ADVERTISEMENT

ಚಾಮರಾಜನಗರ | ಸಣ್ಣ ಕೈಗಾರಿಕೆಗೆ ಸಿಗಬೇಕಿದೆ ಉತ್ತೇಜನ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2023, 6:00 IST
Last Updated 28 ಆಗಸ್ಟ್ 2023, 6:00 IST
ಚಾಮರಾಜನಗರದ ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ಬೃಹತ್‌ ಕೈಗಾರಿಕೆ
ಚಾಮರಾಜನಗರದ ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ಬೃಹತ್‌ ಕೈಗಾರಿಕೆ   

ಚಾಮರಾಜನಗರ: ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತೀರಾ ಹಿಂದುಳಿದಿದ್ದ  ಗಡಿ ಜಿಲ್ಲೆ ಚಾಮರಾಜನಗರ ಈಗ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಜಿಲ್ಲೆಯಲ್ಲಿ ಕೈಗಾರಿಕೆಗಳ ಕೊರತೆ ಜಿಲ್ಲೆಯ ಹಿಂದುಳಿದಿರುವಿಕೆಗೆ ಪ್ರಮುಖ ಕಾರಣವಾಗಿತ್ತು. ಈಗ ಒಂದೊಂದೇ ಬೃಹತ್‌ ಕೈಗಾರಿಕೆಗಳು ಸ್ಥಾಪನೆಯಾಗ ತೊಡಗಿದ್ದು  ಸ್ಥಾಪನೆಯಾಗುತ್ತಿರುವುದು ಜಿಲ್ಲೆಯ ಪ್ರಗತಿಯ ನಡಿಗೆಗೆ ಇನ್ನಷ್ಟು ವೇಗ ನೀಡುವ ನಿರೀಕ್ಷೆಯಲ್ಲಿ ಜಿಲ್ಲೆಯ ಜನರಿದ್ದಾರೆ. 

ಇತ್ತೀಚಿನವರೆಗೂ ಜಿಲ್ಲೆಯಲ್ಲಿ ಗ್ರಾನೈಟ್‌ ಉದ್ದಿಮೆಗಳಷ್ಟೇ ಇದ್ದವು. 20 ಹೆಚ್ಚು ಗ್ರಾನೈಟ್‌ ಕಾರ್ಖಾನೆಗಳು ಇವೆ. ತಾಲ್ಲೂಕಿನ ಕೆಲ್ಲಂಬಳ್ಳಿ ಬದನಗುಪ್ಪೆಯಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪಡಿಸಿದ ನಂತರ ದೊಡ್ಡ ದೊಡ್ಡ ಕಾರ್ಖಾನೆಗಳು ಬರಲು ಆರಂಭಿಸಿವೆ.

ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಬೃಹತ್‌ ಉದ್ಯಮಗಳಿಗೆ ಸಿಗುವಷ್ಟು ಉತ್ತೇಜನ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ (ಎಂಎಸ್‌ಎಂಇ) ಕೈಗಾರಿಕೆಗಳಿಗೆ ಸಿಗುತ್ತಿಲ್ಲ ಎಂಬುದು ಉದ್ಯಮಿಗಳ ಅನಿಸಿಕೆ. 

ADVERTISEMENT

ಕೈಗಾರಿಕಾ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ, ಜಿಲ್ಲೆಯಲ್ಲಿ 17,713 ರಷ್ಟು ಅತಿ ಸಣ್ಣ ಮತ್ತು ಸಣ್ಣ, ಮಧ್ಯಮ ಕೈಗಾರಿಕೆಗಳಿವೆ. ₹7,566 ಕೋಟಿ ಬಂಡವಾಳ ಹೂಡಿಕೆಯಾಗಿದ್ದು, 92,853 ಮಂದಿಗೆ ಇಲ್ಲಿ ಉದ್ಯೋಗ ಸಿಕ್ಕಿದೆ. ಎಂಎಸ್‌ಎಂಇಗಳ ಸ್ಥಾಪನೆಗೆ ಜಿಲ್ಲೆಯಲ್ಲಿ ಸಾಕಷ್ಟು ಅವಕಾಶವಿದ್ದು, ಸರ್ಕಾರ, ಕೈಗಾರಿಕಾ ಇಲಾಖೆ ಮತ್ತು ಜಿಲ್ಲಾಡಳಿತ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂಬುದು ಬಹುತೇಕ ಉದ್ಯಮಿಗಳ ಒತ್ತಾಯ.

