ಚಾಮರಾಜನಗರ: ‘ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಅವರು ಕರೆ ನೀಡಿರುವ ಮೇರೆಗೆ ಆ.12 ರಂದು ನಗರದಲ್ಲಿ ಶಿಕ್ಷಕರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಹಕ್ಕೊತ್ತಾಯ ಸಲ್ಲಿಸಲು ತೀರ್ಮಾನಿಸಲಾಗಿದೆ’ ಎಂದು ಜಿಲ್ಲಾಧ್ಯಕ್ಷ ಮಾದಪ್ಪ ತಿಳಿಸಿದರು.
ನಗರದ ನ್ಯಾಯಾಲಯದ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದಿಂದ ಕರೆದಿದ್ದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಶಿಕ್ಷಕರ ಬಹುದಿನದ ಬೇಡಿಕೆಯಾದ ಸಿ ಅಂಡ್ ಆರ್ ತಿದ್ದುಪಡಿ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ನೀಡಿದ್ದ ಭರವಸೆ ಈಡೇರದ ಕಾರಣ ಸಂಘವು ಮತ್ತೆ ರಾಜ್ಯವ್ಯಾಪ್ತಿ ಹಂತ ಹಂತವಾಗಿ ಹೋರಾಟ ನಡೆಸಲು ತೀರ್ಮಾನಿಸಿದೆ’ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ ಮಾತನಾಡಿ, ‘2016ರಲ್ಲಿ ಸಿ ಅಂಡ್ ಆರ್ ವೃಂದವಾರು ನೇಮಕಾತಿ ತಿದ್ದುಪಡಿ ಆದಾಗ ಆಗಿರುವ ಸಮಸ್ಯೆ 8 ವರ್ಷಗಳಾದರೂ ಸರಿಪಡಿಸುವಂತೆ ಅನೇಕ ಬಾರಿ ಒತ್ತಾಯಿಸುತ್ತಿದ್ದರೂ ಸಮಸ್ಯೆ ಬಗೆಹರಿದಿಲ್ಲ. 2024ರ ಆಗಸ್ಟ್ 12ರಲ್ಲಿ ಮುಖ್ಯಮಂತ್ರಿಗಳೇ ವೃಂದ ಮತ್ತು ನೇಮಕಾತಿಯ ನಿಯಮದಲ್ಲಿ ತಪ್ಪಾಗಿದೆ, ಒಂದು ತಿಂಗಳ ಒಳಗೆ ಸರಿಪಡಿಸುವುದಾಗಿ ಹೇಳಿ ಒಂದು ವರ್ಷ ಆಗಲಿದೆ. ಇನ್ನೂ ಬಗೆಹರಿದಿಲ್ಲ’ ಎಂದರು.
‘ಆದ್ದರಿಂದ ಈ ಬಾರಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು, ಇಲ್ಲದಿದ್ದರೆ ಶಿಕ್ಷಕರ ದಿನಾಚರಣೆಯನ್ನು ಬಹಿಷ್ಕರಿಸಲಾಗುವುದು. ಆ.12 ರಂದು ನಗರದ ಜಿಲ್ಲಾಡಳಿತ ಭವನದಲ್ಲಿ ಸಂಜೆ 4.30ಕ್ಕೆ ಜಿಲ್ಲೆಯ ಶಿಕ್ಷಕರು ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು’ ಎಂದು ಮನವಿ ಮಾಡಿದರು.
ಸಭೆಯಲ್ಲಿ ಸಂಘದ ಖಜಾಂಚಿ ಸಲೀನ, ಸಂಘಟನಾ ಕಾರ್ಯದರ್ಶಿ ಮಹದೇವಸ್ವಾಮಿ, ಚಾಮರಾಜನಗರ ತಾಲ್ಲೂಕು ಅಧ್ಯಕ್ಷ ಸಿ.ಕೆ. ರಾಮಸ್ವಾಮಿ, ಗುಂಡ್ಲುಪೇಟೆ ತಾಲ್ಲೂಕು ಅಧ್ಯಕ್ಷ ಶಿವಪ್ರಸಾದ್, ಹನೂರು ತಾಲ್ಲೂಕು ಅಧ್ಯಕ್ಷ ಕೃಷ್ಣೇಗೌಡ, ಯಳಂದೂರು ತಾಲ್ಲೂಕು ಅಧ್ಯಕ್ಷ ಸೋಮಣ್ಣ, ಸಂಘದ ಪದಾಧಿಕಾರಿಗಳಾದ ನಂದೀಶ್, ನಾಗರಾಜು, ನಾಗಸಂದ್ರ, ಎಂ.ಡಿ.ಮಹದೇವಯ್ಯ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.