ADVERTISEMENT

ಚಾಮರಾಜನಗರ | ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಖಂಡಿಸಿ ಅರೆಬೆತ್ತಲೆ ಚಳವಳಿ

ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 12:38 IST
Last Updated 8 ಆಗಸ್ಟ್ 2020, 12:38 IST
ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಮತ್ತು ವಿದ್ಯುತ್‌ ಕಾಯ್ದೆಗಳನ್ನು ವಿರೋಧಿಸಿ ಕಬ್ಬು ಬೆಳೆಗಾರರು ಚಾಮರಾಜನಗರದಲ್ಲಿ ಶನಿವಾರ ಅರೆಬೆತ್ತಲೆ ಚಳವಳಿ ನಡೆಸಿದರು
ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಮತ್ತು ವಿದ್ಯುತ್‌ ಕಾಯ್ದೆಗಳನ್ನು ವಿರೋಧಿಸಿ ಕಬ್ಬು ಬೆಳೆಗಾರರು ಚಾಮರಾಜನಗರದಲ್ಲಿ ಶನಿವಾರ ಅರೆಬೆತ್ತಲೆ ಚಳವಳಿ ನಡೆಸಿದರು   

ಚಾಮರಾಜನಗರ: ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಖಂಡಿಸಿ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ನಗರದಲ್ಲಿ ಶನಿವಾರ ಅರೆಬೆತ್ತಲೆ ಚಳವಳಿ ನಡೆಸಿದರು.

ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಸಮಾವೇಶಗೊಂಡ ಪ್ರತಿಭಟನಕಾರರು, ಅಲ್ಲಿಂದ ಭುವನೇಶ್ವರಿ ವೃತ್ತದವರೆಗೆ ಅರೆಬೆತ್ತಲೆಯಾಗಿ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಅವರು ಮಾತನಾಡಿ, ‘ದೇಶದಲ್ಲಿ ಮೂರು ತಿಂಗಳ ಅವಧಿಯಲ್ಲಿ 180 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಇದರ ಬಗ್ಗೆ ಗಮನ ಹರಿಸಿಲ್ಲ. ರೈತರಿಗೆ ಮಾರಕವಾಗಿರುವಂತಹ ಕಾನೂನುಗಳನ್ನು ಜಾರಿಗೆ ತರಲು ಒತ್ತು ನೀಡುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ರಾಜ್ಯದಲ್ಲಿ ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ವಿದ್ಯುತ್‌ ಕಾಯ್ದೆಗಳು ಜಾರಿಯಾದರೆ, ರೈತರು ಕೃಷಿಯನ್ನು ಬಿಟ್ಟು ಹೊರ ಬರಬೇಕಾಗುತ್ತದೆ. ಆಗ ಸರ್ಕಾರ ಕೃಷಿ ಭೂಮಿಗಳನ್ನು ವಶಕ್ಕೆ ಪಡೆದು, ಬಂಡವಾಳಶಾಹಿ, ಕಾರ್ಪೊರೇಟ್‌ ಕಂಪನಿ ಹಾಗೂ ಶ್ರೀಮಂತರು ಖರೀದಿಸಲು ಅನುವು ಮಾಡಿಕೊಡುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಅಂದಾಜು 13,895 ಭೂ ಸುಧಾರಣಾ ಕಾಯ್ದೆಯ ನಿಯಮ ಉಲ್ಲಂಘನೆಯ ಪ್ರಕರಣಗಳನ್ನು ಮುಚ್ಚಿ ಹಾಕುವ ಕೆಲಸ ನಡೆಯುತ್ತಿದೆ. ಬೆಂಗಳೂರು, ಮೈಸೂರಿನಂತಹ ಮಹಾನಗರಗಳಲ್ಲಿ ನಿಯಮ ಉಲ್ಲಂಘಿಸಿ ಕೋಟ್ಯಂತರ ಎಕರೆ ಕೃಷಿ ಭೂಮಿಯನ್ನು ಖರೀದಿಸಲಾಗಿದೆ. ಇದನ್ನು ಸಕ್ರಮಗೊಳಿಸುವುದಕ್ಕಾಗಿ ಸರ್ಕಾರ ಈ ಕಾಯ್ದೆ ಜಾರಿಗೆ ತರುತ್ತಿದೆ’ ಎಂದು ಅವರು ಆರೋಪಿಸಿದರು.

‘ರೈತರಿಗೆ ಮಾರಕವಾಗಿರುವ ಈ ಕಾಯ್ದೆಗಳನ್ನು ಸರ್ಕಾರ ವಾಪಸ್‌ ಪಡೆಯಬೇಕು. ಇಲ್ಲದಿದ್ದರೆ, ಮುಂದಾಗುವ ಅನಾಹುತಕ್ಕೆ ಸರ್ಕಾರವೇ ನೇರ ಹೊಣೆಯಾಗುತ್ತದೆ. ಕಾಯ್ದೆಗಳ ವಿರುದ್ಧ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಅವರು ಎಚ್ಚರಿಸಿದರು.

ಮೂಡ್ಲುಪುರ ಪಟೇಲ್ ಶಿವಮೂರ್ತಿ, ನಾಗರಾಜು, ರೇವಣ್ಣ, ಆಲೂರು ಸಿದ್ದರಾಜು, ಕುಂತೂರು ಪ್ರಭುಸ್ವಾಮಿ, ಸತೀಶ್, ರವಿ, ವಿಜಯ್ ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.