ADVERTISEMENT

ಚಾಮರಾಜನಗರ | ಮುಗಿದ ಬೇಸಿಗೆ ರಜೆ: ಶಾಲೆಯತ್ತ ಚಿಣ್ಣರ ಹೆಜ್ಜೆ

ಇಂದಿನಿಂದ ಸರ್ಕಾರಿ ಶಾಲೆಗಳು ಆರಂಭ; ಮೊದಲ ದಿನ ಸಿಹಿ ಊಟ; ಸಂತೋಷದಾಯಕ ಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 29 ಮೇ 2025, 15:16 IST
Last Updated 29 ಮೇ 2025, 15:16 IST
ಗುರುವಾರ ಚಾಮರಾಜನಗರದ ಉಪ್ಪಾರ ಬೀದಿಯ ಸರ್ಕಾರಿ ಶಾಲೆಯತ್ತ ಹೆಜ್ಜೆ ಹಾಕಿದ ಮಕ್ಕಳು
ಗುರುವಾರ ಚಾಮರಾಜನಗರದ ಉಪ್ಪಾರ ಬೀದಿಯ ಸರ್ಕಾರಿ ಶಾಲೆಯತ್ತ ಹೆಜ್ಜೆ ಹಾಕಿದ ಮಕ್ಕಳು   

ಚಾಮರಾಜನಗರ: ಬೇಸಿಗೆಯ ರಜೆ ಮುಗಿಸಿರುವ ವಿದ್ಯಾರ್ಥಿಗಳು ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಜಿಲ್ಲೆಯಲ್ಲಿ ಮೇ 30ರಿಂದ ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ಶಾಲೆಗಳು ಆರಂಭವಾಗುತ್ತಿದ್ದು, ಗುರುವಾರವೂ ಕೆಲವು ಶಾಲೆಗಳಿಗೆ ಮಕ್ಕಳು ಆಗಮಿಸಿದ್ದರು. 

ಯೂನಿಫಾರಂ ಧರಿಸಿ ಹೆಗಲಿಗೆ ಬ್ಯಾಗನ್ನೇರಿಸಿಕೊಂಡು ಚಾಮರಾಜನಗರದ ಉಪ್ಪಾರ ಬೀದಿಯಲ್ಲಿರುವ ಸರ್ಕಾರಿ ಶಾಲೆಗೆ ಬಂದ ವಿದ್ಯಾರ್ಥಿಗಳನ್ನು ಶಿಕ್ಷಕರು ಸ್ವಾಗತಿಸಿದರು. ಮೊದಲ ದಿನ ಮಕ್ಕಳ ಖುಷಿಗಾಗಿ ಸಂತೋಷದಾಯಕ ಚಟುವಟಿಕೆಗಳು ನಡೆದವು.

2025–26ನೇ ಸಾಲಿನ ಶೈಕ್ಷಣಿಕ ವರ್ಷವು ಮೇ 30ರಂದು ಪ್ರಾರಂಭವಾಗುತ್ತಿದ್ದು ಶಾಲಾ ಪ್ರಾರಂಭೋತ್ಸವವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂದು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಹಾಲು ಹಾಗೂ ಪೌಷ್ಟಿಕ ಆಹಾರ ವಿತರಣೆ ಮಾಡಲಾಗುವುದು ಎಂದು ಡಿಡಿಪಿಐ ರಾಮಚಂದ್ರ ರಾಜೇ ಅರಸ್ ತಿಳಿಸಿದ್ದಾರೆ.

ADVERTISEMENT

ಈಗಾಗಲೇ ಅಡುಗೆ ಪರಿಕರಗಳನ್ನು ಸ್ವಚ್ಛಗೊಳಿಸಲಾಗಿದ್ದು, ಬಿಸಿಯೂಟದ ಆಹಾರ ಪದಾರ್ಥಗಳ ಗುಣಮಟ್ಟ ಖಾತ್ರಿಪಡಿಸಿಕೊಳ್ಳಲಾಗಿದೆ. ಶಾಲಾ ಪ್ರಾರಂಭೋತ್ಸವ ದಿನದ ಮಕ್ಕಳಿಗೆ ಉಚಿತ ಸಮವಸ್ತ್ರ, ಪಠ್ಯಪುಸ್ತಕವನ್ನು ಜನಪ್ರತಿನಿಧಿಗಳು, ಎಸ್‌ಡಿಎಂಸಿ ವಿತರಿಸಲಿದೆ.

