ಹನೂರು: ವಿಶ್ವ ಜನಸಂಖ್ಯೆ ದಿನಾಚರಣೆ ಅಂಗವಾಗಿ ಹನೂರು ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ವತಿಯಿಂದ ಜನಸಂಖ್ಯಾ ಸ್ಪೋಟದ ಕುರಿತು ಅರಿವು ಮೂಡಿಸಲು ಹಮ್ಮಿಕೊಳ್ಳಲಾಗಿದ್ದ ಜಾಥಾ ಕಾರ್ಯಕ್ರಮಕ್ಕೆ ತಾಲ್ಲೂಕು ಆರೋಗ್ಯಾಧಿಕಾರಿ ಪ್ರಕಾಶ್ ಚಾಲನೆ ನೀಡಿದರು.
ಜಾಥಾ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಅಂಕಪ್ಪ ‘ಜಿಲ್ಲೆಯಾದ್ಯಂತ ಜುಲೈ 11 ರಿಂದ 24ರವರೆಗೆ ವಿಶ್ವ ಜನಸಂಖ್ಯೆ ದಿನಾಚರಣೆ ಅಂಗವಾಗಿ ಸೇವಾ ಪಾಕ್ಷಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರಲ್ಲಿ ಗರ್ಭನಿರೋಧಕ ವಿಧಾನ ಬಳಕೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ದೇಶದಲ್ಲಿ ಹೆಚ್ಚಿನವರಲ್ಲಿ ಕುಟುಂಬ ಯೋಜನೆಯ ತಿಳಿವಳಿಕೆಯ ಕೊರತೆ ಇದೆ ಎಂದರು.
ಜನಸಂಖ್ಯೆ ಸ್ಥಿರೀಕರಣ ಸಾಧಿಸಬೇಕಾದರೆ ಕುಟುಂಬ ಯೋಜನೆಯ ಅರಿವು ಎಲ್ಲರಲ್ಲೂ ಮೂಡಬೇಕು. ಕುಟುಂಬ ಕಲ್ಯಾಣ ಯೋಜನೆಯಡಿ ಲಭ್ಯವಿರುವ ತಾತ್ಕಾಲಿಕ ವಿಧಾನಗಳಾದ ಐಯುಸಿಡಿ ಅಳವಡಿಕೆ, ಅಂತರ ಚುಚ್ಚುಮದ್ದು, ಛಾಯಾ, ಮಾಲಾ-ಎನ್, ಕಾಂಡೋಮ್ ಇತರೆ ಗರ್ಭನಿರೋಧಕಗಳ ಬಗ್ಗೆ ದಂಪತಿಗಳು ಮಾಹಿತಿ ಪಡೆಯಬೇಕು ಎಂದರು.
ಸೇವಾ ಪಾಕ್ಷಿಕದ ಅವಧಿಯಲ್ಲಿ ಆರೋಗ್ಯ ಕೇಂದ್ರಗಳಲ್ಲಿ ದಂಪತಿಗಳು ಕುಟುಂಬ ಕಲ್ಯಾಣ ಸೇವೆಗಳನ್ನು ಉಚಿತವಾಗಿ ಪಡೆದು ಸಣ್ಣ ಕುಟುಂಬದ ಅಳವಡಿಕೆಗೆ ಉತ್ತೇಜನ ನೀಡಬೇಕು. ಮಕ್ಕಳ ಜನನದ ನಡುವೆ ಅಂತರ ಕಾಯ್ದುಕೊಂಡು ಜನಸಂಖ್ಯೆ ನಿಯಂತ್ರಣಕ್ಕೆ ಕೈಜೋಡಿಸುವ ಮೂಲಕ ರಾಷ್ಟ್ರದ ಸುಸ್ಥಿರ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಡಾ.ಅಂಕಪ್ಪ ಸಲಹೆ ನೀಡಿದರು.
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ರಾಜೇಶ್ ಕುಮಾರ್, ವಿಶ್ವ ಆರೋಗ್ಯ ಸಂಸ್ಥೆಯ ಡಾ.ಸುಧೀರ್ ನಾಯಕ್, ಹನೂರು ತಾಲ್ಲೂಕು ವೈದ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.