ADVERTISEMENT

ಯಳಂದೂರು | ತುಂತುರು ಮಳೆಯಲ್ಲೇ ಕೊಯ್ಲು ಆರಂಭ

ಯಳಂದೂರು: ಬಿಳಿಜೋಳ ಒಕ್ಕಣೆಗೆ ಯಂತ್ರಗಳ ಮೊರೆ: ಕಾರ್ಮಿಕರ ಕೊರತೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 5:20 IST
Last Updated 11 ಆಗಸ್ಟ್ 2025, 5:20 IST
ತುಂತುರು ಮಳೆ ನಡುವೆ ಚೀಲಗಳಲ್ಲಿ ಜೋಳ ಸಂಗ್ರಹಿಸಿದ ಕೃಷಿಕರು
ತುಂತುರು ಮಳೆ ನಡುವೆ ಚೀಲಗಳಲ್ಲಿ ಜೋಳ ಸಂಗ್ರಹಿಸಿದ ಕೃಷಿಕರು   

ಯಳಂದೂರು: ತಾಲ್ಲೂಕಿನಲ್ಲಿ ಬೇಸಿಗೆ ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಬಿಳಿಜೋಳ ಕಟಾವು ಶುರುವಾಗಿದೆ. ಕೊಯ್ಲಿಗೆ ತುಂತುರು ಮಳೆ, ಶೀತ ಗಾಳಿ ಹಾಗೂ ಕಾರ್ಮಿಕರ ಕೊರತೆ ಎದುರಾಗಿದೆ. ಒಕ್ಕಣೆ ಮಾಡಲು ರೈತರು ಯಂತ್ರಗಳ ಮೊರೆ ಹೋಗಿದ್ದು, ಉತ್ತಮ ಇಳುವರಿ ಪಡೆಯುವ ನಿರೀಕ್ಷೆಯಲ್ಲಿ ಇದ್ದಾರೆ.

ಜೋಳಕ್ಕೆ ಬೆಲೆ ಮತ್ತು ಬೇಡಿಕೆಯೂ ಕುದುರಿದ್ದು, ಗುಣಮಟ್ಟದ ಸಂಸ್ಕರಣೆಗೆ ಒತ್ತು ನೀಡಬೇಕಿದೆ. ಇತ್ತೀಚಿನ ವರ್ಷಗಳಲ್ಲಿ ಹೈಬ್ರಿಡ್ ಜೋಳ ಬೆಳೆಗಾರರ ಸಂಖ್ಯೆ ಕುಸಿಯುತ್ತ ಸಾಗಿದೆ. ಮೆಕ್ಕೆಜೋಳ ಮತ್ತು ಭತ್ತಕ್ಕೆ ಹೆಚ್ಚಿನ ಆದ್ಯತೆ ದೊರೆತಿದೆ. ಆದರೆ, ಬೇಸಿಗೆ ಸಮಯದಲ್ಲಿ ಜಾನುವಾರಿಗೆ ಮೇವು ಪೂರೈಸಲು ಹಾಗೂ ಮಳೆ ಸುರಿದರೆ ಒಂದಷ್ಟು ಫಸಲು ತೆಗೆಯುವ ಆಸೆಯಿಂದ ಜೋಳ ನಾಟಿ ಮಾಡಿದ್ದಾರೆ. ಆದರೆ, ಈಗ ಮಾರುಕಟ್ಟೆಯಲ್ಲಿ ಜೋಳಕ್ಕೆ ಬೇಡಿಕೆ ಇದ್ದು, ಆವಕ ಕಡಿಮೆಯಾಗಿದೆ. ಧಾರಣೆಯಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದೆ. ಹೀಗಾಗಿ ಮಳೆಗೂ ಮೊದಲು ಕೊಯ್ಲು ಮಾಡುವತ್ತ ಕೃಷಿಕರು ಚಿತ್ತ ಹರಿಸಿದ್ದಾರೆ.

ಸರ್ಕಾರ ಈ ಭಾಗದಲ್ಲಿ ಬಿಳಿ ಜೋಳ ಬೆಳೆಯಲು ಹೆಚ್ಚು ನೆರವು ನೀಡಬೇಕು. ಸಿರಿಧಾನ್ಯಗಳನ್ನು ಬೆಳೆಯಲು ನೀಡುವ ಪ್ರೋತ್ಸಾಹವನ್ನು ಬಿಳಿಜೋಳ ಬೆಳೆಗಾರರಿಗೂ ವಿಸ್ತರಿಸಬೇಕು. ಹೈಬ್ರಿಡ್ ಬೀಜಕ್ಕೆ ಬದಲಾಗಿ ಸ್ಥಳೀಯ ಜೋಳ ಬಿತ್ತನೆಗೆ ಅವಕಾಶ ನೀಡಬೇಕು. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆತರೆ, ಬಿಳಿಜೋಳ ಬೆಳೆಗಾರರ ಸಂಖ್ಯೆ ಹೆಚ್ಚಾಗಲಿದೆ ಎನ್ನುತ್ತಾರೆ ರೈತ ಮಹೇದ್ರ.

