ADVERTISEMENT

ಜಂಬೂ ಸವಾರಿಯಲ್ಲಿ ಪುನೀತ್‌ ಸ್ತಬ್ಧಚಿತ್ರ

ಜಿ.ಪಂನಿಂದ ‘ಚೆಲುವ ಚಾಮರಾಜನಗರ’ ರಾಯಭಾರಿಯ ಸ್ಮರಣೆ, ಪ್ರಕೃತಿ, ಜೀವ ವೈವಿಧ್ಯದ ಪ್ರತಿಬಿಂಬ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2022, 6:12 IST
Last Updated 4 ಅಕ್ಟೋಬರ್ 2022, 6:12 IST
ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲಿರುವ ಜಿಲ್ಲಾ ಪಂಚಾಯಿತಿ ಸಿದ್ಧಪಡಿಸಿರುವ ಸ್ತಬ್ಧಚಿತ್ರ. ಮುಂಭಾಗದಲ್ಲಿರುವ ಹುಲಿಯ ಪ್ರತಿಕೃತಿ (ಎಡ ಚಿತ್ರ) ಹಿಂಭಾಗದಲ್ಲಿ ಪುನೀತ್‌ ಅವರ ಪ್ರತಿಕೃತಿ (ಬಲ ಚಿತ್ರ)
ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲಿರುವ ಜಿಲ್ಲಾ ಪಂಚಾಯಿತಿ ಸಿದ್ಧಪಡಿಸಿರುವ ಸ್ತಬ್ಧಚಿತ್ರ. ಮುಂಭಾಗದಲ್ಲಿರುವ ಹುಲಿಯ ಪ್ರತಿಕೃತಿ (ಎಡ ಚಿತ್ರ) ಹಿಂಭಾಗದಲ್ಲಿ ಪುನೀತ್‌ ಅವರ ಪ್ರತಿಕೃತಿ (ಬಲ ಚಿತ್ರ)   

ಚಾಮರಾಜನಗರ: ವಿಜಯ ದಶಮಿಯ ದಿನ (ಬುಧವಾರ) ಮೈಸೂರಿನಲ್ಲಿ ನಡೆಯಲಿರುವ ವಿಶ್ವ ವಿಖ್ಯಾತ ಜಂಬೂ ಸವಾರಿಯಲ್ಲಿ ನಡೆಯುವ ಸ್ತಬ್ಧ ಚಿತ್ರಗಳ ಮೆರವಣಿಗೆಯಲ್ಲಿ ಜಿಲ್ಲೆಯಿಂದ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಪ್ರತಿಕೃತಿಯನ್ನೊಳಗೊಂಡ ಸ್ತಬ್ಧಚಿತ್ರ ಭಾಗವಹಿಸಲಿದೆ.

‍ಜಿಲ್ಲೆಯ ರಾಯಭಾರಿಯಾಗಿದ್ದ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಸ್ತಬ್ಧಚಿತ್ರದ ಮೂಲಕ ಗೌರವ ಸಲ್ಲಿಸಲು ಜಿಲ್ಲಾ ಪಂಚಾಯಿತಿ ಮುಂದಾಗಿದೆ. ಅಲ್ಲದೇ, ಜಿಲ್ಲೆಯ ಪ್ರಕೃತಿ, ವನ್ಯಜೀವಿ ಸಂಪತ್ತು, ಪವಾಡ ಪುರುಷ ಮಲೆ ಮಹದೇಶ್ವರ ಸ್ವಾಮಿಯ ಉಪಸ್ಥಿತಿಯನ್ನು ಸ್ತಬ್ಧಚಿತ್ರದಲ್ಲಿ ಬಿಂಬಿಸಲಿದೆ.

‘ಪ್ರಕೃತಿ ಮಡಿಲಿನ ಹುಲಿ ಮತ್ತು ಆನೆ ಅರಣ್ಯ ಧಾಮ’ ಎಂದು ಸ್ತಬ್ಧ ಚಿತ್ರವನ್ನು ಹೆಸರಿಡಲಾಗಿದೆ.

