ADVERTISEMENT

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ: ವಾಟಾಳ್‌ ನಾಗರಾಜ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2022, 14:11 IST
Last Updated 21 ಆಗಸ್ಟ್ 2022, 14:11 IST
ಮಡಿಕೇರಿಯಲ್ಲಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ ಖಂಡಿಸಿ ವಾಟಾಳ್‌ ನಾಗರಾಜ್‌ ಅವರು ಭಾನುವಾರ ಚಾಮರಾಜನಗರದಲ್ಲಿ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು
ಮಡಿಕೇರಿಯಲ್ಲಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ ಖಂಡಿಸಿ ವಾಟಾಳ್‌ ನಾಗರಾಜ್‌ ಅವರು ಭಾನುವಾರ ಚಾಮರಾಜನಗರದಲ್ಲಿ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಮಡಿಕೇರಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿರುವುದನ್ನು ಖಂಡಿಸಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್‌ ಅವರು ಭಾನುವಾರ ನಗರದಲ್ಲಿ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು.

ಚಾಮರಾಜೇಶ್ವರ ದೇವಸ್ಥಾನದ ಮುಂದೆ ಪ್ರತಿಭಟನೆ ನಡೆಸಿದ ಅವರು, ‘ಮೊಟ್ಟೆ ಎಸೆತ ಸಂಸ್ಕೃತಿ ರಾಜ್ಯದಲ್ಲಿ ಬೇಡ’ ಎಂದು ಘೋಷಣೆ ಕೂಗಿದರು.

‘ಸ್ವಾತಂತ್ರ್ಯದ ಅಮೃತ ಮಹೋತ್ಸವ ಸುಸಂದರ್ಭದಲ್ಲಿ ಇಂತಹ ರಾಜಕಾರಣ ನಡೆದಿರುವುದು ದುಃಖಕರ. ಮೊಟ್ಟೆ ಎಸೆದಿರುವ ಪ್ರಕರಣ ಅಪಾಯಕಾರಿ ಬೆಳವಣಿಗೆ. ಇದು ನಿಲ್ಲಬೇಕು ಎಂದರು.

ADVERTISEMENT

‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒಬ್ಬ ಪ್ರಬುದ್ದ ರಾಜಕಾರಣಿ. ಯಾವುದೇ ಪಕ್ಷದಲ್ಲಿ ಇರಲಿ, ಅವರೊಬ್ಬ ಚಿಂತನಶೀಲ ರಾಜಕಾರಣಿ. ಅವರ ಮೇಲೆ ಮೊಟ್ಟೆ ಎಸೆದಿರುವುದು ಸರಿಯಲ್ಲ. ಇಂದು ಸಿದ್ದರಾಮಯ್ಯನವರ ಮೇಲೆ ಹೊಡೆದರೆ ನಾಳೆ ಇನ್ನೊಬ್ಬರ ಮೇಲೆ ಹೊಡೆಯುತ್ತಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ರಾಜ್ಯದಲ್ಲಿ ಮೊಟ್ಟೆ ಎಸೆಯುವ ಸಂಸ್ಕೃತಿ ಇರಬಾರದು’ ಎಂದರು.

ಟಿಪ್ಪು ಸುಲ್ತಾನ್‌, ಸಾವರ್ಕರ್‌ ವಿಚಾರದಲ್ಲಿ ನಡೆಯುತ್ತಿರುವ ಪರ ವಿರೋಧ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿದ ನಾಗರಾಜ್‌, ‘ಟಿಪ್ಪು ಸುಲ್ತಾನ್ ಈ ದೇಶದ ಮಹಾವೀರ. ದೇಶಕ್ಕಾಗಿ ತನ್ನ ಎರಡು ಮಕ್ಕಳನ್ನು ಒತ್ತೆ ಇಟ್ಟಿದ್ದರು. ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡಿದರೆ ಅದಕ್ಕೆ ಸಮರ್ಪಕವಾದ ಉತ್ತರ ಕೊಡುವುದು ಬಿಟ್ಟು, ಗೂಂಡಾಗಿರಿಗೆ ಇಳಿದರೆ ಹೇಗೆ’ ಎಂದು ಪ್ರಶ್ನಿಸಿದರು.

ಅಜಯ್, ವರದರಾಜು, ಪ್ರಮೋದ್, ಶಿವಲಿಂಗಮೂರ್ತಿ, ವರದನಾಯಕ, ಚಾ.ರಾ.ಕುಮಾರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.