ADVERTISEMENT

ಯೋಜನೆ ಸಮರ್ಪಕ ಅನುಷ್ಠಾನಕ್ಕೆ ತಾಕೀತು

ಮಾಹಿತಿ ನೀಡಲು ಪರದಾಡಿದ ಅಧಿಕಾರಿಗಳು: ಶಾಸಕರು, ಸದಸ್ಯರಿಂದ ತರಾಟೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 18:30 IST
Last Updated 15 ಅಕ್ಟೋಬರ್ 2019, 18:30 IST
ಶಾಸಕ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆ ನಡೆಯಿತು
ಶಾಸಕ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆ ನಡೆಯಿತು   

ಚಾಮರಾಜನಗರ: ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುವಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರು ತಾಲ್ಲೂಕುಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ತಾಲ್ಲೂಕು ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಸರ್ಕಾರದ ಮಟ್ಟದಲ್ಲಿ ಯೋಜನೆಗಳು ಅನುಷ್ಠಾನಗೊಳ್ಳುತ್ತವೆ. ಜಿಲ್ಲಾ ಹಾಗೂ ತಾಲ್ಲೂಕುಮಟ್ಟದ ಅಧಿಕಾರಿಗಳು ಯೋಜನೆಗಳನ್ನು ರೈತರು ಸೇರಿದಂತೆ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು’ ಎಂದರು.

ADVERTISEMENT

178 ಶಾಲಾ ಕೊಠಡಿ ಕೊರತೆ: ‘ತಾಲ್ಲೂಕು ವ್ಯಾಪ್ತಿಯಲ್ಲಿ ಶಿಥಿಲವಾಗಿರುವುದು ಸೇರಿ 178 ಸರ್ಕಾರಿ ಪ್ರಾಥಮಿಕ ಶಾಲಾಕೊಠಡಿಗಳ ಕೊರತೆ ಇದೆ. ಬೇರೆ ಕಡೆ ಸ್ಥಳಾವಕಾಶವಿಲ್ಲ. ಪ್ರಸ್ತುತ ಇರುವ ಕಟ್ಟಡಗಳನ್ನು ನೆಲಸಮ ಮಾಡಿ ಹೊಸ ಕಟ್ಟಡ ಕಟ್ಟಬೇಕು. ಇದರಲ್ಲಿ 148 ಕೊಠಡಿಗಳು ಶಿಥಿಲವಾಗಿದ್ದು ದುರಸ್ತಿ ಮಾಡಿಸಲು ಕಷ್ಟವಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮೀಪತಿ ಸಭೆಗೆ ಮಾಹಿತಿ ನೀಡಿದರು.

‘ಆ ಕಟ್ಟಡಗಳನ್ನು ನೆಲಸಮ ಮಾಡಿ ಕಟ್ಟಲು ಅಂದಾಜು ₹ 5 ಲಕ್ಷದಿಂದ ₹ 6 ಲಕ್ಷ ಖರ್ಚುಆಗುತ್ತದೆ. ಲೋಕೋಪಯೋಗಿ ಇಲಾಖೆ ನೆಲಸಮ ಮಾಡಲು ಬಿಡುವುದಿಲ್ಲ. ಸರ್ಕಾರದ ಮಟ್ಟದಲ್ಲಿಯೇ ಈ ಕಾರ್ಯ ನಡೆಯಬೇಕಿದೆ’ ಎಂದರು.

ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿ, ‘ಸರ್ಕಾರದ ನಿಯಮಗಳ ಪ್ರಕಾರ ಮುಂದುವರಿದರೆ ಹೊಸ ಕಟ್ಟಡ ನಿರ್ಮಿಸಲು 2–3 ವರ್ಷ ಬೇಕಾಗುತ್ತದೆ. ಆದ್ದರಿಂದ ಆಯಾ ಭಾಗದ ಎಸ್‌ಡಿಎಂಸಿ ಸದಸ್ಯರ ಸಭೆ ಕರೆದು ಚರ್ಚಿಸಿ ಪುನರ್‌ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಸೂಚಿಸಿದರು.

ಮುಖ್ಯ ಶಿಕ್ಷಕರಹುದ್ದೆ ಖಾಲಿ ಇದೆ: ತಾಲ್ಲೂಕು ವ್ಯಾಪ್ತಿಯ138 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 52 ಮುಖ್ಯ ಶಿಕ್ಷಕರ ಹುದ್ದೆ ಖಾಲಿ ಇವೆ. ಹಲವೆಡೆ ಪ್ರಭಾರ ಮುಖ್ಯ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಾಲೆಗಳಲ್ಲಿ ಹಿರಿಯ ಶಿಕ್ಷಕರೇ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ಲಕ್ಷ್ಮೀಪತಿ ಹೇಳಿದರು.

ಡಿ ಗ್ರೂಪ್‌ ನೌಕರರು: ‘29 ಸರ್ಕಾರಿ ಪ್ರೌಢಶಾಲೆಗಳಲ್ಲಿ12ರಲ್ಲಿ ‘ಡಿ’ ಗ್ರೂಪ್‌ ನೌಕರರ ಕೊರತೆ ಇದೆ. ಜಿಲ್ಲಾ ಪಂಚಾಯಿತಿ ಆವರ್ತಕ ನಿಧಿಯಲ್ಲಿ ₹5 ಸಾವಿರಸಂಬಳನೀಡಲು ಮುಂದಾದರೆ ಕೆಲಸಕ್ಕೆ ನೇಮಕ ಮಾಡಿಕೊಳ್ಳಬಹುದು. ಎಲ್ಲ ಪ್ರೌಢಶಾಲೆಗಳಿಗೂ ಹುದ್ದೆ ಮಂಜೂರು ಆಗಿದೆ. ಆದರೆ ನೇಮಕಾತಿ ಆಗಿಲ್ಲ’ ಎಂದು ಅವರು ಮಾಹಿತಿ ನೀಡಿದರು.

