ಯಳಂದೂರು: ತಾಲ್ಲೂಕಿನ ಕೆಸ್ತೂರು, ಹೊನ್ನೂರು, ಮದ್ದೂರು, ಮಾಂಬಳ್ಳಿ, ಯರಿಯೂರು, ಯರಗಂಬಳ್ಳಿ ಹಾಗೂ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಶಾಲಾ ಆರಂಭೋತ್ಸವ ಅದ್ದೂರಿಯಾಗಿ ನಡೆಯಿತು. ಮಕ್ಕಳು ಸಡಗರ ಸಂಭ್ರಮಗಳ ನಡುವೆ ಹೊಸ ಧಿರಿಸು ತೊಟ್ಟು, ನಲಿಯುತ, ಕುಣಿಯುತ ಶಾಲೆಯತ್ತ ಬಂದರು.
ಮುಖ್ಯೋಪಾಧ್ಯಾಯ ಸಿದ್ದರಾಜು ಮಾತನಾಡಿ, ‘ಶಾಲೆಯ ವಿದ್ಯಾರ್ಥಿಗಳನ್ನು ಎತ್ತಿನಗಾಡಿ ಮತ್ತು ವಾಹನಗಳಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ಹಿರಿಯ ವಿದ್ಯಾರ್ಥಿಗಳು ಕಳಸ ಹೊತ್ತು ಸಾಗಿದರು. ಈ ಸಮಯ ಮಂಗಳವಾದ್ಯ, ತಮಟೆ ಬ್ಯಾಂಡ್ ಬಾರಿಸಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವಂತೆ ಘೋಷಣೆ ಕೂಗಲಾಯಿತು’ ಎಂದರು.
ಗ್ರಾಮೀಣ ಶಾಲೆಗಳ ಮುಂಭಾಗ ಶಿಕ್ಷಕಿಯರು ಬಣ್ಣದ ರಂಗೋಲಿ ಇಟ್ಟರೆ, ಶಿಕ್ಷಕರು ತಳಿರು ತೋರಣಗಳ ಸಿಂಗಾರ ಮಾಡಿ, ಹಬ್ಬದ ವಾತಾವರಣ ನಿರ್ಮಿಸಿದರು. ಮಕ್ಕಳಿಗೆ ಹೂ ಗುಚ್ಛ ನೀಡಿ ಸರಸ್ವತಿ ಪೂಜೆ ಮಾಡಿ ಸಹಿಯೂಟ ಬಡಿಸಲಾಯಿತು. ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಚಿನ್ನಸ್ವಾಮಿ, ಉಪಾಧ್ಯಕ್ಷೆ ಸಂಗೀತ, ಸದಸ್ಯರಾದ ರಾಜ, ಕಾವ್ಯ, ಶಿಕ್ಷಕರಾದ ನಂಜಯ್ಯ, ರಾಜೇಶ್, ಮಾಲಾವತಿ ಹಾಗೂ ಜಯಶ್ರೀ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.