ADVERTISEMENT

ಯಂತ್ರಗಳಿಗೆ ಬೇಡಿಕೆ: ಗ್ರಾಮೀಣ ಪ್ರದೇಶದಲ್ಲಿ ಕಾರ್ಮಿಕರ ಸಮಸ್ಯೆ ಎದುರಾಗಿದೆ. ಹಾಗಾಗಿ ಜೋಳದ ಕೊಯ್ಲಿನ ನಂತರ ಸಂಸ್ಕರಣೆಗೆ ಯಂತ್ರಗಳ ಬೇಡಿಕೆ ಹೆಚ್ಚಾಗಿದೆ. 1 ಕ್ವಿಂಟಲ್ ಜೋಳ ಬಿಡಿಸಲು ₹100 ರಿಂದ ₹140 ವ್ಯಯಿಸಬೇಕು. ಎಕೆರೆಗೆ 20 ಕ್ವಿಂಟಲ್ ಜೋಳ ಸಂಗ್ರಹವಾಗಿದ್ದು, ಉತ್ತಮ ಬೆಲೆಯೂ ಕೈಸೇರುವ ನಿರೀಕ್ಷೆ ಇದೆ. ಪಶು ಸಾಕಣೆದಾರರಿಗೆ ಜೋಳದ ಕಡ್ಡಿಯ ಮೇವು ಸಿಗಲಿದೆ’ ಎಂದು ಹೊನ್ನೂರು ಸಾಗುವಳಿದಾರ ನಾಗರಾಜು ಹೇಳಿದರು.

ನೀರು ಸೇರದಂತೆ ಎಚ್ಚರ ವಹಿಸಿ: ‘ತಾಲ್ಲೂಕಿನಲ್ಲಿ ಸಕಾಲದಲ್ಲಿ ಮಳೆ ಸುರಿದಿದ್ದು, ಹೊನ್ನೂರು ಮತ್ತು ಕೆಸ್ತೂರು ಬೈಲುಗಳಲ್ಲಿ ಬೆಳೆ ಉತ್ತಮವಾಗಿದೆ. ಬಿತ್ತನೆ ಮಾಡಿದ ಜೋಳ ರೋಗ ಮತ್ತು ಕೀಟ ಮುಕ್ತವಾಗಿದೆ. ಧಾರಣೆಯೂ ಕ್ವಿಂಟಲ್ ಒಂದಕ್ಕೆ ₹2 ಸಾವಿರ ಮೀರಿದೆ. ಮುಂದಿನ ದಿನಗಳಲ್ಲಿ ಮಳೆ ಸುರಿಯುವ ನಿರೀಕ್ಷೆ ಇದ್ದು, ಬೇಸಾಯಗಾರರು ಒಕ್ಕಣೆ ಮಾಡಿದ ಕಾಳನ್ನು ತಕ್ಷಣ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಸಂಗ್ರಹಿಸಬೇಕು. ಮೇವಿಗೆ ನೀರು ಸೇರದಂತೆ ಎಚ್ಚರ ವಹಿಸಬೇಕು’ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎ. ವೆಂಕಟರಂಗಶೆಟ್ಟಿ ಸಲಹೆ ನೀಡಿದರು. 

ಯಳಂದೂರು ತಾಲ್ಲೂಕಿನ ಹೊನ್ನೂರು ಗ್ರಾಮ ಹೊರವಲಯದ ಜಮೀನಿನಲ್ಲಿ ರೈತರು ಯಂತ್ರ ಬಳಸಿ ಜೋಳ ಒಕ್ಕಣೆ ಮಾಡಿದರು

ಸಂಸ್ಕರಣೆಗೆ ಯಂತ್ರಗಳ ಬೇಡಿಕೆ ಹೆಚ್ಚಳ ಎಕೆರೆಗೆ 20 ಕ್ವಿಂಟಲ್ ಜೋಳ ಸಂಗ್ರಹ ಪಶು ಸಾಕಣೆದಾರರಿಗೆ ಜೋಳದ ಕಡ್ಡಿಯ ಮೇವು 

ತಾಲ್ಲೂಕಿನಲ್ಲಿ ಸುಮಾರು 1 ಸಾವಿರ ಎಕರೆ ಪ್ರದೇಶದಲ್ಲಿ ಸಂಕರ ತಳಿ ಜೋಳ ನಾಟಿಯಾಗಿದೆ. ಸಕಾಲದಲ್ಲಿ ಮಳೆ ಸುರಿದಿದ್ದು ಬೆಳೆ ಉತ್ತಮವಾಗಿದೆ
ಎ. ವೆಂಕಟರಂಗಶೆಟ್ಟಿ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.