ಗುಂಡ್ಲುಪೇಟೆ: ‘ಹುತ್ತಕ್ಕೆ ಹಾಲು ಮತ್ತು ಪೌಷ್ಟಿಕ ಆಹಾರ ಎರೆಯುವ ಸಂಪ್ರದಾಯ ಮೌಢ್ಯದಿಂದ ಕೂಡಿದೆ’ ಎಂದು ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಸುಭಾಷ್ ಮಾಡ್ರಹಳ್ಳಿ ಹೇಳಿದರು.
ತಾಲ್ಲೂಕಿನ ರಾಘವಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾನವ ಬಂಧುತ್ವ ವೇದಿಕೆ, ಕರ್ನಾಟಕ ಕಾವಲು ಪಡೆ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಮಹಾ ನಾಯಕ ಶ್ರೇಯೋಭಿವೃಧ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ನಾಗರ ಪಂಚಮಿ ಅಂಗವಾಗಿ ಆಯೋಜಿಸಲಾಗಿದ್ದ ಬಸವ ಪಂಚಮಿ ಆಚರಣಾ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಾಲು ಹಾಗೂ ಫಲಾಹಾರ ವಿತರಿಸಿ ಮಾತನಾಡಿದರು.
‘ಹುತ್ತಕ್ಕೆ ಹಾಲೆರೆವ ನಾಗರ ಪಂಚಮಿ ಮೌಢ್ಯದ ಬಗ್ಗೆ 12ನೇ ಶತಮಾನದಲ್ಲೆ ಬಸವಾದಿ ಶರಣರು ಮಾತನಾಡಿದ್ದಾರೆ. ಇದು ಆಹಾರ ಪದಾರ್ಥಗಳ ದುರ್ಬಳಕೆ ಮಾಡಿಕೊಂಡಂತೆ. ಹಾವುಗಳು ಸರೀಸೃಪ ವರ್ಗಕ್ಕೆ ಸೇರಿದ ಜೀವಿಗಳು. ಅವು ದ್ರವ ಪದಾರ್ಥಗಳನ್ನು ಸೇವಿಸುವುದಿಲ್ಲ. ಕಪ್ಪೆ, ಓತಿಕ್ಯಾತ ಹಾಗೂ ಕೀಟಗಳನ್ನು ಬೇಟೆಯಾಡಿ ತಿನ್ನುತ್ತವೆ. ಆಹಾರ ರಾಷ್ಟ್ರೀಯ ಸಂಪತ್ತಾಗಿದ್ದು, ಅದನ್ನು ಹಾಳಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ’ ಎಂದು ತಿಳಿಸಿದರು.
ವಲಯ ಸಂಪನ್ಮೂಲ ವ್ಯಕ್ತಿ ದೊರೆಸ್ವಾಮಿ ಮಾತನಾಡಿ, ‘ವೈಚಾರಿಕ ವಿಚಾರಗಳು ಸಮಾಜವನ್ನು ಸದೃಢಗೊಳಿಸುತ್ತವೆ. ಸರ್ಕಾರ ಕೂಡ ಅನೇಕ ಜನಪರ ಯೋಜನೆಗಳ ಮೂಲಕ ಪೌಷ್ಟಿಕಾಹಾರ ವಿತರಣೆ ಮಾಡುತ್ತಿದೆ. ಇದನ್ನು ಶಾಲಾ ಮಕ್ಕಳು ಹಾಗೂ ಫಲಾನುಭವಿಗಳು ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಆರ್.ಡಿ.ಉಲ್ಲಾಸ್, ಮಾನವ ಬಂಧುತ್ವ ವೇದಿಕೆ ತಾಲ್ಲೂಕು ಸಂಚಾಲಕ ಆರ್.ಸೋಮಣ್ಣ, ಮುಖ್ಯ ಶಿಕ್ಷಕ ರವಿ, ರಾಮೇಗೌಡ, ಕೆ.ಎಂ.ಮನಸ್, ಮಿಮಿಕ್ರಿ ರಾಜೀವ್, ರವಿಕುಮಾರ್, ನಾರಾಯಣ್, ಅಂಗನವಾಡಿ ಶಿಕ್ಷಕಿ ರೇಣುಕಾ, ಅತಿಥಿ ಶಿಕ್ಷಕಿ ಚಂದ್ರಕಲಾ, ಅಡುಗೆ ಸಹಾಯಕಿ ಭಾಗ್ಯ, ಉಮಾ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.