ADVERTISEMENT

ವಸತಿಗೃಹಗಳು ಶಿಥಿಲ: ಆತಂಕದಲ್ಲಿ ನೌಕರರ ವಾಸ

ಸಂತೇಮರಹಳ್ಳಿ: ತಾಲ್ಲೂಕು ಪಂಚಾಯಿತಿಗೆ ಸೇರಿದ ಹಳೆಯ ಮನೆಗಳು, ದುರಸ್ತಿ ಮಾಡದ ಆಡಳಿತ

ಮಹದೇವ್ ಹೆಗ್ಗವಾಡಿಪುರ
Published 9 ಜನವರಿ 2020, 19:45 IST
Last Updated 9 ಜನವರಿ 2020, 19:45 IST
ಸಂತೇಮರಹಳ್ಳಿಯಲ್ಲಿರುವ ತಾಲ್ಲೂಕು ಪಂಚಾಯಿತಿಯ ವಸತಿಗೃಹಗಳ ದುಃಸ್ಥಿತಿ
ಸಂತೇಮರಹಳ್ಳಿಯಲ್ಲಿರುವ ತಾಲ್ಲೂಕು ಪಂಚಾಯಿತಿಯ ವಸತಿಗೃಹಗಳ ದುಃಸ್ಥಿತಿ   

ಸಂತೇಮರಹಳ್ಳಿ:ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿ ಹಿಂಭಾಗವಿರುವ ತಾಲ್ಲೂಕು ಪಂಚಾಯಿತಿಗೆ ಸೇರಿದ ವಸತಿಗೃಹಗಳು ಶಿಥಿಲಾವಸ್ಥೆ ತಲುಪಿದ್ದು, ಇಲ್ಲಿ ನೌಕರರು ಆತಂಕದಲ್ಲಿ ವಾಸ ಮಾಡುವಂತಾಗಿದೆ.

ಇಲ್ಲಿ ಏಳು ವಸತಿಗೃಹಗಳಿದ್ದು, ಎಲ್ಲವೂಹೆಂಚಿನ ಮನೆಗಳು. ಇವು ಎಷ್ಟೋ ವರ್ಷಗಳ ಹಿಂದೆ ನಿರ್ಮಿಸಿದ ಹಳೆಯ ಗೃಹಗಳು. ವಸತಿಗೃಹಗಳನ್ನು ಕಾಲ ಕಾಲಕ್ಕೆ ದುರಸ್ತಿಗೊಳಿಸದೆ ಇರುವುದರಿಂದ ಮನೆಗಳು ವಾಸಕ್ಕೆ ಯೋಗ್ಯವಿಲ್ಲದಂತಾಗಿವೆ. ಆದರೂ ನೌಕರರು ಇಲ್ಲಿ ಅನಿವಾರ್ಯವಾಗಿ ವಾಸಿಸುತ್ತಿದ್ದಾರೆ.

ಏಳೂ ವಸತಿಗೃಹಗಳಲ್ಲಿ ಸರ್ಕಾರಿ ನೌಕರರು ವಾಸಿಸುತ್ತಿದ್ದು, ಪ್ರತಿ ತಿಂಗಳು ನೌಕರರಿಂದ ತಾಲ್ಲೂಕು ಪಂಚಾಯಿತಿಗೆ ಬಾಡಿಗೆ ಸಂದಾಯವಾಗುತ್ತಿದೆ. ಇವುಗಳನ್ನು ದುರಸ್ತಿಗೊಳಿಸಿ ವಾಸಕ್ಕೆ ಅನುಕೂಲ ಮಾಡಿಕೊಟ್ಟಿಲ್ಲ ಎಂಬುದು ಇಲ್ಲಿನ ನೌಕರರ ದೂರು.

