ADVERTISEMENT

ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವರು ಯಾರು?

ಜಿಲ್ಲೆಗೆ ಸಚಿವ ಸ್ಥಾನ ಇಲ್ಲ; ಹೊರ ಜಿಲ್ಲೆಯ ಸಚಿವರಾಗುವುದು ಖಚಿತ

ಸೂರ್ಯನಾರಾಯಣ ವಿ.
Published 30 ಮೇ 2023, 1:27 IST
Last Updated 30 ಮೇ 2023, 1:27 IST
ಡಾ.ಎಚ್‌.ಸಿ.ಮಹದೇವಪ್ಪ
ಡಾ.ಎಚ್‌.ಸಿ.ಮಹದೇವಪ್ಪ   

ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದವರೆಗೆ ಖಾತೆ ಹಂಚಿಕೆಯಾದ ಬೆನ್ನಲ್ಲೇ, ಜಿಲ್ಲಾ ಉಸ್ತುವಾರಿ ಸಚಿವರು ಯಾರಾಗಲಿದ್ದಾರೆ ಎಂಬ ಚರ್ಚೆ ಜಿಲ್ಲೆಯ ರಾಜಕೀಯ ವಲಯ ಹಾಗೂ ಸಾರ್ವಜನಿಕರ ನಡುವೆ ನಡೆಯುತ್ತಿದೆ. 

ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಮೂರರಲ್ಲಿ ಕಾಂಗ್ರೆಸ್‌ ಗೆದ್ದಿತ್ತು. ಜಿಲ್ಲೆಗೆ ಸಚಿವ ಸ್ಥಾನ ಸಿಗಲಿದೆ, ಚಾಮರಾಜನಗರ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಸಚಿವರಾಗಲಿದ್ದಾರೆ ಎಂದು ಹೇಳಲಾಗಿತ್ತು. ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಅವರ ಕೈತಪ್ಪಿದೆ. ಜಿಲ್ಲೆಯವರು ಯಾರೂ ಸಚಿವರಾಗದಿರುವುದರಿಂದ ಹೊರ ಜಿಲ್ಲೆಯ ಸಚಿವರೊಬ್ಬರಿಗೆ ಗಡಿ ಜಿಲ್ಲೆಯ ಉಸ್ತುವಾರಿ ಸಿಗಲಿದೆ.

2013–18ರ ಅವಧಿಯ ಸಿದ್ದರಾಮಯ್ಯ ಸರ್ಕಾರದಲ್ಲಿ ಜಿಲ್ಲೆಯವರೇ ಆದ ಮಹದೇವಪ್ರಸಾದ್‌ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಅವರ ಹಠಾತ್ ನಿಧನ ಬಳಿಕ ಈಗಿನ ಸ್ಪೀಕರ್‌ ಯು.ಟಿ.ಖಾದರ್‌ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಉಪಚುನಾವಣೆ ಬಳಿಕ ಎಂ.ಸಿ.ಮೋಹನಕುಮಾರಿ ಉಸ್ತುವಾರಿ ಹೊಣೆ ಹೊತ್ತಿದ್ದರು.    

ADVERTISEMENT

2018ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಸಿ.ಪುಟ್ಟರಂಗಶೆಟ್ಟಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ನಂತರದ ಬಿಜೆಪಿ ಸರ್ಕಾರದಲ್ಲಿ ಎಸ್‌.ಸುರೇಶ್‌ ಕುಮಾರ್ ಮತ್ತು ವಿ.ಸೋಮಣ್ಣ ಜಿಲ್ಲೆಯ ಹೊಣೆ ಹೊತ್ತಿದ್ದರು. 

ರಾಜ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಲ್ಲದೆ 32 ಮಂದಿ ಸಚಿವರು ಇದ್ದಾರೆ. ಒಬ್ಬೊಬ್ಬ ಸಚಿವರಿಗೆ ಒಂದೊಂದು ಜಿಲ್ಲೆಯ ಹೊಣೆ ಸಿಗುವ ಸಾಧ್ಯತೆ ಇದೆ. 

