ADVERTISEMENT

ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೇವೆ ನಾಳೆಯಿಂದ ಲಭ್ಯ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 15:23 IST
Last Updated 31 ಆಗಸ್ಟ್ 2018, 15:23 IST

ಚಾಮರಾಜನಗರ: ಭಾರತೀಯ ಅಂಚೆ ಇಲಾಖೆಯು ಚಾಮರಾಜನಗರದ ಮುಖ್ಯ ಅಂಚೆ ಕಚೇರಿಯಲ್ಲಿ ಇಂಡಿಯ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನ ಶಾಖೆಆರಂಭಿಸುತ್ತಿದೆ.

ಪಟ್ಟಣದ ಜಿಲ್ಲಾಡಳಿತ ಭವನದಲ್ಲಿರುವ ಅಂಚೆ ಕಚೇರಿ, ಕೊಳ್ಳೇಗಾಲ ಮುಖ್ಯ ಅಂಚೆ ಕಚೇರಿ, ಉಡಿಗಾಲ ಹಾಗೂ ಬದನಗುಪ್ಪೆ ಗ್ರಾಮದ ಅಂಚೆ ಕಚೇರಿಗಳನ್ನು ಸಹಾಯಕ ಕೇಂದ್ರಗಳನ್ನಾಗಿ ನಿಯೋಜಿಸಲಾಗಿದೆ.

ಪ್ರಸ್ತುತ ಬ್ಯಾಂಕ್ ಸೇವೆಯಿಂದ ವಂಚಿತರಾಗಿರುವ ಅದರಲ್ಲೂ ಅತಿ ಹೆಚ್ಚು ಹಳ್ಳಿಗಳಲ್ಲಿ ನೆಲೆಸಿರುವ ನಾಗರಿಕರಿಗೆ ಬ್ಯಾಂಕಿಂಗ್ ಸೌಲಭ್ಯ ಒದಗಿಸುವುದು, ಆರ್ಥಿಕ ಸಾಕ್ಷರತೆ ಜಾಗೃತಿ ಮೂಡಿಸುವುದು, ಹಣ ಸಂದಾಯಗಳನ್ನು ಸರಳಗೊಳಿಸುವುದು ಬ್ಯಾಂಕಿನ ಮೂಲ ಉದ್ದೇಶವಾಗಿದೆ. ದೇಶದಲ್ಲಿ ಶನಿವಾರದಿಂದ (ಸೆಪ್ಟೆಂಬರ್‌ 1) 650 ಶಾಖೆಗಳನ್ನು ತೆರೆಯಲಾಗುತ್ತಿದೆ.

ADVERTISEMENT

ಮುಂದಿನ ದಿನಗಳಲ್ಲಿ ಎಲ್ಲ ಅಂಚೆ ಕಚೇರಿಗಳನ್ನು ಬ್ಯಾಂಕಿನ ಶಾಖೆಯ ಸಹಾಯಕ ಕೇಂದ್ರಗಳನ್ನಾಗಿ ಹಂತ ಹಂತವಾಗಿ ಮಾರ್ಪಡಿಸಲಾಗುತ್ತದೆ. ಬ್ಯಾಂಕಿಂಗ್ ಅವಶ್ಯಕತೆಗಳನ್ನು ಇಂಡಿಯ ಪೋಸ್ಟ್ ಪೇಮೆಂಟ್ ಬ್ಯಾಂಕಿನ ಮೂಲಕ ಅತ್ಯಂತ ಸುಲಭ, ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತವಾಗಿ ಅಂಚೆ ಇಲಾಖೆಯು ನಿರ್ವಹಿಸಲಿದೆ.

ಚಾಮರಾಜನಗರ, ಕೊಳ್ಳೇಗಾಲ, ಉಡಿಗಾಲ ಮತ್ತು ಬದನಗುಪ್ಪೆ ಗ್ರಾಮದ ಎಲ್ಲ ನಾಗರಿಕರು ಬ್ಯಾಂಕಿನ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅಂಚೆ ಅಧೀಕ್ಷಕ ಎಚ್.ಸಿ. ಸದಾನಂದ ಪ್ರಕಟಣೆಯಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.