ADVERTISEMENT

ಶ್ರಾವಣ ಸಡಗರಕ್ಕೆ ಸೋನೆಮಳೆಯ ಸಿಂಚನ

ಶ್ರಾವಣ ಬಂತು ನಾಡಿಗೆ, ಭಕ್ತರ ಸಡಗರ: ದಾಸರ ಶಂಖನಾದ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 7:00 IST
Last Updated 26 ಜುಲೈ 2025, 7:00 IST
ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದ ರಂಗನಾಥಸ್ವಾಮಿ ಬೆಟ್ಟದ ರಂಗಪ್ಪನಿಗೆ ಶ್ರಾವಣದ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿದೆ
ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದ ರಂಗನಾಥಸ್ವಾಮಿ ಬೆಟ್ಟದ ರಂಗಪ್ಪನಿಗೆ ಶ್ರಾವಣದ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿದೆ   

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಶ್ರಾವಣ ಮಾಸದ ಸಂಭ್ರಮ ಸೋನೆ ಮಳೆ, ಚಳಿ, ಮಂಜಿನ ಸಿಂಚನದ ನಡುವೆ ಕಾಲಿಟ್ಟಿದೆ. ಶ್ರಾವಣ ಮಾಸ ಗುರುವಾರದ ನಾಗರ ಅಮಾವಾಸ್ಯೆಯೊಂದಿಗೆ ಕಾಲಿಟ್ಟಿದ್ದು, ದಾಸರಲ್ಲಿ ಸಂಭ್ರಮ ಮನೆಮಾಡಿದೆ. ಹಲವು ದೇವಳಗಳಲ್ಲಿ ಭಕ್ತಿಯ ಒಲುಮೆ ಅರ್ಪಿಸಲು ಭಕ್ತಗಣ ಸಿದ್ಧತೆ ನಡೆಸಿದೆ.

ಹಿಂದೂ ಸಂಪ್ರದಾಯದಲ್ಲಿ ಶ್ರಾವಣಕ್ಕೆ ವಿಶೇಷ ಮಹತ್ವ ಪ್ರಾಪ್ತವಾಗಿದೆ. ಶ್ರಾವಣದಲ್ಲಿ ವಾರದ ಪ್ರತಿದಿನವೂ ಒಂದೊಂದು ದಧಿವ್ರತ, ಕ್ಷೀರವ್ರತ, ದ್ವಿದಳವ್ರತ, ಪೂಜೆ, ಅಭಿಷೇಕ ನಡೆಯಲಿದೆ. ಭೀಮನ ಅಮಾವಾಸ್ಯೆ ಆರಂಭದೊಂದಿಗೆ ಆರಾಧನೆಗಳು ಜರುಗುತ್ತವೆ. ಬೆಟ್ಟದ ರಂಗನಾಥ ಮತ್ತು ಪಟ್ಟಣದ ಚಿಕ್ಕತಿರುಪತಿ ದೇವಾಲಯಗಳಲ್ಲಿ ಭಕ್ತಾದಿಗಳು ಉಪವಾಸ ಇದ್ದು ಚಾತುರ್ಮಾಸ ಮಾಡುವ ವಾಡಿಕೆ ಇದೆ.

ಶ್ರಾವಣದಂದು ದೇವರಿಗೆ ಪಂಚಾಮೃತ ಅಭಿಷೇಕ, ಬಗೆಬಗೆ ಪುಷ್ಪಗಳ ಅಲಂಕಾರ, ನೈವೇದ್ಯ, ಕುಂಕುಮಾರ್ಚನೆ, ಮಂಗಳಾರತಿ, ತೀರ್ಥಪ್ರಸಾದ ವಿತರಣೆ ಹಾಗೂ ಪೂಜಾ ಕೈಂಕರ್ಯಗಳು ಸಾಂಗವಾಗಿ ನಡೆಸಲಾಗುತ್ತದೆ. ದಾಸರು ಬ್ಯಾಟ ಮನೆ ಉತ್ಸವದಲ್ಲಿ ಪಾಲ್ಗೊಂಡು ಭಗವಂತನನ್ನು ಸ್ಮರಿಸುತ್ತಾರೆ. ಶಂಖ ಜಾಗಟೆಗಳ ನೀನಾದ ಬನದಲ್ಲಿ ಪ್ರತಿಧ್ವನಿಸಲಿದೆ ಎಂದು ರಂಗಪ್ಪನ ದೇವಾಲಯ ಪಾರುಪತ್ತೆಗಾರ ರಾಜು ಹೇಳಿದರು.

