ADVERTISEMENT

ಮಾನವ –ಆನೆ ಸಂಘರ್ಷ: ಶಾಶ್ವತ ತಡೆಗೆ ಅಧ್ಯಯನ

ವಿಜ್ಞಾನಿ ಸುರೇಂದ್ರ ವರ್ಮಾ ನೇತೃತ್ವದ ತಂಡದಿಂದ ಮೂರು ರಕ್ಷಿತಾರಣ್ಯಗಳಲ್ಲಿ ಅಧ್ಯಯನ

ಸೂರ್ಯನಾರಾಯಣ ವಿ
Published 11 ಆಗಸ್ಟ್ 2021, 16:22 IST
Last Updated 11 ಆಗಸ್ಟ್ 2021, 16:22 IST
ವಿಜ್ಞಾನಿ ಸುರೇಂದ್ರ ವರ್ಮಾ ಅವರು ಕಾವೇರಿ ವನ್ಯಧಾಮದ ವ್ಯಾಪ್ತಿಯಲ್ಲಿ ಅಧ್ಯಯನ ನಡೆಸುವ ಸಂದರ್ಭದಲ್ಲಿ ನಕ್ಷೆಯನ್ನು ಪರಿಶೀಲಿಸಿದರು. ವನ್ಯಧಾಮದ ಹಿಂದಿನ ಡಿಸಿಎಫ್‌ ರಮೇಶ್‌ ಹಾಗೂ ಇತರ ಸಿಬ್ಬಂದಿ ಇದ್ದಾರೆ  
ವಿಜ್ಞಾನಿ ಸುರೇಂದ್ರ ವರ್ಮಾ ಅವರು ಕಾವೇರಿ ವನ್ಯಧಾಮದ ವ್ಯಾಪ್ತಿಯಲ್ಲಿ ಅಧ್ಯಯನ ನಡೆಸುವ ಸಂದರ್ಭದಲ್ಲಿ ನಕ್ಷೆಯನ್ನು ಪರಿಶೀಲಿಸಿದರು. ವನ್ಯಧಾಮದ ಹಿಂದಿನ ಡಿಸಿಎಫ್‌ ರಮೇಶ್‌ ಹಾಗೂ ಇತರ ಸಿಬ್ಬಂದಿ ಇದ್ದಾರೆ     

ಚಾಮರಾಜನಗರ: ಶೇ 49ರಷ್ಟು ಅರಣ್ಯ ಭಾಗವನ್ನು ಹೊಂದಿರುವ ಜಿಲ್ಲೆಯಲ್ಲಿ ಮಾನವ–ಆನೆ ಸಂಘರ್ಷವನ್ನು ಶಾಶ್ವತವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಅರಿಯುವುದಕ್ಕಾಗಿ ಅರಣ್ಯ ಇಲಾಖೆ ತಜ್ಞರ ಮೂಲಕ ಅಧ್ಯಯನ ನಡೆಸಿದೆ.

ಚಾಮಮರಾಜನಗರ ಪ್ರಾದೇಶಿಕ ವೃತ್ತದ ವ್ಯಾಪ್ತಿಗೆ ಬರುವ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶ, ಮಲೆ ಮಹದೇಶ್ವರ ವನ್ಯಧಾಮ ಹಾಗೂ ಕಾವೇರಿ ವನ್ಯಧಾಮಗಳಲ್ಲಿ (ರಾಮನಗರ ಜಿಲ್ಲೆಯೂ ಸೇರಿ) ಅಧ್ಯಯನ ನಡೆಸಲಾಗಿದೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಭಾಗವಾಗಿ ಕಾರ್ಯನಿರ್ವಹಿಸುತ್ತಿರುವ ಏಷ್ಯನ್‌ ನೇಚರ್‌ ಕನ್ಸರ್ವೇಷನ್‌ ಫೌಂಡೇಷನ್ನಿನ (ಎಎನ್‌ಸಿಎಫ್‌) ಜೀವ ವಿಜ್ಞಾನಿಸುರೇಂದ್ರ ವರ್ಮಾ ನೇತೃತ್ವದ ತಂಡ ಲಾಕ್‌ಡೌನ್‌ ಅವಧಿಯಲ್ಲಿ ಮೂರು ರಕ್ಷಿತಾರಣ್ಯಗಳ ಗಡಿ ಭಾಗಗಳಲ್ಲಿ ಸಂಚರಿಸಿ, ಮಾನವ ವನ್ಯಜೀವಿ ಸಂಘರ್ಷ ಅದರಲ್ಲೂ ವಿಶೇಷವಾಗಿ ಆನೆ–ಮಾನವ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಅನುಸರಿಸಬಹುದಾದ ಕ್ರಮಗಳ ಬಗ್ಗೆ ಮಾಹಿತಿ ಕಲೆ ಹಾಕಿದೆ.