ಜಿಲ್ಲೆಗೆ ಯಾರು?: ನೆರೆಯ ಮೈಸೂರು ಜಿಲ್ಲೆಯಿಂದ ಸಿದ್ದರಾಮಯ್ಯ ಅವರನ್ನು ಬಿಟ್ಟು, ತಿ.ನರಸೀಪುರ ಕ್ಷೇತ್ರದ ಡಾ.ಎಚ್‌.ಸಿ.ಮಹದೇವಪ್ಪ (ಸಮಾಜ ಕಲ್ಯಾಣ) ಮತ್ತು ಪಿರಿಯಾಪಟ್ಟಣ ಕ್ಷೇತ್ರದ ಕೆ.ವೆಂಕಟೇಶ್‌ (ಪಶು ಸಂಗೋಪನೆ ಮತ್ತು ರೇಷ್ಮೆ) ಸಚಿವರಾಗಿದ್ದಾರೆ. ಈ ಇಬ್ಬರಲ್ಲಿ ಯಾರಿಗಾದರೂ ಒಬ್ಬರಿಗೆ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. 

ಅನುಭವಿ ಹಾಗೂ ಹಿರಿಯರಾಗಿರುವ ಡಾ.ಮಹದೇವಪ್ಪ ಅವರಿಗೆ ಮೈಸೂರು ಜಿಲ್ಲೆಯ ಉಸ್ತುವಾರಿ ಸಿಗಲಿದೆ ಎಂದು ಹೇಳಲಾಗುತ್ತಿದೆ. ಅದರ ಜೊತೆಗೆ ಹೆಚ್ಚುವರಿಯಾಗಿ ಚಾಮರಾಜನಗರ ಜಿಲ್ಲೆಯನ್ನು ಕೊಟ್ಟರೂ ಕೊಡಬಹುದು ಎಂದು ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದಾರೆ. 

‘ಎಚ್‌.ಸಿ.ಮಹದೇವಪ್ಪ ಪ್ರತಿನಿಧಿಸುವ ತಿ.ನರಸೀಪುರ ಕ್ಷೇತ್ರ ಚಾಮರಾಜಗರ ಮೀಸಲು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಮುಂದಿನ ವರ್ಷ ಲೋಕಸಭಾ ಚುನಾವಣೆಯೂ ನಡೆಯಲಿದ್ದು, ಇದನ್ನು ಗಮನದಲ್ಲಿ ಇಟ್ಟುಕೊಂಡು ಅವರನ್ನೇ ಉಸ್ತುವಾರಿಯನ್ನಾಗಿ ಮಾಡಿದರೂ ಆಶ್ಚರ್ಯವಿಲ್ಲ’ ಎಂಬುದು ಮುಖಂಡರ ಹೇಳಿಕೆ.

ಕೆ.ವೆಂಕಟೇಶ್‌ ಅವರು ಮೈಸೂರು ಜಿಲ್ಲೆಯವರಾಗಿದ್ದರೂ, ಅವರ ಪಕ್ಕದ ಕೊಡಗು ಜಿಲ್ಲೆಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಹಾಗಾಗಿ, ಸಿದ್ದರಾಮಯ್ಯ ಅವರು ವೆಂಕಟೇಶ್‌ಗೆ ಕೊಡಗು ಜಿಲ್ಲೆಯ ಉಸ್ತುವಾರಿ ನೀಡಬಹುದು ಎನ್ನಲಾಗುತ್ತಿದೆ. 

ದೂರದ ಜಿಲ್ಲೆಯವರಿಗೂ ಉಸ್ತುವಾರಿ ಹೊಣೆ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. 

‘2017ರಲ್ಲಿ ಮಹದೇವ ಪ್ರಸಾದ್‌ ನಿಧನರಾದ ಬಳಿಕ ಸಿದ್ದರಾಮಯ್ಯ ಅವರು ದಕ್ಷಿಣ ಕನ್ನಡ ಜಿಲ್ಲೆಯ ಯು.ಟಿ.ಖಾದರ್‌ ಅವರಿಗೆ ಜಿಲ್ಲೆಯ ಉಸ್ತುವಾರಿಯನ್ನು ನೀಡಿದ್ದರು. ಆಗಲೂ ಡಾ.ಎಚ್‌.ಸಿ.ಮಹದೇವಪ್ಪ ಸಂಪುಟದಲ್ಲಿದ್ದರು. ಲೋಕೋಪಯೋಗಿ ಇಲಾಖೆಯ ಜವಾಬ್ದಾರಿ ಹೊತ್ತಿದ್ದ ಅವರು, ಮೈಸೂರಿನ ಉಸ್ತುವಾರಿ ಸಚಿವರಾಗಿದ್ದರು. ಹಾಗಿದ್ದರೂ ಅವರಿಗೆ ಚಾಮರಾಜನಗರದ ಹೊಣೆ ನೀಡಿರಲಿಲ್ಲ. ಹಾಗಾಗಿ, ಈ ವಿಚಾರದಲ್ಲಿ ಏನೂ ಹೇಳಲು ಸಾಧ್ಯವಿಲ್ಲ. ಮುಖ್ಯಮಂತ್ರಿಯವರ ತೀರ್ಮಾನವೇ ಅಂತಿಮವಾಗಿರುತ್ತದೆ’ ಎಂದು ಹೇಳುತ್ತಾರೆ ಮುಖಂಡರು.

