ADVERTISEMENT

ಚಾಮರಾಜನಗರ | ‘ಪತ್ರ ಬರಹಗಾರರು ಸಂಘಟಿತರಾಗಿ’

ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ: ಸದಸ್ಯತ್ವ ನೋಂದಣಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 5:24 IST
Last Updated 11 ಆಗಸ್ಟ್ 2025, 5:24 IST
ಚಾಮರಾಜನಗರದಲ್ಲಿ ನಡೆದ ತಾಲ್ಲೂಕು ಪರವಾನಗಿ ಹೊಂದಿದ ಜಿಲ್ಲಾ ಪತ್ರ ಬರಹಗಾರರ ಕ್ಷೇಮಾಭಿವೃದ್ಧಿ ಸಂಘದ ನಾಮಫಲಕವನ್ನು ಮಂಡ್ಯ ಜಿಲ್ಲಾ ನೋಂದಣಾಧಿಕಾರಿ ಎಸ್.ಸಿದ್ದೇಶ್ ಅನಾವರಣಗೊಳಿಸಿದರು. ರಾಜ್ಯಾಧ್ಯಕ್ಷ ಡಿ.ಕೆ.ಸಂಗಮೇಶ ಎಲಿಗಾರ್, ಕಾರ್ಯದರ್ಶಿ ಧರ್ಮರಾಜ್, ವಿ.ಏಕಬೋಟೆ, ತಾಲೂಕು ಅಧ್ಯಕ್ಷ ಜಿ.ನಂದೀಶ್ವರಸ್ವಾಮಿ ಹಾಜರಿದ್ದರು
ಚಾಮರಾಜನಗರದಲ್ಲಿ ನಡೆದ ತಾಲ್ಲೂಕು ಪರವಾನಗಿ ಹೊಂದಿದ ಜಿಲ್ಲಾ ಪತ್ರ ಬರಹಗಾರರ ಕ್ಷೇಮಾಭಿವೃದ್ಧಿ ಸಂಘದ ನಾಮಫಲಕವನ್ನು ಮಂಡ್ಯ ಜಿಲ್ಲಾ ನೋಂದಣಾಧಿಕಾರಿ ಎಸ್.ಸಿದ್ದೇಶ್ ಅನಾವರಣಗೊಳಿಸಿದರು. ರಾಜ್ಯಾಧ್ಯಕ್ಷ ಡಿ.ಕೆ.ಸಂಗಮೇಶ ಎಲಿಗಾರ್, ಕಾರ್ಯದರ್ಶಿ ಧರ್ಮರಾಜ್, ವಿ.ಏಕಬೋಟೆ, ತಾಲೂಕು ಅಧ್ಯಕ್ಷ ಜಿ.ನಂದೀಶ್ವರಸ್ವಾಮಿ ಹಾಜರಿದ್ದರು   

ಚಾಮರಾಜನಗರ: ‘ಸರ್ಕಾರ ಪತ್ರ ಬರಹಗಾರರ ವೃತ್ತಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ, ಇದನ್ನು ಉಳಿಸಿಕೊಳ್ಳಲು ಸಂಘಟಿತರಾಗಬೇಕು’ ಎಂದು ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಪರವಾನಗಿ ಪಡೆದ ಪತ್ರ ಬರಹಗಾರರ ಒಕ್ಕೂಟದ ರಾಜ್ಯಾಧ್ಯಕ್ಷ ಡಿ.ಕೆ.ಸಂಗಮೇಶ ಎಲಿಗಾರ್ ಸಲಹೆ ನೀಡಿದರು.

ನಗರದಲ್ಲಿ ನಡೆದ ಚಾಮರಾಜನಗರ ತಾಲ್ಲೂಕು ಪರವಾನಗಿ ಹೊಂದಿದ ಜಿಲ್ಲಾ ಪತ್ರ ಬರಹಗಾರರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭ ಹಾಗೂ ಒಕ್ಕೂಟದ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ಉದ್ಟಾಟಿಸಿ ಮಾತನಾಡಿದರು.

‘ಹಂತ ಹಂತವಾಗಿ ಕಾವೇರಿ 1, ಕಾವೇರಿ 2 ತಂತ್ರಾಂಶ ತಂದರು. ಕಾವೇರಿ 3 ತಂತ್ರಾಂಶದಲ್ಲಿ ಎಲ್ಲವನ್ನೂ ಅಪ್‌ಲೋಡ್ ಮಾಡಿ ಪತ್ರ ನೋಂದಣಿಗೆ ಎಲ್ಲ ಅವಕಾಶ ಮಾಡಿಕೊಟ್ಟರು. ಮೂರನೆಯ ಹಂತದಲ್ಲಿ ಪತ್ರ ಬರಹಗಾರರನ್ನು ಸಂಪೂರ್ಣವಾಗಿ ಹತ್ತಿಕ್ಕುವ ಕೆಲಸ ಮಾಡಿದ್ದಾರೆ’ ಎಂದು ದೂರಿದರು.