ಒಂದು ಕಾಲದಲ್ಲಿ ರೇಷ್ಮೆಗೆ ಹೆಸರಾಗಿದ್ದ ಜಿಲ್ಲೆಯಲ್ಲಿ ರೇಷ್ಮೆ ಉದ್ದಿಮೆಗಳಿದ್ದವು. ಸರ್ಕಾರವೇ ನಡೆಸುತ್ತಿದ್ದ ರೇಷ್ಮೆ ಕಾರ್ಖಾನೆಗಳು ಮೂರು ಇದ್ದವು. ಎಲ್ಲವೂ ಮುಚ್ಚಿ ಹೋಗಿದೆ. ಜಿಲ್ಲೆಯಲ್ಲಿ ಗುಡಿ ಕೈಗಾರಿಕೆಗಳು ಇವೆ. ಇವುಗಳು ಆರ್ಥಿಕವಾಗಿ ಸದೃಢವಾಗಿಲ್ಲ. 

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮವು ಕೊಳ್ಳೇಗಾಲದಲ್ಲಿ (ನಾಲ್ಕು ದಶಕಗಳಷ್ಟು ಹಳೆಯದು), ಚಾಮರಾಜನಗರದ ಉತ್ತವಳ್ಳಿ ಬಳಿ, ಗುಂಡ್ಲುಪೇಟೆಯ ಹೊರ ವಲಯದ ವೀರನಗೇಟ್‌ ಬಳಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪಡಿಸಿದೆ. ಆದರೆ, ಗುಂಡ್ಲುಪೇಟೆಯಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ನೀರು ಸೇರಿದಂತೆ ಇತರೆ ಮೂಲಸೌಕರ್ಯಗಳ ಕೊರತೆ ಇದೆ. ಇತರೆ ಕೈಗಾರಿಕಾ ಪ್ರದೇಶಗಳಲ್ಲೂ ಸೌಕರ್ಯಗಳ ಕೊರತೆ ಉದ್ದಿಮೆಗಳನ್ನು ಕಾಡುತ್ತಿವೆ. ನಿಗಮವು ಕೆಲ್ಲಂಬಳ್ಳಿ –ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕಾ ಉಪಲೇಔಟ್‌ ಮಾಡಲು ಹೊರಟಿದೆ. ಅಲ್ಲಿ ಎಲ್ಲ ಸೌಕರ್ಯಗಳಿರುವುದರಿಂದ ಸಣ್ಣ ಉದ್ದಿಮೆದಾರರಿಗೆ ಅನುಕೂಲವಾಗಬಹುದು. 

ಮಾಹಿತಿ, ಸಿಬ್ಬಂದಿ ಕೊರತೆ: ಉದ್ದಿಮೆ ಸ್ಥಾಪನೆ ಮತ್ತು ಪ್ರೋತ್ಸಾಹ ನೀಡಲು ಸರ್ಕಾರ ರೂಪಿಸಿರುವ ಯೋಜನೆಗಳ ಮಾಹಿತಿ ಕೊರೆತೆ ಉದ್ದಿಮೆ ಆರಂಭಿಸಲು ಇಚ್ಛಿಸಿರುವವರನ್ನು ಕಾಡುತ್ತಿದೆ. ಜಿಲ್ಲಾ ಕೈಗಾರಿಕಾ ಇಲಾಖೆ ಕೂಡ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆಯಿಂದ ನಲುಗಿದೆ. ಜಂಟಿ ನಿರ್ದೇಶಕರ ಹುದ್ದೆ ಸೇರಿದಂತೆ ಪ್ರಮುಖ ಹುದ್ದೆಗಳು ಖಾಲಿ ಇವೆ. ಉಪ ನಿರ್ದೇಶಕ ಒಬ್ಬರಿದ್ದು, ಅವರದ್ದೂ ಪ್ರಭಾರ ಸೇವೆ. 

ಮೊದಲಿಗೆ ಹೋಲಿಸಿದರೆ ಈಗ ಉದ್ದಿಮೆ ಸ್ಥಾಪನೆಗೆ ನೋಂದಣಿ ಮಾಡುತ್ತಿರುವವ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.

‘2022–23ರಲ್ಲಿ ಸರ್ಕಾರದ ಉದ್ಯಮ್‌ ಪೋರ್ಟಲ್‌ನಲ್ಲಿ ಜಿಲ್ಲೆಯ 4,634 ಮಂದಿ ಹೆಸರು ನೋಂದಣಿ ಮಾಡಿಕೊಂಡಿದ್ದರು. ನೋಂದಣಿ ಮಾಡಿದ ಬಳಿಕ ಎಲ್ಲರೂ ಉದ್ಯಮ ಸ್ಥಾಪಿಸುತ್ತಾರೆ ಎಂದಲ್ಲ. ಹೆಚ್ಚು ಆಸಕ್ತಿ ಇರುವವರು ಪ್ರಯತ್ನ ಪಡುತ್ತಾರೆ’ ಎಂದು ಹೇಳುತ್ತಾರೆ ಅವರು.