ADVERTISEMENT

ಕಾವೇರಿ ವನ್ಯಧಾಮದ ಕಾಡಂಚಿನ ಪ್ರದೇಶಗಳಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳು ಹಾಗೂ ಅದಕ್ಕೆ ತಗುಲುವ ವೆಚ್ಚಗಳ ಬಗ್ಗೆ ವಿಸ್ತೃತ ವರದಿಯನ್ನು ತಂಡವು ಅರಣ್ಯ ಇಲಾಖೆಗೆ ಸಲ್ಲಿಸಿದೆ.

‘ಮಲೆ ಮಹದೇಶ್ವರ ವನ್ಯಧಾಮ ಹಾಗೂ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಸಂಬಂಧಿಸಿದಂತೆ ಅಧ್ಯಯನಕಾರರು ವರದಿ ಸಿದ್ಧಪಡಿಸುತ್ತಿದ್ದಾರೆ’ ಎಂದು ಚಾಮರಾಜನಗರ ಪ್ರಾದೇಶಿಕ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್‌) ಮನೋಜ್‌ ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮುಗಿಯದ ಕಥೆ: ‘ಅರಣ್ಯದ ಅಂಚಿನ ಪ್ರದೇಶಗಳಲ್ಲಿ ಮಾನವ ವನ್ಯಜೀವಿ ಸಂಘರ್ಷ ಮೊದಲಿನಿಂದಲೂ ಇದೆ. ಮುಂದೆಯೂ ಇರಲಿದೆ. ಸಂಘರ್ಷವನ್ನು ಕಡಿಮೆ ಮಾಡುವ ದಾರಿಗಳನ್ನು ಮಾತ್ರ ನಾವು ಹುಡುಕಬಹುದಷ್ಟೆ. ಅರಣ್ಯದ ಅಂಚಿನಲ್ಲಿ ಕಂದಕ ನಿರ್ಮಾಣ, ಸೌರ ಬೇಲಿ, ರೈಲು ಕಂಬಿ ಬೇಲಿಗಳ ನಿರ್ಮಾಣದಂತಹ ಕ್ರಮಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ. ಆನೆ ಹಾಗೂ ಇತರೆ ಪ್ರಾಣಿಗಳ ಉಪಟಳ ಜಾಸ್ತಿ ಇರುವ ಪ್ರದೇಶಗಳಲ್ಲಿ ಇಂತಹ ಬೇಲಿಗಳನ್ನು ನಿರ್ಮಿಸಲಾಗಿದೆ. ಸಂಘರ್ಷದ ಪ್ರಮಾಣ ಕಡಿಮೆಯಾಗಿದ್ದರೂ ಪೂರ್ಣವಾಗಿ ನಿಂತಿಲ್ಲ’ ಎಂದು ಅವರು ಹೇಳಿದರು.

‘ನನ್ನ ವ್ಯಾಪ್ತಿಗೆ ಬರು ಮೂರು ರಕ್ಷಿತಾರಣ್ಯಗಳಲ್ಲೂ ಆನೆ–ಮಾನವ ಸಂಘರ್ಷ ಇದೆ. ಇದರ ತಡೆಗೆ ಏನು ಮಾಡಬಹುದು ಎಂಬುದನ್ನು ತಿಳಿಯುವುದಕ್ಕಾಗಿ ಎಎನ್‌ಸಿಎಫ್‌ನಿಂದ ಅಧ್ಯಯನ ನಡೆಸಲಾಗಿದೆ. ತಜ್ಞರು ಲಾಕ್‌ಡೌನ್‌ ಅವಧಿಯಲ್ಲಿ ಕಾಡುಮೇಡು ಸುತ್ತಾಡಿ ಮಾಹಿತಿ ಕಲೆ ಹಾಕಿದ್ದಾರೆ. ಆನೆಗಳು ಕೃಷಿ ಜಮೀನುಗಳಿಗೆ ತೆರಳುವ ಜಾಗಗಳನ್ನು ಅವರು ಗುರುತಿಸಿದ್ದಾರೆ. ಅವುಗಳು ಗಡಿ ದಾಟುವುದನ್ನು ತಡೆಯಲು ಏನು ಮಾಡಬಹುದು ಎಂಬುದನ್ನು ವಿವರಿಸಿದ್ದಾರೆ. ಎಲ್ಲ ಕಡೆಯೂ ಆನೆ ಕಂದಕ ಕೆಲಸ ಮಾಡುವುದಿಲ್ಲ. ರೈಲ್ವೆ ಕಂಬಿ ಬೇಲಿ, ಸೌರ ಬೇಲಿಯೂ ಪರಿಣಾಮಕಾರಿಯಾಗುವುದಿಲ್ಲ. ಅಲ್ಲಿನ ಸ್ಥಿತಿಗತಿಗಳಿಗೆ ಸಂಬಂಧಿಸಿದಂತೆ ಏನು ತಡೆ ಮಾಡಬಹುದು ಎಂಬುದನ್ನು ಅಧ್ಯಯನಕಾರರು ತಮ್ಮ ವರದಿಯಲ್ಲಿ ವಿವರಿಸಿದ್ದಾರೆ’ ಎಂದು ಮನೋಜ್‌ ಕುಮಾರ್‌ ಅವರು ಮಾಹಿತಿ ನೀಡಿದರು.