ADVERTISEMENT

‘ಪತ್ರ ಬರಹಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಬೆಳಗಾವಿ ಅಧಿವೇಶನದ ವೇಳೆ ಸಚಿವರು ಹಾಗೂ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲಾಗಿದೆ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಡಿಜಿಟಲೀಕರಣ ಮಾಡಿ ಪತ್ರ ಬರಹಗಾರ ವೃತ್ತಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಸರ್ಕಾರ ಎಲ್ಲ ಕ್ಷೇತ್ರದವರಿಗೂ ಸೇವಾ ಭದ್ರತೆ ಒದಗಿಸುತ್ತಿದೆ. ಆದರೆ ಸರ್ಕಾರವೇ ಪರವಾನಗಿ ನೀಡಿ ನಮಗೆ ಯಾವುದೇ ಸೌಲಭ್ಯ ನೀಡಿಲ್ಲ. ಬದಲಾಗಿ ವೃತ್ತಿಯನ್ನು ನಾಶ ಮಾಡಲು ಹೋರಾಟಿದೆ’ ಎಂದು ಆರೋಪಿಸಿದರು.

‘ಪತ್ರ ಬರಹಗಾರರು ಸಂಘಟಿತರಾಗಬೇಕು, ವೃತ್ತಿ ಉಳಿವಿಗಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಆಶಾ ಕಾರ್ಯಕರ್ತರು, ಗ್ರಾ.ಪಂ. ನೌಕರರು, ಶಿಕ್ಷಕರು ವೇತನ ಇದ್ದರೂ ಹೋರಾಟ ಮಾಡುತ್ತಿದ್ದಾರೆ. ನಮಗೆ ಯಾವುದೇ ವೇತನ ಇಲ್ಲ, ಆಗಾಗಿ ವೃತ್ತಿಯನ್ನು ಉಳಿಸಿಕೊಳ್ಳಲು ಸಂಘಟಿತರಾಗಬೇಕು’ ಎಂದರು.

ಒಕ್ಕೂಟದ ರಾಜ್ಯ ಕಾರ್ಯದರ್ಶಿ ಧರ್ಮರಾಜ್ ವಿ.ಏಕಬೋಟೆ ಮಾತನಾಡಿ, ‘ಪತ್ರ ಬರಹಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಆದ್ದರಿಂದ ಸಂಕಷ್ಟದಲ್ಲಿರುವ ಪತ್ರ ಬರಹಗಾರರ ವೃತ್ತಿ ಉಳಿಸುವ ನಿಟ್ಟಿನಲ್ಲಿ ಒಕ್ಕೂಟ ಸ್ಥಾಪನೆಯಾಗಿದೆ’ ಎಂದರು.

ಮಂಡ್ಯ ಜಿಲ್ಲಾ ನೋಂದಣಾಧಿಕಾರಿ ಎಸ್.ಸಿದ್ದೇಶ್ ಸಂಘದ ನಾಮಫಲಕ ಅನಾವರಣಗೊಳಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಜಿ.ನಂದೀಶ್ವರಸ್ವಾಮಿ, ಚಾಮರಾಜನಗರ ಹಿರಿಯ ಉಪ- ನೋಂದಣಾಧಿಕಾರಿ ಎ.ರಾಘವೇಂದ್ರ, ಪ್ರಥಮದರ್ಜೆ ಸಹಾಯಕ ಕೆ.ಎನ್.ಉಮೇಶ್, ಮಂಜುನಾಥ್, ಒಕ್ಕೂಟದ ಕಾರ್ಯದರ್ಶಿ ನವೀನ್ ಕುಮಾರ್, ಚಾಮರಾಜನಗರ ತಾಲ್ಲೂಕು ಉಪಾಧ್ಯಕ್ಷ ಕಾಂತರಾಜು, ಕಾರ್ಯದರ್ಶಿ ಮಹಾದೇವಸ್ವಾಮಿ, ಸಹ ಕಾರ್ಯದರ್ಶಿ ರವಿ, ಖಜಾಂಚಿ ಹೊಮ್ಮ ರಾಮನಾಯಕ, ಕಾನೂನು ಸಲಹೆಗಾರ ಎಸ್.ಕೆ.ಮಹದೇವಯ್ಯ, ಕೊಳ್ಳೇಗಾಲ, ಹನೂರು, ಕುದೇರು, ಯಳಂದೂರು, ಗುಂಡ್ಲುಪೇಟೆ ಪತ್ರ ಬರಹಗಾರರು ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.