ದುರಂತದ ಸಂಗ್ರಹ ಚಿತ್ರ
ಚಾಮರಾಜನಗರ: 2021, ಮೇ 2ರಂದು ಕೋವಿಡ್ ಸಮಯದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಸಂಭವಿಸಿದ ಘೋರ ಆಕ್ಸಿಜನ್ ದುರಂತದಲ್ಲಿ ದಾರುಣವಾಗಿ ಮೃತಪಟ್ಟ 34 ಜನರ ಕುಟುಂಬ ಸದಸ್ಯರ ಬೇಡಿಕಗಳಿಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮನ್ನಣೆ ಸಿಗಬಹುದು ಎಂಬ ನಿರೀಕ್ಷೆಗಳು ಹುಸಿಯಾಗಿವೆ.
ನಾಲ್ಕು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಸಂತ್ರಸ್ತ ಕುಟುಂಬಗಳು ಸರ್ಕಾರದ ನಡೆಯಿಂದ ತೀವ್ರ ಮನನೊಂದಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಪ್ರತಿರೋಧ ತೋರಲು ಹಿಂದೆ ಕೆಪಿಸಿಸಿ ವತಿಯಿಂದ ನೀಡಲಾಗಿದ್ದ ₹ 1 ಲಕ್ಷ ಪರಿಹಾರ ಮೊತ್ತವನ್ನು ಮರಳಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಮೃತರ ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ನಿರೀಕ್ಷೆ ಸಂತ್ರಸ್ತರಲ್ಲಿ ದಟ್ಟವಾಗಿತ್ತು. ಸಭೆ ನಡೆಯುವ ಪೂರ್ವಭಾವಿಯಾಗಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಸಂತ್ರಸ್ತರು ಮನವಿಯನ್ನೂ ಸಲ್ಲಿಸಿದ್ದರು. ಆದರೆ, ಸರ್ಕಾರ ಸ್ಪಂದನೆ ನೀಡದಿರುವುದು ಸಂತ್ರಸ್ತರಲ್ಲಿ ಅತೀವ ಬೇಸರ ತರಿಸಿದೆ.
‘ಮೃತರ ಕುಟುಂಬಗಳಿಗೆ ಸರ್ಕಾರ ಇದುವರೆಗೆ ಸಮರ್ಪಕ ಪರಿಹಾರ ವಿತರಿಸಿಲ್ಲ. ಅವಘಡ ನಡೆದಾಗ ಕೆಪಿಸಿಸಿ ವತಿಯಿಂದ ತಲಾ ₹ 1 ಲಕ್ಷ, ಅಂದಿನ ಸರ್ಕಾರ ಕೆಲವರಿಗೆ ₹ 2 ಲಕ್ಷ, ಕೆಲವರಿಗೆ ₹ 3 ಲಕ್ಷ ಪರಿಹಾರ ವಿತರಿಸಿದೆಯಷ್ಟೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಮ್ಲಜನಕ ದೊರೆಯದೆ ಬಲಿಯಾದ ಜೀವಗಳ ಬೆಲೆ ಇಷ್ಟೆಯೇ ಎಂದು ಪ್ರಶ್ನಿಸುತ್ತಾರೆ’ ಸಾಮಾಜಿಕ ಹೋರಾಟಗಾರ ಹಾಗೂ ನಗರಸಭೆ ಸದಸ್ಯ ಎಂ.ಮಹೇಶ್.
ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರೆಲ್ಲರೂ ಬಡ ಕುಟುಂಬಗಳಿಗೆ ಸೇರಿದವರಾಗಿದ್ದು, ಮನೆಗೆ ಆಧಾರಸ್ಥಂಬವಾಗಿದ್ದ ಪತಿ, ತಂದೆ, ಪುತ್ರನನ್ನು ಕಳೆದುಕೊಂಡಿದ್ದಾರೆ. ಮಕ್ಕಳ ವಿದ್ಯಾಭ್ಯಾಸ, ಹಿರಿಜೀವಗಳ ಆಸ್ಪತ್ರೆ ವೆಚ್ಚ ಭರಿಸಲಾಗದೆ, ಜೀವನ ನಿರ್ವಹಣೆ ಮಾಡಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕನಿಷ್ಠ ಕಾಳಜಿ ತೋರದಿರುವುದು ಖಂಡನೀಯ ಎನ್ನುತ್ತಾರೆ ಮಹೇಶ್.
‘ಭಾರತ್ ಜೋಡೋ ಪಾದಯಾತ್ರೆಯ ಸಂದರ್ಭ ಸಂತ್ರಸ್ತರ ಅಹವಾಲು ಆಲಿಸಿದ್ದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ್ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಪತಿ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಬದುಕಿಗೊಂದು ಆಸರೆ ದೊರೆಯಿತು ಎಂಬ ಸಮಾಧಾನ ಇತ್ತು. ನಾಲ್ಕು ವರ್ಷಗಳು ಕಳೆಯುತ್ತಾ ಬಂದರೂ ಭರವಸೆ ಈಡೇರಿಸಿಲ್ಲ’ ಎಂದು ನಾಗರತ್ನಾ ಬೇಸರ ವ್ಯಕ್ತಪಡಿಸಿದರು.