ADVERTISEMENT

ಪಟ್ಟಣದ ಚಿಕ್ಕತಿರುಪತಿ ದೇವಾಲಯದಲ್ಲಿ ಶ್ರಾವಣದ 4 ವಾರಗಳು ಪೂಜೆಗಳು ವಿಜೃಂಭಣೆಯಿಂದ ನಡೆಯಲಿದೆ. ಶ್ರಾವಣ ಶುದ್ಧ ಬಿದಿಗೆ ಆಶ್ಲೇಷ ನಕ್ಷತ್ರದಲ್ಲಿ ಮೊದಲ ಅರ್ಚನೆ ಮಾಡಲಾಗುತ್ತದೆ. ಸ್ವಾಮಿಗೆ ವಿಶೇಷವಾಗಿ ಅಲಂಕರಿಸಿ, ದೇವಳವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗುತ್ತದೆ. ಭಕ್ತರು ಬಿಲ್ವಪತ್ರೆ, ಹೂವು, ಹಣ್ಣುಕಾಯಿ ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದು ಸುವರ್ಣ ತಿರುಮಲ ಶ್ರೀನಿವಾಸ ದೇವಾಲಯ ಸದಸ್ಯ ಸಂತೋಷ್ ಹೇಳಿದರು.

ಲಕ್ಷ ಭಕ್ತರ ನಿರೀಕ್ಷೆ:

ಬಿಳಿಗಿರಿಬೆಟ್ಟದಲ್ಲಿ ಮುಂಜಾನೆ 5ಕ್ಕೆ ಅಭಿಷೇಕ ಪೂಜೆ ನಡೆಯಲಿದೆ. 10 ಗಂಟೆಗೆ ದರ್ಶನಕ್ಕೆ ದೇಗುಲವನ್ನು ಭಕ್ತರಿಗೆ ಮುಕ್ತಗೊಳಿಸಲಾಗುತ್ತದೆ. ನಂತರ ಗರುಡೋತ್ಸವ ಹಾಗೂ ಹೂ ಅಲಂಕಾರ ಸೇವೆ ಇರಲಿದೆ. ಭಕ್ತಾದಿಗಳಿಗೆ ಸಂಜೆ ತನಕ ಪ್ರಸಾದ ವಿನಿಯೋಗ ನಡೆಯಲಿದೆ. ದಾಸರಿಂದ ಸಾಂಪ್ರದಾಯಿಕ ಆಪಾರಾಕ್ ಗೋಪಾರಕ್ ಸೇವೆ ನಡೆಯಲಿದೆ.

ಶ್ರಾವಣ ಮಾಸದಲ್ಲಿ ಸುಮಾರು ಲಕ್ಷಕ್ಕೂ ಹೆಚ್ಚು ಭಕ್ತರು ಬರುವ ನಿರೀಕ್ಷೆ ಇದ್ದು, ಪ್ರತಿವಾರವೂ ಭಕ್ತಾದಿಗಳ ಸಂಖ್ಯೆ ಏರಿಕೆಯಾಗಲಿದೆ. ಹಾಗಾಗಿ, ಹೆಚ್ಚಿನ ಬಸ್‌ಗಳ ವ್ಯವಸ್ಥೆ ಮಾಡುವಂತೆ ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಲಾಗಿದೆ ಎಂದು ದೇವಾಲಯ ಆಡಳಿತಾಧಿಕಾರಿ ವೈ.ಎನ್.ಮೋಹನ್ ಕುಮಾರ್ ಹೇಳಿದರು.

ಯಳಂದೂರು ಪಟ್ಟಣದ ಚಿಕ್ಕತಿರುಪತಿ ದೇಗುಲದಲ್ಲಿ ವೆಂಕಟಾದ್ರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.