ಚಾಮರಾಜನಗರ ನಗರದ ಉಪ್ಪಾರ ಬೀದಿಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುವ ಶಾಲಾ ಪ್ರಾರಂಭೋತ್ಸವದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ, ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಹಾಗೂ ಹನೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಸಕ ಎಂ.ಆರ್.ಮಂಜುನಾಥ್ ಭಾಗವಹಿಸಲಿದ್ದಾರೆ.

ಮೇ 31ರವರೆಗೆ ವಿಶೇಷ ದಾಖಲಾತಿ ಆಂದೋಲನ ಹಾಗೂ ಜೂನ್ 2 ರಿಂದ 30 ರವರೆಗೆ ಶಾಲಾ ಹಂತದಲ್ಲಿ ಸಾಮಾನ್ಯ ದಾಖಲಾತಿ ಆಂದೋಲನ ನಡೆಸಲಿದ್ದು ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ನಿಗಾ ವಹಿಸಲಾಗುವುದು. ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಮಿಂಚಿನ ಸಂಚಾರ ಕಾರ್ಯಕ್ರಮ ಹಮ್ಮಿಕೊಂಡು 1ನೇ ತರಗತಿಗೆ ಮೊದಲ 40 ದಿನ ವಿದ್ಯಾಪ್ರವೇಶ ಹಾಗೂ 2 ರಿಂದ 10ನೇ ತರಗತಿಗಳಿಗೆ 15 ದಿನ ಸೇತುಬಂಧ ಕಾರ್ಯಕ್ರಮವನ್ನು ಕಡ್ಡಾಯವಾಗಿ ನಡೆಸಲು ಸೂಚಿಸಲಾಗಿದೆ ಎಂದು ಡಿಡಿಪಿಐ ಮಾಹಿತಿ ನೀಡಿದರು.

ಶಿಥಿಲ ಶಾಲಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳನ್ನು ಕೂರಿಸದಂತೆ ಎಚ್ಚರಿಕೆ ನೀಡಲಾಗಿದೆ. ಕೊಠಡಿಗಳಲ್ಲಿ ವಿದ್ಯುತ್ ಅವಘಡಗಳು ಸಂಭವಿಸದಂತೆ ಮುಂಜಾಗ್ರತೆ ವಹಿಸಲಾಗಿದೆ. ಶಾಲಾ ಆವರಣದಲ್ಲಿ ಮುರಿದು ಬೀಳುವಂತಹ ಮರಗಳಿದ್ದರೆ ತೆರವುಗೊಳಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಚಾಮರಾಜನಗರದ ಸೇವಾಭಾರತಿ ಕನ್ನಡ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದ ದಿನ ಸರಸ್ವತಿ ಪೂಜೆ ಆಯೋಜಿಸಿ ಮಕ್ಕಳನ್ನು ಸ್ವಾಗತಿಸಲಾಯಿತು

ಸರಸ್ವತಿ ಪೂಜೆ

ಚಾಮರಾಜನಗರದ ಶಂಕರಪುರ ಬಡಾವಣೆಯಲ್ಲಿರುವ ಸೇವಾ ಭಾರತಿ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಶಾಲಾ ಆರಂಭದ ದಿನ ಸರಸ್ವತಿ ಪೂಜೆ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಅಕ್ಷತೆ ವಿತರಿಸಿ ವಿಶೇಷವಾಗಿ ಶಾಲೆಯೊಳಗೆ ಬರ ಮಾಡಿಕೊಳ್ಳಲಾಯಿತು. ವಿದ್ಯಾರ್ಥಿಗಳು ದೇವರಿಗೆ ಅಕ್ಷತೆ ಸಮರ್ಪಿಸಿ ತರಗತಿ ಕೊಠಡಿ ಪ್ರವೇಶಿಸಿದರು. ಸೇವಾ ಭಾರತಿ ಸಂಸ್ಥೆಯ ಸದಸ್ಯ ಬಾಲಸುಬ್ರಹ್ಮಣ್ಯ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ್ ಶಿಕ್ಷಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.