ADVERTISEMENT

ಗಾಳಿ ಸಹಿತ ಮಳೆ; 60ಕ್ಕೂ ಹೆಚ್ಚು ಎಕರೆ ಬಾಳೆ ಹಾನಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 15:25 IST
Last Updated 6 ಏಪ್ರಿಲ್ 2020, 15:25 IST
ಉತ್ತುವಳ್ಳಿ ಗ್ರಾಮದಲ್ಲಿ ಗಾಳಿ ಮಳೆಗೆ ರೈತರೊಬ್ಬರು ಬೆಳೆದಿದ್ದ ನೇಂದ್ರ ಬಾಳೆ ನೆಲಕಚ್ಚಿರುವುದು
ಉತ್ತುವಳ್ಳಿ ಗ್ರಾಮದಲ್ಲಿ ಗಾಳಿ ಮಳೆಗೆ ರೈತರೊಬ್ಬರು ಬೆಳೆದಿದ್ದ ನೇಂದ್ರ ಬಾಳೆ ನೆಲಕಚ್ಚಿರುವುದು   

ಚಾಮರಾಜನಗರ: ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಸುರಿದ ಗಾಳಿ ಸಹಿತ ಮಳೆಗೆ 60ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆದ ಬಾಳೆ ತೋಟ ನಾಶವಾಗಿದೆ.

ಚಂದಕವಾಡಿ, ಕರಿನಂಜನಪುರ, ಶಿವಪುರ, ಉತ್ತುವಳ್ಳಿ ಸೇರಿದಂತೆ ವಿವಿಧ ಕಡೆಗಳಲ್ಲಿ ಕಟಾವಿಗೆ ಬಂದ ಏಲಕ್ಕಿ, ನೇಂದ್ರ ಮತ್ತು ಪಚ್ಚೆಬಾಳೆ ಗಿಡಗಳು ನೆಲಕ್ಕಚ್ಚಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ದಿಗ್ಬಂಧನದ ಕಾರಣಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದೇ ಇದ್ದುದರಿಂದ ಹಲವು ರೈತರು ಗೊನೆಗಳನ್ನು ಕೊಯ್ಯದೇ ಹಾಗೆಯೇ ಬಿಟ್ಟಿದ್ದರು. ತೋಟಗಾರಿಕಾ ಇಲಾಖೆಯು ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ADVERTISEMENT

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಶಿವಪ್ರಸಾದ್‌ ಅವರು, ‘28 ರೈತರ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಗಾಳಿ ಮಳೆಗೆ ನಾಶವಾಗಿದೆ. ಅಂದಾಜು 50ರಿಂದ 60 ಎಕರೆಗಳಷ್ಟು ಪ್ರದೇಶದಲ್ಲಿ ಹಾನಿ ಸಂಭವಿಸಿದಂತೆ ಕಾಣುತ್ತದೆ. ನಿಖರವಾದ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ’ ಎಂದರು.

‘ಕೆಲವು ಕಡೆ ಕಟಾವಿಗೆ ಬಂದಂತಹ ನೇಂದ್ರಬಾಳೆ ಧರೆಗೆ ಉರುಳಿದೆ. ದಿಗ್ಬಂಧನದ ನಂತರ ರೈತರಿಗೆ ಸಾಗಣೆ ಮಾಡಲು ಸಾಧ್ಯವಾಗಿಲ್ಲ. ಎಷ್ಟು ನಷ್ಟವಾಗಿದೆ ಎಂದು ತಿಳಿಯಲು ಎಲ್ಲ ತೋಟಗಳಿಗೆ ಭೇಟಿ ನೀಡುತ್ತಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.