‘ಪ್ರಧಾನ ಮಂತ್ರಿ ಉದ್ಯೋಗ ಸೃಜನೆ ಯೋಜನೆಯಡಿ (ಪಿಎಂಇಜಿಪಿ) ಹಲವರು ಅತಿ ಸಣ್ಣ ಹಾಗೂ ಸಣ್ಣ ಉದ್ದಿಮೆಗೆ ಆಸಕ್ತಿ ತೋರುತ್ತಿದ್ದಾರೆ. ಕೆಲವರು ಯಶಸ್ವಿಯಾಗಿ ಉದ್ಯಮ ನಡೆಸಿಕೊಂಡೂ ಹೋಗುತ್ತಿದ್ದಾರೆ. ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ,  ಸಹಾಯಧನವನ್ನೂ ನೀಡಲಾಗುತ್ತದೆ’ ಎಂದು ಕೈಗಾರಿಕಾ ಇಲಾಖೆ ಉಪನಿರ್ದೇಶಕ ರಾಜೇಂದ್ರ ಪ್ರಸಾದ್ ತಿಳಿಸಿದರು. 

‘2022–23ರಲ್ಲಿ 195 ಜನರು ಪಿಎಂಇಜಿಪಿ ಅಡಿಯಲ್ಲಿ ಅರ್ಜಿ ಹಾಕಿದ್ದರು. 95 ಜನರಿಗೆ ಸಾಲ ಸಹಾಯಧನ ಮಂಜೂರಾಗಿತ್ತು. 2023–24ನೇ ಸಾಲಿನಲ್ಲಿ 86 ಮಂದಿ ಅರ್ಜಿ ಸಲ್ಲಿಸಿದ್ದು, 31 ಅರ್ಜಿಗಳನ್ನು ಪರಿಗಣಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು. 

ಸಾಲ ನೀಡಲು ಹಿಂದೇಟು

ಉದ್ದಿಮೆಗೆ ನೋಂದಣಿ ಮಾಡಿದ ನಂತರ ದಾಖಲೆಗಳನ್ನು ಸಂಗ್ರಹಿಸುವುದು, ಬ್ಯಾಂಕುಗಳಿಂದ ಸಾಲ ಪಡೆಯುವುದು ದೊಡ್ಡ ಸವಾಲು. ಬ್ಯಾಂಕುಗಳು ಹೆಚ್ಚುವರಿ ಭದ್ರತೆ ಕೇಳುತ್ತವೆ. ನಿಯಮಗಳ ಪ್ರಕಾರ, ವ್ಯಕ್ತಿಯೊಬ್ಬ ಸ್ಥಾಪಿಸುವ ಉದ್ದಿಮೆ, ಅಲ್ಲಿ ಬಳಸುವ ಯಂತ್ರೋಪಕರಣಗಳನ್ನೇ ಭದ್ರತೆಯಾಗಿ ಪರಿಗಣಿಸಬೇಕು. ಆದರೆ, ಇದರ ಜೊತೆಗೆ ಹೆಚ್ಚುವರಿ ಭದ್ರತೆ ಕೇಳುತ್ತಾರೆ. ಈ ರೀತಿ ಮಾಡಿದರೆ, ಹೆಚ್ಚು ಹಣ ಇಲ್ಲದ ವ್ಯಕ್ತಿ ಉದ್ದಿಮೆ ಸ್ಥಾಪಿಸಲು ಸಾಧ್ಯವೇ ಎಂದು ಪ್ರಶ್ನಿಸುತ್ತಾರೆ ಜಿಲ್ಲೆಯ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಎ.ಜಯಸಿಂಹ. 

ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡುವುದಕ್ಕಾಗಿ ಸರ್ಕಾರ ತೆರಿಗೆ ಹೊರೆ, ವಿದ್ಯುತ್‌ ಹೊರಗಳನ್ನು ಇಳಿಸಬೇಕು ಎಂದು ಒತ್ತಾಯಿಸುತ್ತಾರೆ ಅವರು.

