ಮಹದೇಶ್ವರ ಬೆಟ್ಟ: ಇಲ್ಲಿನ ದೀಪದಗಿರಿ ಒಡ್ಡುವಿನಲ್ಲಿ ₹ 20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ 108 ಅಡಿ ಎತ್ತರದ ಮಹದೇಶ್ವರ ಸ್ವಾಮಿ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಅನಾವರಣಗೊಳಿಸಿದರು.
ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಸಚಿವರಾದ ವಿ.ಸೋಮಣ್ಣ, ಎಸ್.ಟಿ.ಸೋಮಶೇಖರ್ ಅವರೊಂದಿಗೆ ಕ್ರೇನ್ ಮೂಲಕ ಪ್ರತಿಮೆ ಬಳಿಗೆ ತೆರಳಿದ ಮುಖ್ಯಮಂತ್ರಿ, ಮಹದೇಶ್ವರ ಸ್ವಾಮಿಯ ಪುಟ್ಟ ಪ್ರತಿಕೃತಿಗೆ ಪುಷ್ಪಾರ್ಚನೆ ಮಾಡಿ ಬೃಹತ್ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದರು. ಸಮಾರಂಭಕ್ಕೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಗೈರಾಗಿದ್ದರು.
‘ಮಹದೇಶ್ವರ ಬೆಟ್ಟದ ಇತಿಹಾಸದಲ್ಲಿ ಇದು ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ. ಪ್ರತಿಮೆಯಿಂದಾಗಿ ಕ್ಷೇತ್ರದ ಹಿರಿಮೆ ಹೆಚ್ಚಲಿದೆ. ಬೆಟ್ಟದ ಅಭಿವೃದ್ಧಿಗೆ ಸರ್ಕಾರ ನೂರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ’ ಎಂದು ಬೊಮ್ಮಾಯಿ ಹೇಳಿದರು.
ಬೆಳ್ಳಿ ರಥ ಅರ್ಪಣೆ: ಇದೇ ಸಂದರ್ಭದಲ್ಲಿ ಅವರು, ದೇವಾಲಯದ ನೂತನ ಬೆಳ್ಳಿರಥವನ್ನು ಮಹದೇಶ್ವರ ಸ್ವಾಮಿಗೆ ಅರ್ಪಿಸಿದರು. 560 ಕೆ.ಜಿ ಬೆಳ್ಳಿ ಗಟ್ಟಿಯನ್ನು ಕರಗಿಸಿ ₹ 20 ಲಕ್ಷ ವೆಚ್ಚದಲ್ಲಿ 17 ಅಡಿಗಳಷ್ಟು ಎತ್ತರದ ತೇಗದ ರಥಕ್ಕೆ ಕುಸುರಿ ಕೆತ್ತನೆಯುಳ್ಳ ಬೆಳ್ಳಿಯ ಕವಚ ಅಳವಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.