‘ಅನೇಕಶಾಲೆಗಳಲ್ಲಿಅನುದಾನವಿದ್ದರೂ ಕೆಲಸಗಾರರು ಸಿಗುತ್ತಿಲ್ಲ ಎಂಬ ಕಾರಣದಿಂದ ಶೌಚಾಲಯಗಳನ್ನು ನಿರ್ವಹಿಸಲು ಆಗುತ್ತಿಲ್ಲ. ಶೌಚಾಲಯ, ಕಾಂಪೌಂಡ್‌ ಇಲ್ಲದಿರುವ ಶಾಲೆಗಳ ಪಟ್ಟಿಯನ್ನು ಜಿಲ್ಲಾಮಟ್ಟದ ಇಲಾಖೆಗೆ ನೀಡಲಾಗಿದೆ’ ಎಂದರು.

ನರೇಗಾದಡಿ ಅವಕಾಶ: ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಜಿ.ಬಸವಣ್ಣ ಮಾತನಾಡಿ, ‘ನರೇಗಾ ಯೋಜನೆಯಡಿ ಶಾಲಾ ಕಾಂಪೌಂಡ್‌ ನಿರ್ಮಾಣಕ್ಕೆ ಅವಕಾಶವಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಶಿಕಲಾ, ಸಿ.ಎನ್.ಬಾಲರಾಜು, ಸದಾಶಿವಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೊಡ್ಡಮ್ಮ, ತಹಶೀಲ್ದಾರ್ ಮಹೇಶ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಪ್ರೇಮ್‌ ಕುಮಾರ್ ಇದ್ದರು.

ಗಿರಿಜನರಿಗೆ ಮೂಲಸೌಲಭ್ಯ ಕಲ್ಪಿಸಿ: ಶಾಸಕ ಸೂಚನೆ

‘ಗಿರಿಜನ ಉಪಯೋಜನೆಯಡಿ ವಿಶೇಷ ಅನುದಾನಗಳು ಗಿರಿಜನರಿಗೆ ಸಮರ್ಪಕವಾಗಿ ತಲುಪಿಲ್ಲ. ಆಹಾರ ಪದಾರ್ಥಗಳು ಸೇರಿದಂತೆ ಮೂಲಸೌಲಭ್ಯ ತಲುಪಿಸುವಲ್ಲಿ ಇಲಾಖೆಯ ಅಧಿಕಾರಿಗಳು ವಿಫಲವಾಗಿದ್ದಾರೆ. ಸಾಕುಪ್ರಾಣಿಗಳು ಮೃತಪಟ್ಟರೆ ಅವುಗಳ ವಿಮೆ ಹಣ ಕೂಡ ಸಮರ್ಪಕವಾಗಿ ವಿತರಣೆಯಾಗಿಲ್ಲ. ಇದಕ್ಕೆಲ್ಲ ಅಧಿಕಾರಿಗಳೇ ನೇರ ಹೊಣೆ’ ಎಂದು ಪುಟ್ಟರಂಗಶೆಟ್ಟಿ ಆರೋಪಿಸಿದರು.

ತಾಲ್ಲೂಕುಪರಿಶಿಷ್ಟವರ್ಗಗಳತಾಲ್ಲೂಕು ಕಲ್ಯಾಣಾಧಿಕಾರಿ ರಾಮಸ್ವಾಮಿ ಮಾತನಾಡಿ, ‘ಜಿಲ್ಲಾಮಟ್ಟದಿಂದ ಯೋಜನೆಗಳ ಪಟ್ಟಿ ಸಿಗಲಿದೆ. ಇದರ ಅನುಗುಣವಾಗಿ ಫಲಾನುಭವಿಗಳಿಗೆ ಅನುದಾನ ತಲುಪಿಸುತ್ತೇವೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆರೆಹಳ್ಳಿ ನವೀನ್‌ ಮಾತನಾಡಿ, ‘2018–19ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ. ಈ ಸಾಲಿನಡಿ ಟೆಂಡರ್‌ ಕೂಡ ಕರೆದಿಲ್ಲ’ ಎಂದು ದೂರಿದರು.

ಮಾಹಿತಿ ನೀಡದ ಅಧಿಕಾರಿಗಳು:ಸಭೆಯಲ್ಲಿಹಾಜರಿದ್ದ ಎಲ್ಲ ತಾಲ್ಲೂಕು ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿ ವಿವರಗಳನ್ನು ನೀಡಲು ಪರದಾಡಿದರು. ಯಾರೊಬ್ಬರಲ್ಲೂ ಸಂಪೂರ್ಣ ಮಾಹಿತಿ ಇರಲಿಲ್ಲ.

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಶಾಸಕರು ಮತ್ತು ಸದಸ್ಯರು, ‘ನಿಮ್ಮ ಬಳಿ ಸಂಪೂರ್ಣ ಮಾಹಿತಿ ಇಲ್ಲ. ಮೊದಲು ಸಭೆಗೆ ಪೂರ್ಣ ಮಾಹಿತಿ ಪಡೆದು ತಯಾರಾಗಿ ಬರಬೇಕು’ ಎಂದು ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.