ಪೂರಕ ವಾತಾವರಣ

ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣ ಇದೆ. ಹಲವು ಉದ್ದಿಮೆಗಳು ಸ್ಥಾಪನೆಯಾಗುತ್ತಿವೆ. ಸರ್ಕಾರವೂ ಉತ್ತೇಜನ ನೀಡುತ್ತಿದೆ. ಕೈಗಾರಿಕಾ ಪ್ರದೇಶಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಕ್ರಮ ವಹಿಸಲಾಗುತ್ತಿದೆ. ಉದ್ದಿಮೆ ಸ್ಥಾಪಿಸಲು ಇಚ್ಛಿಸುವವರಿಗೆ ಸರ್ಕಾರದ ಯೋಜನೆಗಳನ್ನು ತಿಳಿಸಿ ಕೊಡುತ್ತಿದ್ದೇವೆ. ಕೈಗಾರಿಕಾ ಸ್ಥಾಪನೆ ಪ್ರಕ್ರಿಯೆಯನ್ನು ಸರ್ಕಾರ ಸರಳಗೊಳಿಸಿದೆ. ಅರ್ಜಿ ಸಲ್ಲಿಸಲು ಆನ್‌ಲೈನ್‌ ವ್ಯವಸ್ಥೆ ಇದೆ. -ರಾಜೇಂದ್ರ ಪ್ರಸಾದ್ ಕೈಗಾರಿಕಾ ಇಲಾಖೆ ಉಪನಿರ್ದೇಶಕ

ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ಅಗತ್ಯ

ಜಿಲ್ಲೆಗೆ ಕೈಗಾರಿಕೆಗಳು ಬರುತ್ತಿರುವುದು ಸಂತೋಷ. ದೊಡ್ಡ ಉದ್ದಿಮೆಗಳ ಮಾದರಿಯಲ್ಲಿ ಸೂಕ್ಷ್ಮ ಅತಿ ಸಣ್ಣ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಒತ್ತು ನೀಡಬೇಕು. ಬೃಹತ್ ಉದ್ದಿಮೆಗೆ ಹೋಲಿಸಿದರೆ ಎಂಎಸ್ಎಂಇಗಳಲ್ಲಿ ಉದ್ಯೋಗ ಸೃಷ್ಟಿ ಜಾಸ್ತಿ. ತಳಮಟ್ಟದಲ್ಲಿ ಜನರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಾರೆ. ಸರ್ಕಾರ ಜಿಲ್ಲಾಡಳಿತ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸುವವರಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು. –ಎ.ಜಯಸಿಂಹ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ

ಕೈಗಾರಿಕಾ ಪ್ರದೇಶದಲ್ಲಿ ಸೌಲಭ್ಯ ಕಲ್ಪಿಸಿ ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಪೊಲೀಸ್ ಠಾಣೆ ಇಲ್ಲ. ಅಗ್ನಿಶಾಮಕ ದಳದ ಕಚೇರಿ ಇಲ್ಲ. ಸಾರಿಗೆ ಬಸ್ ಗಳು ಇಲ್ಲಿ ನಿಲ್ಲಿಸುವುದಿಲ್ಲ. ಹಾಗಾಗಿ ಕಾರ್ಮಿಕರು ಉದ್ಯೋಗಿಗಳಿಗೆ ಓಡಾಡುವುದಕ್ಕೆ ಕಷ್ಟವಾಗುತ್ತದೆ. ಇಂತಹ ಸೌಲಭ್ಯಗಳನ್ನು ಒದಗಿಸಲು ಜಿಲ್ಲಾಡಳಿತ ಕ್ರಮ ವಹಿಸಬೇಕು. ಗುಂಡ್ಲುಪೇಟೆಯಲ್ಲಿರುವ ಕೈಗಾರಿಕಾ ವಸಾಹತಿನಲ್ಲಿ ನೀರಿನ ಕೊರತೆ ಇದೆ. ಹಾಗಾಗಿ ಅಲ್ಲಿ ಉದ್ಯಮಗಳು ಬರುತ್ತಿಲ್ಲ. ನೀರನ್ನು ಬಳಕೆ ಮಾಡದ ಕೈಗಾರಿಕೆಗಳಿಗೆ ಅಲ್ಲಿ ಪ್ರೋತ್ಸಾಹ ನೀಡಬೇಕು. –ಕೆ.ಪ್ರಭಾಕರ್ ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ

ಪೂರಕ ಮಾಹಿತಿ: ಅವಿನ್ ಪ್ರಕಾಶ್ ವಿ., ನಾ.ಮಂಜುನಾಥಸ್ವಾಮಿ, ಹೆಗ್ಗವಾಡಿ ಮಹದೇವ್

ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಶೀಟು ತಯಾರಿಕಾ ಘಟಕದ ನೋಟ
ಕೊಳ್ಳೇಗಾಲದಲ್ಲಿರುವ ರೇಷ್ಮೆ ನೂಲು ತಯಾರಿಕಾ ಘಟಕದ ನೋಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.