ADVERTISEMENT

ಗಾಳಿ-ಮಳೆಗೆ ವಸತಿಗೃಹಗಳ ಹೆಂಚುಗಳು ಹಾರಿ ಹೋಗುತ್ತಿವೆ. ಮಳೆ ಬಂದ ಸಂದರ್ಭದಲ್ಲಿ ನೀರು ಗೋಡೆಗಳ ಮೇಲೆ ಸೋರುತ್ತಿದೆ. ಇದರಿಂದ ಗೋಡೆಗಳು ತೇವಗೊಂಡು ಹಂತ ಹಂತವಾಗಿ ಕುಸಿಯುತ್ತಿವೆ. ನಿವಾಸಿಗಳು ಮಳೆಗಾಲದ ಸಮಯದಲ್ಲಿ ರಕ್ಷಣೆಗಾಗಿ ಮನೆಗಳ ಮೇಲೆ ಪ್ಲಾಸ್ಟಿಕ್ ಚೀಲಗಳನ್ನು ಹೊದಿಸಿ ಮಳೆಯಿಂದ ರಕ್ಷಿಸಿಕೊಳ್ಳುತ್ತಾರೆ.

ಚಾವಣಿಗಳು ಮುರಿದು ಬೀಳುತ್ತಿವೆ. ಗಾಳಿ ಬೀಸಿದಾಗ ಸನಿಹದಲ್ಲಿರುವ ಮರಗಳ ಎಲೆಗಳು, ಕಸಕಡ್ಡಿ, ದೂಳು ಮನೆಗಳ ಒಳಗಡೆ ಬೀಳುತ್ತಿದೆ. ಬಾಗಿಲುಗಳು ಭದ್ರವಿಲ್ಲದೆ ನಿವಾಸಿಗಳು ಕಳ್ಳರ ಭಯವನ್ನು ಎದುರಿಸಬೇಕಾಗಿದೆ. ದಿನಗಳು ಕಳೆದಂತೆ ಗೋಡೆಗಳಿಂದ ಸಿಮೆಂಟ್‌ ಉದುರುತ್ತಿದೆ. ನೆಲದ ಗಾರೆ ಹಾಳಾಗಿದೆ.

ಮನೆಗಳಿಂದ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲ. ಆದ್ದರಿಂದ ನೀರು ಗೋಡೆಗಳ ಸನಿಹದಲ್ಲಿ ಹರಿದು ಗೋಡೆಗಳು ಮತ್ತಷ್ಟು ಶಿಥಿಲಗೊಳ್ಳಲು ಕಾರಣವಾಗಿದೆ. ಮನೆಗಳ ಸುತ್ತಮುತ್ತ ಸ್ವಚ್ಛತೆಯೂ ಇಲ್ಲ. ವಸತಿಗೃಹಗಳಿಗೆ ಪ್ರತ್ಯೇಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಗ್ರಾಮ ಪಂಚಾಯಿತಿ ವತಿಯಿಂದ ಸಾರ್ವಜನಿಕ ನಲ್ಲಿಯಲ್ಲಿ ನೀರಿಗೆ ಕಾಯಬೇಕಾಗಿದೆ. ಇವುಗಳನ್ನು ಶೀಘ್ರದಲ್ಲೇ ದುರಸ್ತಿಪಡಿಸುವಂತೆ ನಿವಾಸಿಗಳು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ, ಇದುವರೆಗೆ ಯಾರೂ ಇತ್ತ ಗಮನ ಹರಿಸಿಲ್ಲ ಎಂಬುದು ಇಲ್ಲಿನ ನಿವಾಸಿಗಳ ದೂರು.

‘ಪಂಚಾಯಿತಿ ಸಭೆಯಲ್ಲಿ ಅನುಮೋದನೆಗೆ ಕ್ರಮ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರೇಮ್‌ ಕುಮಾರ್‌ ಅವರು, ‘ಈಗಾಗಲೇ ವಸತಿಗೃಹಗಳಿಗೆ ಭೇಟಿ ನೀಡಿ ಸಮಸ್ಯೆ ತಿಳಿದುಕೊಳ್ಳಲಾಗಿದೆ. ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡಗಳನ್ನು ನಿರ್ಮಿಸಲು ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಅನುಮೋದನೆ ಪಡೆದು ತೀರ್ಮಾನಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.