ADVERTISEMENT

15ರಿಂದ ರೈತ ಬಂಧು ಅಭಿಯಾನ

ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 25 ಎರೆಹುಳು ತೊಟ್ಟಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 15:48 IST
Last Updated 11 ಆಗಸ್ಟ್ 2021, 15:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ರೈತರು ಎರೆಹುಳು ಗೊಬ್ಬರ ತಯಾರಿಸುವುದನ್ನು ಉತ್ತೇಜಿಸುವ ದೃಷ್ಟಿಯಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಜಿಲ್ಲೆಯಾದ್ಯಂತ ರೈತ ಬಂಧು ಅಭಿಯಾನವನ್ನು ಜಿಲ್ಲಾ ಪಂಚಾಯಿತಿ ಹಮ್ಮಿಕೊಂಡಿದೆ.

ಇದೇ 15ರಿಂದ ಅಕ್ಟೋಬರ್‌ 15ರವರೆಗೆ ಎರಡು ತಿಂಗಳ ಕಾಲ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಅಭಿಯಾನ ನಡೆಯಲಿದ್ದು, ಇದಕ್ಕೆ ಕೃಷಿ ಇಲಾಖೆ ಸಹಯೋಗ ನೀಡಲಿದೆ. ಅಭಿಯಾನದ ಅಡಿಯಲ್ಲಿ ಗ್ರಾಮ ಪಂಚಾಯಿತಿಯೊಂದರಲ್ಲಿ 25 ಎರೆಹುಳು ತೊಟ್ಟಿಯನ್ನು ನಿರ್ಮಿಸುವ ಉದ್ದೇಶವನ್ನು ಜಿಲ್ಲಾ ಪಂಚಾಯಿತಿ ಹೊಂದಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು, ಅಲೆಮಾರಿ ಜನಾಂಗದವರು, ಬಿಪಿಎಲ್ ಕುಟುಂಬಗಳು, ಸ್ತ್ರೀ ಪ್ರಧಾನ ಕುಟುಂಬಗಳು, ಸಣ್ಣ ಮತ್ತು ಅತೀ ಸಣ್ಣ ರೈತರು, ಅಂಗವಿಕಲ ಪ್ರಧಾನ ಕುಟುಂಬಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಪಾರಂಪರಿಕ ಅರಣ್ಯವಾಸಿಗಳು ಈ ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ.

ADVERTISEMENT

ಸಾವಯವ ಕೃಷಿಗೆ ಉತ್ತೇಜನ: ಈ ಅಭಿಯಾನವು ಸಾವಯವ ಕೃಷಿಗೆ ಉತ್ತೇಜನ ನೀಡಲಿದ್ದು,ತ್ಯಾಜ್ಯ ವಸ್ತುಗಳ ಸದ್ಬಳಕೆಯಿಂದ (ಕೃಷಿ, ಡೇರಿ) ಪರಿಸರ ಮಾಲಿನ್ಯ ಕಡಿಮೆಗೊಳಿಸಿ ಸ್ವಚ್ಛ ಪರಿಸರ ಸೃಷ್ಟಿಸಲು ಅನುಕೂಲವಾಗಲಿದೆ.

ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಹಾಗೂ ರೈತರಿಗೆ ಎರೆಹುಳು ಗೊಬ್ಬರದ ಉತ್ಪಾದನೆ ಹಾಗೂ ಉದ್ಯಮಶೀಲತೆಯ ಅವಕಾಶಗಳ ಬಗ್ಗೆ ಪೂರಕ ಮಾಹಿತಿ ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಆಸಕ್ತ ರೈತರು ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಬಹುದು. ಗ್ರಾಮ ಪಂಚಾಯತಿ ಕಚೇರಿಯಲ್ಲಿರುವ ಕಾಮಗಾರಿ ಬೇಡಿಕೆ ಪೆಟ್ಟಿಗೆಯಲ್ಲಿ ಅರ್ಜಿ ಹಾಕಬಹುದು. ಕಾಯಕ ಮಿತ್ರ ಮೊಬೈಲ್ ಆ್ಯ ಡೌನ್ ಲೋಡ್ ಮಾಡಿಕೊಂಡು ಅದರ ಮೂಲಕವೂ ಅರ್ಜಿ ಸಲ್ಲಿಸಬಹುದು. ಉಚಿತ ಸಹಾಯವಾಣಿ ಸಂಖ್ಯೆ 1800–425–8666 ಮೂಲಕ ಬೇಡಿಕೆ ಸಲ್ಲಿಸಬಹುದು.

ಮಾಹಿತಿಗಾಗಿ ಜಿಲ್ಲೆಯ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಹಾಯಕ ಕೃಷಿ ನಿರ್ದೇಶಕರುಗಳನ್ನು ಸಂಪರ್ಕಿಸಬಹುದು ಎಂದು ಹರ್ಷಲ್ ಭೊಯರ್ ನಾರಾಯಣ ರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

₹27 ಸಾವಿರ ಸಹಾಯಧನ

ಎರೆಹುಳು ತೊಟ್ಟಿ ನಿರ್ಮಾಣಕ್ಕೆ ₹27 ಸಾವಿರ ಸಹಾಯ ಧನವನ್ನು ಜಿಲ್ಲಾ ಪಂಚಾಯಿತಿ ನೀಡಲಿದೆ.

‘ಎರೆಹುಳು ತೊಟ್ಟಿ ನಿರ್ಮಾಣದಿಂದ ರೈತರಿಗೆ ಮನೆಯಲ್ಲೇ ಎರೆಹುಳು ಗೊಬ್ಬರ ಲಭ್ಯವಾಗಲಿದ್ದು, ರಾಸಾಯನಿಕ ಗೊಬ್ಬರದ ಬದಲಾಗಿ ಇದೇ ಗೊಬ್ಬರವನ್ನು ಬಳಸುವುದರಿಂದ ಉತ್ಪಾದನೆ ವೆಚ್ಚ ಕಡಿಮೆಯಾಗುವುದರಿಂದ ಆದಾಯ ಹೆಚ್ಚಲಿದೆ. ರಾಸಾಯನಿಕ ಗೊಬ್ಬರ, ಕೀಟನಾಶಕ ಹಾಗೂ ಶೀಲಿಂದ್ರ ನಾಶಕಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಕ್ಷೀಣಿಸುತ್ತದೆ. ಇದರಿಂದ ವಾತಾವರಣ ಕಲುಷಿತವಾಗುತ್ತದೆ. ಕೃಷಿ ಉತ್ಪನ್ನಗಳಲ್ಲಿ ರಾಸಾಯನಿಕ ಉಳಿಯುವಿಕೆಯಿಂದ ಉತ್ಪನ್ನಗಳ ಗುಣಮಟ್ಟ ಕಡಿಮೆಯಾಗುತ್ತದೆ. ಈ ಸಮಸ್ಯೆಗೆ ಎರೆಹುಳುಗೊಬ್ಬರ ಪರಿಹಾರವಾಗಲ್ಲುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೊಯರ್‌ ನಾರಾಯಣ ರಾವ್‌ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.