ADVERTISEMENT

ಆಸ್ಪತ್ರೆಗೆ ಹೋಗಲು ಜನರ ಹಿಂದೇಟು

ವೈದ್ಯರ ಚೀಟಿ ಇಲ್ಲದೆ ಔಷಧ ಅಂಗಡಿಗಳಲ್ಲಿ ಸಿಗುತ್ತಿಲ್ಲ ಮದ್ದು

ಮಲ್ಲೇಶ ಎಂ.
Published 2 ಜುಲೈ 2020, 16:36 IST
Last Updated 2 ಜುಲೈ 2020, 16:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗುಂಡ್ಲುಪೇಟೆ: ಮಳೆಗಾಲದಲ್ಲಿ ಹವಾಮಾನ ಬದಲಾವಣೆಯಾಗಿರುವುದರಿಂದ ಜ್ವರ, ಶೀತ ಕೆಮ್ಮು, ಮಂಡಿನೋವಿನಂತಹ ಸಾಮಾನ್ಯ ಕಾಯಿಲೆಗಳು ಜನರಲ್ಲಿ ಕಂಡು ಬರಲು ಆರಂಭಿಸಿದೆ.

ಜನ ಸಾಮಾನ್ಯರು ಈ ಕಾಯಿಲೆಗಳಿಗೆಲ್ಲ ವೈದ್ಯರ ಬಳಿ ಹೋಗುವುದಿಲ್ಲ. ನೇರವಾಗಿ ಔಷಧ ಅಂಗಡಿಗಳಿಗೆ ತೆರಳಿ ಸಮಸ್ಯೆಗಳನ್ನು ಹೇಳಿ ಮಾತ್ರೆ, ಸಿರಪ್‌ಗಳನ್ನು ಪಡೆಯುತ್ತಾರೆ. ಆದರೆ, ಈಗ ಕೋವಿಡ್‌–19 ಇರುವುದರಿಂದ ವೈದ್ಯರ ಚೀಟಿ ಇಲ್ಲದೆ ಯಾರಿಗೂ ಔಷಧಗಳನ್ನು ಕೊಡಬೇಡಿ ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿರುವುದರಿಂದ ಔಷಧ ಅಂಗಡಿವರು ಮಾತ್ರೆಗಳನ್ನು ಕೊಡುತ್ತಿಲ್ಲ.

ಹೀಗಾಗಿರೈತರು ಮತ್ತು ಸಾರ್ವಜನಿಕರು ಸಣ್ಣಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆ ಅಥವಾ ಕ್ಲಿನಿಕ್‌ಗಳಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ಆದರೆ, ಕೋವಿಡ್‌–19 ಭಯದಿಂದಾಗಿ ಜನರು ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ADVERTISEMENT

‘ತಾಲ್ಲೂಕಿನಲ್ಲಿ ಮೋಡ ಕವಿದ ವಾತಾವರಣ, ಜಿಟಿಜಿಟಿ ಮಳೆ, ಚಳಿ ಗಾಳಿಯಿಂದಾಗಿ ಜನರ ಆರೋಗ್ಯದಲ್ಲಿ ಏರುಪೇರಾಗಿದೆ. ತಂಪಾದ ಈ ವಾತಾವರಣ ಸೋಂಕು ಹರಡಲು ಅನುಕೂಲಕರ. ಹೀಗಾಗಿ ಹೆಚ್ಚೆಚ್ಚು ಜನರು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇದೆ’ ಎಂದು ಹೇಳುತ್ತಾರೆ ವೈದ್ಯರು.

‘ತಾಲ್ಲೂಕಿನಲ್ಲಿ 40 ಕ್ಕೂ ಹೆಚ್ಚಿನ ಔಷಧ ಅಂಗಡಿಗಳು ಇದೆ. ಇವುಗಳಲ್ಲಿ ನೆಗಡಿ, ಶೀತ, ಕೆಮ್ಮು, ಜ್ವರಗಳಿಗೆ ಔಷಧ ಕೊಡುವುದಿಲ್ಲ ಎಂದು ನಾಮಫಲಕ ಹಾಕಿದ್ದಾರೆ. ಸಣ್ಣಪುಟ್ಟ ಕಾಯಿಲೆಗಳಿಗೆ ವೈದ್ಯರ ಬಳಿ ಹೋದರೆ ಎಲ್ಲ ವಿವರಗಳನ್ನು ಕೇಳುತ್ತಾರೆ. ಕೋವಿಡ್‌–19 ಇರುವುದರಿಂದ ಹೋಗುವುದಕ್ಕೂ ಭಯ’ ಎಂದು ಹೇಳುತ್ತಾರೆ ಯುವಕರು.

‘ಮಳೆ, ಗಾಳಿ, ಚಳಿಗೆ ಜ್ವರ, ಕೆಮ್ಮು ಸಾಮಾನ್ಯ. ವೈದ್ಯರ ಬಳಿಗೆ ಹೋದರೆ ನೂರಾರು ರೂಪಾಯಿ ಖರ್ಚು ಮಾಡಬೇಕು. ನೇರವಾಗಿ ಮಾತ್ರೆ ಖರೀದಿಸಿ ಸೇವಿಸಿದರೆ ಗುಣವಾಗುತ್ತಿತ್ತು. ಆದರೆ, ಈಗ ಆಸ್ಪತ್ರೆಗೆ ಹೋದರೆ ವಿವಿಧ ಪ್ರಶ್ನೆ ಕೇಳುತ್ತಾರೆ. ವಿಳಾಸ, ಮೊಬೈಲ್‌ ನಂಬರ್‌ ಕೇಳುತ್ತಾರೆ. ನಮ್ಮನ್ನೂ ಕೋವಿಡ್‌–19 ಸೋಂಕಿತರಂತೆ ನೋಡುತ್ತಾರೆ. ಮೊದಲಿನಂತೆ ಚಿಕಿತ್ಸೆಯೂ ದೊರಕುವುದಿಲ್ಲ’ ಎಂಬುದು ಅವರ ಬೇಸರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.