ಹನೂರು: ಸಮೀಪದ ಮಂಗಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ‘ನೈಜ ಚಮತ್ಕಾರ –ವಿಜ್ಞಾನದೊಂದಿಗೆ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ವಿಜ್ಞಾನ ಪ್ರಯೋಗದಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದರು.
ಜಿಲ್ಲಾ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಶಾಲೆಯ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತರಗತಿಗಳ ಅಂತರವಿಲ್ಲದೇ ಸಕ್ರಿಯವಾಗಿ ಪಾಲ್ಗೊಂಡರು.
ಕಲಾ, ವಿಜ್ಞಾನ, ಗಣಿತ ಮತ್ತು ಪವಾಡ ಬಯಲಿನ ಸಂಗಮದಲ್ಲಿ ಶಿಕ್ಷಕ ಎನ್.ಮಹಾದೇವ ಅವರು ನಿಂಬೆಹಣ್ಣು ಕೆಂಪಾಗುವಿಕೆ, 30 ಸೆಕೆಂಡ್‌ನಲ್ಲಿ ನೀರು ಮಂಜುಗಡ್ಡೆ ಆಗುವಿಕೆ, ತೆಂಗಿನ ಕಾಯಿಯ ಒಳಗಿಂದ ಹೂವು ಮತ್ತು ಚಿನ್ನದ ಸರ ತೆಗೆದು ಮಾಯ ಮಾಡುವುದು, ಶಾಖವಿಲ್ಲದೆ ಹಾಲನ್ನು ಉಕ್ಕಿಸುವುದು ಮತ್ತು ಮನಸ್ಸನ್ನು ಓದುವುದು ಥರ್ಮಾಕೋಲ್ ಅನ್ನು ಕರಗಿಸುವುದು ಸೇರಿದಂತೆ ಪವಾಡಗಳ ಹಿಂದಿರುವ ಇರುವ ವಿಜ್ಞಾನವನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.
ಸಮೀಪದ ಕಣ್ಣೂರು ಸರ್ಕಾರಿ ಉನ್ನತೀಕರಿಸಿದ ಶಾಲೆಯ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಜ್ಞಾನ ಪ್ರಯೋಗದಲ್ಲಿ ತೊಡಗಿಸಿಕೊಂಡರು.
‘ಬಲಿ ತೆಗೆಯುವುದು, ನೆತ್ತರು ನೀರು ಕಾಯಿಯಲ್ಲಿ ಬೆಂಕಿ ಬರಿಸುವುದು, ಕರ್ಪೂರವನ್ನು ಕೈಲಿ ಇಟ್ಟು ಹಚ್ಚಿಕೊಳ್ಳುವುದರ ಬಗ್ಗೆ ಮತ್ತು ಅದರ ಹಿಂದಿನ ಮರ್ಮವನ್ನು ವಿಜ್ಞಾನ ಪ್ರಯೋಗದಲ್ಲಿ ತಿಳಿದುಕೊಂಡೆವು. ಈ ಕಾರ್ಯಕ್ರಮದಿಂದ ಗ್ರಾಮಗಳಲ್ಲಿ ಇಂದಿಗೂ ಎಷ್ಟರ ಮಟ್ಟಿಗೆ ಮೂಢನಂಬಿಕೆಗಳು ಆಚರಣೆಯಲ್ಲಿವೆ ಎಂಬುದು ಗೊತ್ತಾಯಿತು’ ಎಂದು ಕಣ್ಣೂರು ಶಾಲೆಯ ವಿದ್ಯಾರ್ಥಿಗಳಾದ ಶೋಭ ಹಾಗೂ ಸಚಿನ್ ಹೇಳಿದರು.
‘ಜನವಂಚನೆಯ ಹೀನಕಾರ್ಯಕ್ಕೆ ಜನರಲ್ಲಿನ ಅಜ್ಞಾನ, ಜನರಲ್ಲಿನ ಮೌಢ್ಯ, ಮೂಢನಂಬಿಕೆಗಳು ಕಾರಣ. ಎಲ್ಲವನ್ನೂ ಧಾರ್ಮಿಕ ಚೌಕಟ್ಟಿನಲ್ಲಿ ನೋಡುವುದನ್ನು ಬಿಟ್ಟು ವೈಜ್ಞಾನಿಕ ಮನೋಭಾವದಿಂದ ನೋಡುವುದನ್ನು ಕಲಿಯಬೇಕಾಗಿದೆ. ವಿಜ್ಞಾನ ಮತ್ತು ವೈಚಾರಿಕತೆಯ ಪ್ರಯೋಗ ಶೀಲತ್ವದ ಗುಣವನ್ನು ಬೆಳೆಸಿಕೊಳ್ಳಬೇಕು. ತಲೆಮಾರಿನಿಂದ ತಲೆಮಾರಿಗೆ ಮನುಷ್ಯನ ತಲೆಯಲ್ಲಿ ಮೂಢತ್ವವನ್ನು ಬಿತ್ತುವ ಜನರ ನಡುವೆ ನಾವು ಪ್ರಶ್ನೆ ಮಾಡುವುದರ ಮೂಲಕ ವಿಜ್ಞಾನವನ್ನು ಅರಿಯಬೇಕಾಗಿದೆ ಈ ನಿಟ್ಟಿನಲ್ಲಿ ಬಾಲ್ಯದಿಂದಲೇ ಮಕ್ಕಳಿಗೆ ಪ್ರಶ್ನಿಸುವ ಮನೋಭಾವವನ್ನು ಬೆಳೆಸಬೇಕಿದೆ’ ಎಂದು ಮುಖ್ಯಶಿಕ್ಷಕ ಆರ್.ಮಹೇಶ್.
‘ಮೂಢನಂಬಿಕೆ, ಭಾನಾಮತಿ, ದೆವ್ವ ಭೂತ, ಮಾಯ ಮಾಟ ಎಂಬುದಕ್ಕೆ ನಮ್ಮ ಮನಸ್ಸೇ ಕಾರಣ. ಪವಾಡ ರಹಸ್ಯದ ಬಯಲಿನಿಂದ ಅದರ ಹಿಂದಿನ ಸತ್ಯವನ್ನು ಇಂದಿನ ವಿಜ್ಞಾನ ಪ್ರಯೋಗದಿಂದ ತಿಳಿದುಕೊಳ್ಳಲು ಸಾಧ್ಯವಾಯಿತು. ಶಿಕ್ಷಕರು ಸಹ ಪ್ರಾಯೋಗಿಕವಾಗಿ ತಿಳಿಸಿಕೊಡುವ ಮೂಲಕ ನಮ್ಮಲ್ಲಿ ವೈಜ್ಞಾನಿಕ ಮನೊಭಾವ ಮೂಡುವಂತೆ ಮಾಡಿದ್ದಾರೆ’ ಎಂದು ಕಾಮಗೆರೆ ಶಾಲೆಯ ಸುಧಾ, ಸಜಿನಿ ಹಾಗೂ ಮಸ್ಕಾನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.