‘ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಹೇಳಿದ್ದ ಕಾಂಗ್ರೆಸ್ ನಾಯಕರು ಮಾತು ತಪ್ಪಿದ್ದಾರೆ. ನುಡಿದಂತೆ ನಡೆಯುವುದಾಗಿ ಹೇಳಿಕೊಳ್ಳುವ ಸರ್ಕಾರಕ್ಕೆ ಇದು ಶೋಭೆ ತರುವುದಿಲ್ಲ. ಮುಖ್ಯಮಂತ್ರಿಗಳು ಸಂತ್ರಸ್ತರ ಅಳಲು ಆಲಿಸದೆ ಹೋಗಿದ್ದು ತುಂಬಾ ನೋವು ತಂದಿದೆ. ಸರ್ಕಾರ ಒಂದು ವಾರದೊಳಗೆ ಬೇಡಿಕೆ ಈಡೇರಿಸದಿದ್ದರೆ ಸರ್ಕಾರದ ಹೆಸರು ಬರೆದಿಟ್ಟು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಅವರು.
ಜಿಲ್ಲೆಯ ಜನರ ಕಷ್ಟ ನಿವಾರಿಸಲು ಮುಖ್ಯಮಂತ್ರಿ ಸಹಿತ ಸರ್ಕಾರವೇ ಜಿಲ್ಲೆಯಲ್ಲಿ ಸಚಿವ ಸಂಪುಟ ನಡೆಸಲು ಬಂದಿದ್ದು ನೋಡಿ ನಮ್ಮ ಕಷ್ಟಗಳಿಗೂ ಸ್ಪಂದನೆ ಸಿಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ, ಮುಖ್ಯಮಂತ್ರಿಗಳು ಕನಿಷ್ಠ ಅಹವಾಲು ಆಲಿಸದೆ ಹೋಗಿದ್ದು ಬೇಸರ ತರಿಸಿದೆ. ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುವವರೆಗೂ ಹೋರಾಟ ನಿಲ್ಲುವುದಿಲ್ಲ.
–ನಾಗರತ್ನಾ, ಪತಿ ಕಳೆದುಕೊಂಡವರು
ಸಂಪುಟ ಸಭೆಯ ಮೇಲೆ ಇರಿಸಿದ ಭರವಸೆ ಹುಸಿಯಾಗಿದೆ, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರಿ ಕೊಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ದೊರೆತಿದ್ದು ಅಲ್ಲಿಯವರೆಗೂ ಕಾದು ನೋಡುತ್ತೇವೆ.
–ಜ್ಯೋತಿ, ಪತಿ ಕಳೆದುಕೊಂಡವರು
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ, ಹೆಚ್ಚಿನ ಪರಿಹಾರ, ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್ ನಾಯಕರು ಮಾತು ತಪ್ಪಿದ್ದಾರೆ. ಮೇ 2ಕ್ಕೆ ದುರಂತ ಸಂಭವಿಸಿ ನಾಲ್ಕು ವರ್ಷ ಕಳೆಯುತ್ತಿದ್ದರೂ ಸರ್ಕಾರ ಸ್ಪಂದಿಸದಿರುವುದು ಬೇಸರದ ಸಂಗತಿ.
–ಎಸ್.ಮಂಜುನಾಥ್, ತಂದೆಯನ್ನು ಕಳೆದುಕೊಂಡವರು
ಕೋವಿಡ್ ಕಾಲಘಟ್ಟದಲ್ಲಿ ನಡೆದ ಆಕ್ಸಿಜನ್ ದುರಂತ ಕರಾಳ ಘಟನೆ. ಅಂದು ಅಧಿಕಾರದಲ್ಲಿದ್ದ ಬಿಜೆಪಿ ಸಚಿವರು, ಶಾಸಕರು ಮೃತರ ಕುಟುಂಬ ಸದಸ್ಯರಿಗೆ ಪರಿಹಾರದ ಮಾತಿರಲಿ, ಸೌಜನ್ಯಕ್ಕೂ ಸಾಂತ್ವನ ಹೇಳಲಿಲ್ಲ. ಭಾರತ್ ಜೋಡೋ ಯಾತ್ರೆ ಸಂದರ್ಭ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಹೇಳಿದ್ದ ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ್ ಮಾತು ತಪ್ಪುವ ಮೂಲಕ ಕಾಂಗ್ರೆಸ್ ಕೂಡ ಸಾವಿನಲ್ಲಿ ರಾಜಕೀಯ ಮಾಡಿದೆ.
–ಮಹೇಶ್, ಸಂತ್ರಸ್ತರ ಪರ ಹೋರಾಟಗಾರ
ಮುಂಬರುವ ಸಚಿವ ಸಂಪುಟಸಭೆಯಲ್ಲಿ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ನೀಡುವ ಬಗ್ಗೆ ಅಥವಾ ದೊಡ್ಡ ಮೊತ್ತದ ಪರಿಹಾರ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಸರ್ಕಾರದ ಮೇಲೆ ಒತ್ತಡ ತಂದು ಸಂತ್ರಸ್ತರಿಗೆ ನ್ಯಾಯ ಕೊಡಿಸುತ್ತೇನೆ.
–ಸಿ.ಪುಟ್ಟರಂಗಶೆಟ್ಟಿ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.