ADVERTISEMENT

ಹನೂರು ತಾಲ್ಲೂಕಿನ ಮಂಗಲ ಗ್ರಾಮದ ಕಲಾವಿದ ಮಹದೇವ್‌ ನೇತೃತ್ವದ ತಂಡ 15 ದಿನಗಳಿಂದ ಮೈಸೂರಿನಲ್ಲಿ ಸ್ತಬ್ಧಚಿತ್ರದ ತಯಾರಿಯಲ್ಲಿ ತೊಡಗಿದ್ದು, ಕೆಲಸ ಬಹುತೇಕ ಪೂರ್ಣಗೊಂಡಿದೆ. ಮಂಗಳವಾರ ಸ್ತಬ್ಧಚಿತ್ರ ಸಿದ್ಧಗೊಳ್ಳಲಿದೆ.

ಸ್ತಬ್ಧಚಿತ್ರ ಹೀಗಿದೆ: ಸ್ತಬ್ಧಚಿತ್ರದ ಮುಂಭಾಗ ದೊಡ್ಡ ಹುಲಿಯ ಮುಖ ಇದೆ. ಹಸಿರು ಆವರಿಸಿರುವ ಬೆಟ್ಟ, ಅಲ್ಲಿ ಆನೆ ಸೇರಿದಂತೆ ಇತರ ಪ್ರಾಣಿಗಳ ಪ್ರತಿಕೃತಿಗಳು. ಮಧ್ಯದಲ್ಲಿ ಹುಲಿಯ ಮೇಲೆ ಕುಳಿತಿರುವ ಮಲೆ ಮಹದೇಶ್ವರ ಸ್ವಾಮಿಯ ಪ್ರತಿಕೃತಿ ಹಾಗೂ ಹಿಂಭಾಗದಲ್ಲಿ ಮಂದಸ್ಮಿತ ಪುನೀತ್‌ರಾಜ್‌ಕುಮಾರ್‌ ಅವರ ದೊಡ್ಡ ಪ್ರತಿಕೃತಿ ಅಳವಡಿಸಲಾಗಿದೆ.

ಕಲಾವಿದ ಮಹದೇವ್‌ ಹಾಗೂ 15 ಸದಸ್ಯರ ತಂಡ ಸ್ತಬ್ಧಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

‘ಪುನೀತ್‌ ರಾಜ್‌ಕುಮಾರ್‌ ಅವರು ‘ಚೆಲುವ ಚಾಮರಾಜನಗರ’ದ ರಾಯಭಾರಿಯಾಗಿದ್ದವರು. ಅವರನ್ನು ಸ್ಮರಿಸುವ ಉದ್ದೇಶದಿಂದ ಅವರ ಪ್ರತಿಕೃತಿಯನ್ನು ಸ್ತಬ್ಧ ಚಿತ್ರದಲ್ಲಿ ಪ್ರಧಾನವಾಗಿ ಬಳಸಲಾಗಿದೆ’ ಎಂದು ಕಲಾವಿದ ಮಹದೇವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯಲ್ಲಿ ಎರಡು ಹುಲಿ ಸಂರಕ್ಷಿತ ಪ್ರದೇಶಗಳಿವೆ. ಇನ್ನೆರಡು ವನ್ಯಧಾಮಗಳಿವೆ. ಹುಲಿ, ಆನೆಗಳು ಸೇರಿದಂತೆ ಹಲವು ಪ್ರಾಣಿಗಳು ಇಲ್ಲಿ ನೆಲೆಸಿವೆ. ಮಲೆ ಮಹದೇಶ್ವರ ಸ್ವಾಮಿ ಜಿಲ್ಲೆಯ ಜನರ ಆರಾಧ್ಯ ದೈವ. ಈ ಎಲ್ಲ ಅಂಶಗಳನ್ನು ಸ್ತಬ್ಧಚಿತ್ರದಲ್ಲಿ ಬಿಂಬಿಸುವ ಪ್ರಯತ್ನ ಮಾಡಿದ್ದೇವೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.