ADVERTISEMENT

ಗಣಪತಿ ವಿಸರ್ಜನೆ: ಮೆರವಣಿಗೆಗೆ ಅವಕಾಶ ಇಲ್ಲ

ನಗರದ ಬೀದಿಗಳಲ್ಲಿ ಮೆರವಣಿಗೆ ನಡೆಸಲು ಮುಂದಾಗಿರುವ ಶ್ರೀವಿದ್ಯಾಗಣಪತಿ ಮಂಡಳಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 4:32 IST
Last Updated 19 ಸೆಪ್ಟೆಂಬರ್ 2021, 4:32 IST
ಚಾಮರಾಜನಗರದ ವಿದ್ಯಾಗಣಪತಿ ಮಂಡಳಿ ಪ್ರತಿಷ್ಠಾಪಿಸಿರುವ ಭೂಮಂಡಲ ರಕ್ಷ ಗಣಪತಿ
ಚಾಮರಾಜನಗರದ ವಿದ್ಯಾಗಣಪತಿ ಮಂಡಳಿ ಪ್ರತಿಷ್ಠಾಪಿಸಿರುವ ಭೂಮಂಡಲ ರಕ್ಷ ಗಣಪತಿ   

ಚಾಮರಾಜನಗರ: ನಗರದ ರಥದ ಬೀದಿಯ ಗುರುನಂಜಶೆಟ್ಟರ ಛತ್ರದ ಬಳಿ ಪ್ರತಿಷ್ಠಾಪಿಸಿರುವ ಗಣಪತಿ ಮೂರ್ತಿಯನ್ನು ಸೋಮವಾರ (ಸೆ.20) ಮೆರವಣಿಗೆಯ ಮೂಲಕ ಸಾಗಿ ವಿಸರ್ಜನೆ ಮಾಡಲು ಶ್ರೀ ವಿದ್ಯಾಗಣಪತಿ ಮಂಡಳಿ ತೀರ್ಮಾನಿಸಿರುವ ಬೆನ್ನಲ್ಲೇ, ಮೆರವಣಿಗೆಗೆ ಅವಕಾಶ ಇಲ್ಲ ಎಂದು ಜಿಲ್ಲಾಡಳಿತ ಹೇಳಿದೆ.

ಸರ್ಕಾರದಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಹಾಗೂ ವಿವಿಧ ನಿಬಂಧನೆಗಳಿಗೆ ಒಳಪಟ್ಟು ಸೋಮ
ವಾರದ ವಿಸರ್ಜನಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಅನುಮತಿ ನೀಡಿದ್ದಾರೆ.

ಎರಡು ದಿನಗಳ ಹಿಂದೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದ ವಿದ್ಯಾಗಣಪತಿ ಮಂಡಳಿ ಹಾಗೂ ಶನಿವಾರ ಪತ್ರಿಕಾ ಗೋಷ್ಠಿ ನಡೆಸಿದ್ದ ಮಂಡಳಿಯ ಗೌರವ ಕಾರ್ಯದರ್ಶಿ ಎಸ್‌.ಬಾಲಸುಬ್ರಹ್ಮಣ್ಯಂ ಅವರು, 'ಕೋವಿಡ್‌ ನಿಯಮಗಳನ್ನು ಪಾಲಿಸಿಕೊಂಡು 20ರಂದು ವಿಸರ್ಜನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಪೂಜೆ, ಕಲಾತಂಡಗಳಿಗೆ ಅವಕಾಶ ಇಲ್ಲ. ಆದರೆ, ನಗರದ ಬೀದಿಗಳಲ್ಲಿ ವಿಸರ್ಜನಾ ಮೆರವಣಿಗೆ ನಡೆಸಲಾಗುವುದು. ಭಕ್ತರು ದೂರದಿಂದಲೇ ನಿಂತು ಗಣಪತಿಯ ದರ್ಶನ ಪಡೆಯಬೇಕು’ ಎಂದು ಹೇಳಿದ್ದರು.

ADVERTISEMENT

ಇದರ ಬೆನ್ನಲ್ಲೇ, ವಿಸರ್ಜನಾ ಸಮಯದಲ್ಲಿ ಪಾಲಿಸಬೇಕಾದ ನಿಬಂಧನೆಗಳನ್ನು ಉಲ್ಲೇಖಿಸಿ ಅನುಮತಿವನ್ನು ನೀಡಿದ್ದಾರೆ.

‘ಗಣೇಶ ಮೂರ್ತಿಯನ್ನು ವಿಸರ್ಜಿಸುವಾಗ ಯಾವುದೇ ಕಾರಣಕ್ಕಾಗಲಿ ಅಥವಾ ಯಾವುದೇ ಸಂದರ್ಭದಲ್ಲಿ ಯಾವುದೇ ರೀತಿಯ ಮೆರವಣಿಗೆಯನ್ನು ಹೊರಡಿಸತಕ್ಕದಲ್ಲ/ಮಾಡತಕ್ಕದಲ್ಲ. ಮೆರವಣಿಗೆಯನ್ನು ಸಂಪೂರ್ಣವಾಗಿ ನಿಬಂಧಿಸಿದೆ. ಕೋವಿಡ್-19ರ ಸಾಂಕ್ರಾಮಿಕ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ನಿರ್ದೇಶನಗಳನ್ನು ಪಾಲಿಸಬೇಕು. ಅಲ್ಲದೇ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ನಗರಸಭೆ, ಗ್ರಾಮ ಪಂಚಾಯಿತಿ, ಇತರೆ ಸ್ಥಳೀಯ ಸಂಸ್ಥೆ, ಮಾಲಿನ್ಯ ನಿಯಂತ್ರಣಾ ಮಂಡಳಿ, ಅಗ್ನಿಶಾಮಕ ಇಲಾಖೆ, ಜಿಲ್ಲಾಡಳಿತ ಹಾಗೂ ಇತರೆ ಇಲಾಖೆಗಳಿಂದ ಹೊರಡಿಸಲಾದ ಸೂಚನೆ ಹಾಗೂ ಮಾರ್ಗಸೂಚಿಗಳನ್ನೂಕಡ್ಡಾಯವಾಗಿ ಪಾಲಿಸಬೇಕು. ಗಣಪತಿ ಮೂರ್ತಿ ವಿಸರ್ಜನೆ ವೇಳೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಮುಂಚಿತವಾಗಿ ತಿಳಿಸಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಿಕೊಳ್ಳಬೇಕು. ನಗರಸಭೆ ವತಿಯಿಂದ ಗುರುತಿಸಿರುವ ಸ್ಥಳದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಕಾರ್ಯ ಕೈಗೊಳ್ಳಬೇಕು’ ಎಂದು ಅವರು ಅನುಮತಿ ಪತ್ರದಲ್ಲಿ ತಿಳಿಸಿದ್ದಾರೆ.

ಕೊಳ್ಳೇಗಾಲದ ಉಪವಿಭಾಗಾಧಿಕಾರಿಗಳು, ಚಾಮರಾಜನಗರ ಡಿವೈಎಸ್‌ಪಿ ಹಾಗೂ ಚಾಮರಾಜನಗರ ತಹಶೀಲ್ದಾರ್ ಅವರು ಗಣೇಶ ವಿಸರ್ಜನಾ ಕಾರ್ಯದ ಮೇಲುಸ್ತುವಾರಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.