ADVERTISEMENT

ಬಜೆಟ್‌ನಲ್ಲಿ ಅಂಗವಿಕಲರ ಬೇಡಿಕೆ ಪರಿಗಣಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 15:46 IST
Last Updated 4 ಫೆಬ್ರುವರಿ 2023, 15:46 IST
ರಾಜ್ಯ ಬಜೆಟ್‌ನಲ್ಲಿ ಅಂಗವಿಕಲರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಚಾಮರಾಜನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು
ರಾಜ್ಯ ಬಜೆಟ್‌ನಲ್ಲಿ ಅಂಗವಿಕಲರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಚಾಮರಾಜನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಲಿರುವ ರಾಜ್ಯ ಬಜೆಟ್‌ನಲ್ಲಿ ಅಂಗವಿಕಲರ ಬೇಡಿಕೆಗಳನ್ನು ಪರಿಗಣಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಅಂಗವಿಕಲ ಕ್ಷೇಮಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾಡಳಿತ ಭವನದ ಗೇಟಿನಿಂದ ಭವನದವರೆಗೂ ಮೆರವಣಿಗೆ ನಡೆಸಿ ಪ್ರತಿಭಟನಕಾರರು, ಭವನದ ಪ್ರವೇಶದ್ವಾರದ ಮುಂದೆ ಧರಣಿ ಕುಳಿತರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.

ಸಮಿತಿಯ ಜಿಲ್ಲಾಧ್ಯಕ್ಷ ಎಂ.ರಮೇಶ್ ಮಾತನಾಡಿ, ‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯನ್ನು ಬೇರ್ಪಡಿಸಿ ಅಂಗವಿಕಲರಿಗೆ ಪ್ರತ್ಯೇಕ ಸಚಿವಾಲಯ ತೆರೆಯಬೇಕು. ಅಂಗವಿಕಲರಿಗೆ ಮೀಸಲಿಟ್ಟ 26 ಸಾವಿರ ಬ್ಯಾಕ್‌ಲಾಕ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಈಗ ನೀಡುತ್ತಿರುವ ಅಂಗವಿಕಲರ ರಿಯಾಯಿತಿ ಬಸ್‌ಪಾಸ್‌ನ್ನು 100 ಕಿ.ಮೀ ವ್ಯಾಪ್ತಿಯಿಂದ ರಾಜ್ಯದಾದ್ಯಂತ ವಿಸ್ತರಣೆ ಮಾಡಬೇಕು. ಅಂಗವಿಕಲರಿಗೆ ನೀಡುತ್ತಿರುವ ಮಾಸಾಶನವನ್ನು ₹5000ಕ್ಕೆ ಹೆಚ್ಚಿಸಬೇಕು. ಆರೈಕೆದಾರರಿಗೆ ಸರ್ಕಾರಿ ಸವಲತ್ತು ನೀಡಬೇಕು. ರಾಜ್ಯದಲ್ಲಿ ಗೌರವಧನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಎಂಆರ್‌ಡಬ್ಲ್ಯು ವಿ.ಆರ್‌ಡಬ್ಲ್ಯು ಅವರ ಗೌರವಧನವನ್ನು ತೆಗೆದು ಹಾಕಿ ಕನಿಷ್ಠ ವೇತನ ನೀಡಬೇಕು. ಸೇವಾ ಭದ್ರತೆ ಒದಗಿಸಬೇಕು. ಸಹಾಯವಾಣಿಯವರ ಸಹಾಯಕರನ್ನು ಕಾಯಂ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ಸಮಿತಿಯ ಜಿಲ್ಲಾ ಗೌರವ ಅಧ್ಯಕ್ಷ ಎನ್.ಕೃಷ್ಣಮೂರ್ತಿ, ತಾಲ್ಲೂಕು ಅಧ್ಯಕ್ಷ ರೂಪೇಶ್, ಪ್ರಧಾನ ಕಾರ್ಯದರ್ಶಿ ವಜ್ರಮನಿ, ಗೌರಮ್ಮ, ಸಿದ್ದಯ್ಯ, ಬ್ಯಾಡಮೂಡ್ಲು ಕೃಷ್ಣ, ಮಹೇಶ್, ಪುಟ್ಟಮಾದಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.