳುತ್ತಾರೆ ಎಂಬ ಭರವಸೆ ಇದೆ’ ಎಂದು ಕೊಳ್ಳೇಗಾಲದ ಶಿವರಾಜ್‌ ಅವರು ಹೇಳಿದರು.

ಅಧಿಕಾರಿಗಳ ಭೇಟಿ, ಪರಿಶೀಲನೆ

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ, ಡಿಡಿಪಿಐ ಪಿ.ಮಂಜುನಾಥ್‌ ಹಾಗೂ ಇತರ ಅಧಿಕಾರಿಗಳು ಚಾಮರಾಜನಗರ ತಾಲ್ಲೂಕಿನ ಮುತ್ತಿಗೆ ಶಾಲೆಗೆ ಭೇಟಿ ನೀಡಿ ಮಕ್ಕಳನ್ನು ಸ್ವಾಗತಿಸಿದರು.

ಶಾಲೆಯಲ್ಲಿ ಕೋವಿಡ್‌ ತಡೆಗೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿ, ಸಲಹೆ ಸೂಚನೆ ನೀಡಿದರು.

ತಾಲ್ಲೂಕುಗಳಲ್ಲೂ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿವಿಧ ಶಾಲೆಗಳಿಗೆ ತೆರಳಿ ಶಾಲಾ ಆರಂಭದ ಪ್ರಕ್ರಿಯೆಯನ್ನು ಪರಿಶೀಲಿಸಿದರು.

***

ಮೊದಲ ದಿನವೇ ಮಕ್ಕಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಿದ್ದೇವೆ. ಕೋವಿಡ್‌ ನಿಯಮ ಪಾಲನೆಗೆ ಒತ್ತು ನೀಡಿದ್ದೇವೆ

- ಪಿ.ಮಂಜುನಾಥ್‌, ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.