ಶಾಶ್ವತ ತಡೆಗೆ ಬೇಕು ಕೋಟ್ಯಂತರ ರೂಪಾಯಿ

ವಿಜ್ಞಾನಿ ಸುರೇಂದ್ರ ವರ್ಮಾ ನೇತೃತ್ವದ ತಂಡವು ಕಾವೇರಿ ವನ್ಯಧಾಮದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ನೀಡಿದ್ದು, ಇದಕ್ಕೆ ₹145 ಕೋಟಿ ವೆಚ್ಚವಾಗಲಿದೆ ಎಂದು ಹೇಳಿದೆ. ಬಿಆರ್‌ಟಿ ಹಾಗೂ ಮಲೆ ಮಹದೇಶ್ವರ ವನ್ಯಧಾಮಗಳಿಗೆ ಸಂಬಂಧಿಸಿದಂತೆ ಶೀಘ್ರದಲ್ಲಿ ವರದಿ ಬರಲಿದೆ. ಅಲ್ಲಿಯೂ ಕೋಟ್ಯಂತರ ರೂಪಾಯಿ ಬೇಕಾಬಹುದು ಎಂಬ ನಿರೀಕ್ಷೆಯಲ್ಲಿ ಅರಣ್ಯ ಅಧಿಕಾರಿಗಳಿದ್ದಾರೆ.

‘ವರದಿಯಂತೆ ಯೋಜನೆಗಳನ್ನು ಅನುಷ್ಠಾನಗೊಳಿಸಿದರೆ ಪೂರ್ಣ ಅಲ್ಲದಿದ್ದರೂ ಶೇ 90ರಿಂದ 95ರಷ್ಟು ಪ್ರಮಾಣದಲ್ಲಿ ಮಾನವ–ಆನೆ ಸಂಘರ್ಷವನ್ನು ತಡೆಯಬಹುದು’ ಎಂದು ಸಿಸಿಎಫ್‌ ಮನೋಜ್‌ ಕುಮಾರ್‌ ಅವರು ಹೇಳಿದರು.

‘ಒಂದೇ ಬಾರಿಗೆ ಅಷ್ಟು ಅನುದಾನ ಸಿಗುವುದು ಕಷ್ಟ. ಹಂತ ಹಂತವಾಗಿ ಅವುಗಳನ್ನು ಜಾರಿಗೊಳಿಸುವುದಕ್ಕೆ ಅವಕಾಶ ಇದೆ. ತಜ್ಞರ ವರದಿಯಂತೆ ಕ್ರಮ ಕೈಗೊಂಡರೆ ಅರಣ್ಯ ಇಲಾಖೆಗೆ ಮಾತ್ರವಲ್ಲ; ಪ್ರಾಣಿಗಳ ಹಾವಳಿಯಿಂದ ಸಮಸ್ಯೆ ಎದುರಿಸುವ ರೈತರಿಗೂ ಸಾಕಷ್ಟು ಅನುಕೂಲವಾಗಲಿದೆ. ರೈತರ ಹಿತದೃಷ್ಟಿಯಿಂದ ಸರ್ಕಾರ ಈ ಯೋಜನೆಗಳನ್ನು ನೋಡಬೇಕು’ ಎಂದು ಹೇಳುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿಗಳು.

--

ಸಂಘರ್ಷ ತಡೆಗೆ ಎಲ್ಲರ ಸಹಕಾರ ಬೇಕು. ಸರ್ಕಾರದಿಂದ ಸೂಕ್ತ ಅನುದಾನವು ಸಿಗಬೇಕು. ಈ ನಿಟ್ಟಿನಲ್ಲಿ ಇಲಾಖೆ ಪ್ರಯತ್ನಿಸುತ್ತಿದೆ
ಮನೋಜ್‌ ಕುಮಾರ್‌, ಸಿಸಿಎಫ್‌, ಚಾಮರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.