ಕೆ.ವೆಂಕಟೇಶ್ 
ಮರಿಸ್ವಾಮಿ

Quote - ಮುಖ್ಯಮಂತ್ರಿಯವರು ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡುತ್ತಾರೆ. ನಮ್ಮ ಜಿಲ್ಲೆಗೆ ಯಾರೇ ಆದರೂ ಅವರಿಗೆ ಸಹಕಾರ ಕೊಡುತ್ತೇವೆ ಪಿ.ಮರಿಸ್ವಾಮಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ

Cut-off box - ‘ಜಿಲ್ಲೆಯ ಬಗ್ಗೆ ತಿಳಿದವರಿಗೆ ಕೊಡಲಿ’ ಜಿಲ್ಲೆಯ ಶಾಸಕರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಸಿಕ್ಕಿ ಅವರೇ ಜಿಲ್ಲೆಯ ಉಸ್ತುವಾರಿ ಸಚಿವರಾಗಲಿದ್ದಾರೆ ಎಂಬ ನಿರೀಕ್ಷೆ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರಲ್ಲಿತ್ತು. ಪುಟ್ಟರಂಗಶೆಟ್ಟಿಯವರೇ ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಾರೆ ಎಂಬ ಉತ್ಸಾಹದಲ್ಲಿ ಅವರ ಬೆಂಬಲಿಗರು ಹಾಗೂ ಅಭಿಮಾನಿಗಳು ಇದ್ದರು. ಆದರೆ ಅದು ನಡೆದಿಲ್ಲ. ಹಾಗಾಗಿ ಯಾರೇ ಉಸ್ತುವಾರಿ ಸಚಿವರಾದರೂ ಜಿಲ್ಲೆ ಹಾಗೂ ಇಲ್ಲಿನ ಅಭಿವೃದ್ಧಿಯ ಬಗ್ಗೆ ಅವರಿಗೆ ಕಾಳಜಿ ಇರುವವರು ಆಗಬೇಕು. ನೆರೆಯ ಜಿಲ್ಲೆಗಳ ಸಚಿವರಾದರೆ ಜಿಲ್ಲೆಯ ಬಗ್ಗೆ ಮಾಹಿತಿ ಇರುತ್ತದೆ. ಅಭಿವೃದ್ಧಿಗೂ ಕೊಡುಗೆ ನೀಡಬಲ್ಲರು ಎಂದು ಹೇಳುತ್ತಾರೆ ಕಾಂಗ್ರೆಸ್‌ ಕಾರ್ಯಕರ್ತರು.  ‘ಸಿದ್ದರಾಮಯ್ಯ ಕೂಡ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ವರುಣ ಕ್ಷೇತ್ರದವರು. ಜಿಲ್ಲೆಯ ಬಗ್ಗೆ ಅವರಿಗೆ ಸಂಪೂರ್ಣ ಮಾಹಿತಿ ಇದೆ. ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಸಾಕಷ್ಟು ಅನುದಾನ ಕೊಟ್ಟಿದ್ದರು. ಈ ಬಾರಿಯೂ ಅವರು ಜಿಲ್ಲೆಯನ್ನು ಕಡೆಗಣಿಸುವುದಿಲ್ಲ ಎಂಬ ವಿಶ್ವಾಸವಿದೆ.  ಜಿಲ್ಲೆಯ ಬಗ್ಗೆ ತಿಳಿದಿರುವ ಸಚಿವರನ್ನೇ ಉಸ್ತುವಾರಿಯನ್ನಾಗಿ ನೇಮಕ ಮಾಡಬೇಕು’ ಎಂಬುದು ಕಾರ್ಯಕರ್ತರ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.