ಕೊಳ್ಳೇಗಾಲ: ಮೈಸೂರು ಜಿಲ್ಲೆಯ ವರುಣ ವಿಧಾನಸಭಾ ಕ್ಷೇತ್ರದ ವಾಜಮಂಗಲದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿರುವುದು ಖಂಡಿಸಿ ಇಲ್ಲಿನ ಆದಿ ದ್ರಾವಿಡ ಮೂಲ ನಿವಾಸಿಗಳ ಸಂಘ ಹಾಗೂ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಸರ್ಕಾರ ಹಾಗೂ ಕಿಡಿಗೇಡಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಶಿರಸ್ತೇದಾರ್ ಕೃಪಾಕರ್ ಅವರಿಗೆ ಮನವಿ ಸಲ್ಲಿಸಿದರು.
ಮುಖಂಡ ಕಮಲ್ ಮಾತನಾಡಿ, ‘ವಾಜಮಂಗಲದಲ್ಲಿ ಕಿಡಿಗೇಡಿಗಳು ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿರುವುದು ನಿಜಕ್ಕೂ ದುರಂತದ ವಿಷಯ. ಭಾವಚಿತ್ರಕ್ಕೆ ಅಪಮಾನ ಮಾಡಿ ಒಂದು ವಾರ ಕಳೆದರೂ ಇದುವರೆಗೂ ಪೊಲೀಸ್ ಇಲಾಖೆ ಯಾರನ್ನು ಸಹ ಬಂಧಿಸಿಲ್ಲ. ಕೂಡಲೇ ಬಂಧಿತರನ್ನು ಹುಡುಕಿ ಅವರಿಗೆ ಗಲ್ಲು ಶಿಕ್ಷೆಗೆ ಒಳಪಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ರಾಷ್ಟ್ರ ನಾಯಕರನ್ನು ಅಪಮಾನ ಮಾಡಿರುವ ಕಿಡಿಗೇಡಿಗಳು ಈ ಭೂಮಿ ಮೇಲೆ ಇರುವುದಕ್ಕೆ ಯೋಗ್ಯರಲ್ಲ’ ಎಂದು ಕಿಡಿಕಾರಿದರು.
ದೊಡ್ಡಿಂದುವಾಡಿ ಸಿದ್ದರಾಜು ಮಾತನಾಡಿ, ‘ಅಂಬೇಡ್ಕರ್ ಎಂದರೆ ನಮಗೆ ದೇವರು. ದೇವರಿಗೆ ಅಪಮಾನ ಮಾಡಿರುವ ವ್ಯಕ್ತಿ ನಿಜಕ್ಕೂ ಬದುಕುವುದು ವ್ಯರ್ಥ. ಈ ಕೃತ್ಯ ನೋಡಿದರೆ ಸುಮಾರು ದಿನಗಳಿಂದ ಸಂಚು ಮಾಡಿಯೇ ಕಿಡಿಗೇಡಿಗಳು ವಿಕೃತ ಮೆರೆದಿದ್ದಾರೆ. ಹಾಗಾಗಿ ಪೊಲೀಸ್ ಅಧಿಕಾರಿಗಳು ಕೂಡಲೇ ಅವರನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು. ಇಲ್ಲದಿದ್ದರೆ ಪ್ರತಿ ತಾಲೂಕಿನಲ್ಲೂ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮರಾಜನಗರ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕೆಲಸ ಕಾರ್ಯಗಳ ಜೊತೆಗೆ ಸಚಿವ ಸಂಪುಟ ನಡೆಸಲಿದ್ದಾರೆ. ಹಾಗಾಗಿ ಕಿಡಿಗೇಡಿಗಳನ್ನು ಬಂಧಿಸಿದ್ದೇವೆ ಎಂದು ಅವರು ಘೋಷಿಸಬೇಕು. ಇಲ್ಲದಿದ್ದರೆ ಕೊಳ್ಳೇಗಾಲದಿಂದ ವಿಧಾನಸೌಧ ಚಲೋ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮುಖಂಡ ಬೆಂಜಮೀನ್, ನಟರಾಜು, ಕೆ.ಕೆ.ಮೂರ್ತಿ, ಸಿದ್ದಾರ್ಥ್, ಶ್ರೀಧರ್, ಸುರೇಶ್, ಬಸವರಾಜು, ಲೋಕೇಶ್, ಜಗದೀಶ್ ಶಾಸ್ತ್ರಿ, ಮನಸೂರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.