ಯಳಂದೂರು: ತಾಲ್ಲೂಕಿನ ರಸ್ತೆ, ಬೆಟ್ಟ ಹಾಗೂ ಜಮೀನುಗಳ ಸುತ್ತಮುತ್ತ ಗೊಬ್ಬರದ ಗಿಡ ಹೂ ಬಿಟ್ಟು ನಳನಳಿಸುತ್ತಿದೆ.
ವರ್ಷಪೂರ್ತಿ ಹಸಿರು ತುಂಬಿಕೊಂಡು ಬೆಳೆಯುವ ಗುಣ ಇದಕ್ಕಿದೆ. ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಗಳ ಬದಲಾವಣೆಗೆ ನೇರವಾಗಿ ಸಹಾಯ ಮಾಡುತ್ತದೆ. ಮಣ್ಣಿನ ಸಾವಯವ ಅಂಶ ವೃದ್ಧಿಸಲು. ಜೈವಿಕ ಸೂಕ್ಷ್ಮಾಣು ಚಟುವಟಿಕೆ ಅಭಿವೃದ್ಧಿಪಡಿಸಲು ಈ ಗಿಡ ನೆರವಾಗಿದ್ದು, ಬಹು ಬೇಡಿಕೆ ತಂದಿತ್ತಿದೆ.
ಫೆಬ್ರುವರಿ-ಮಾರ್ಚ್ ನಡುವೆ ಅರಳುವ ಗೊಬ್ಬರ ಗಿಡಕ್ಕೆ ‘ಗ್ಲಿರಿಸಿಡಿಯಾ’ ಎಂಬ ಹೆಸರಿದೆ. ಸ್ಥಳೀಯರು ಮಣ್ಣಿಗೆ ಇದರ ಎಲೆ ಮತ್ತು ಹೂಗಳನ್ನು ಸೇರಿಸಿ ಭೂ ಫಲವತ್ತತೆ ಹೆಚ್ಚಿಸಿಕೊಳ್ಳುತ್ತಾರೆ. ಸರ್ವ ಋತುವಿನಲ್ಲೂ ಹಸಿರುಟ್ಟು ನಳನಳಿಸುವ ಇದು, ಬಿಳಿಗಿರಿರಂಗನ ಬೆಟ್ಟದ ಅಂಚಿನ ಪ್ರದೇಶ ಹಾಗೂ ಜಮೀನುಗಳ ಬದುಗಳ ಸುತ್ತಮುತ್ತ ನಸು ಗೆಂಪಿನ, ಬಿಳಿ ಮಿಶ್ರಿತ ಗುಲಾಬಿ ಬಣ್ಣದ ಹೂಗಳನ್ನು ಅರಳಿಸಿದೆ. ಇದು ಆಲಂಕಾರಿಕ ಮರದಂತೆ ಕಾಣುವುದರಿಂದ ಪರಿಸರ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ.
ಮುಖ್ಯ ಬೆಳೆಗಳನ್ನು ಬೆಳೆಯುವ ಮೊದಲು ಮೇ ಕೊನೆ ಇಲ್ಲವೇ ಜೂನ್ ಸಮಯದಲ್ಲಿ ಹಸಿರೆಲೆ ಗೊಬ್ಬರವನ್ನು ಮಣ್ಣಿಗೆ ಸೇರಿಸಬಹುದು. ಜಾನುವಾರುಗಳಗೆ ಮೇವನ್ನು ಪೂರೈಸುವ ದ್ವಿದಳ ಧಾನ್ಯದ ಬಿತ್ತನೆಯನ್ನು ಗೊಬ್ಬರ ಗಿಡದ ನಡುವೆ ಬೆಳೆಸಬಹುದು. ಸಸ್ಬೇನಿಯಾ, ಗ್ಲಿರಿಸಿಡಿಯಾ ಎತ್ತರವಾಗಿ ಬೆಳೆಯುವುದರಿಂದ ಮಿಶ್ರ ಬೆಳೆಗಳಿಗೂ ಹೆಚ್ಚಿನ ಅನುಕೂಲ ಆಗಲಿದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.
‘ಬೇಸಿಗೆ ಆರಂಭವಾಗಿದೆ, ಈ ಸಮಯದಲ್ಲಿ ಆಪ್ ಸೆಣಬು, ಡಯಾಂಚ, ಕೊಳಂಜೆ, ಹೊಂಗೆ, ಎಕ್ಕ, ಲಂಟಾನ, ಹುರುಳಿ, ಉದ್ದು ಮತ್ತು ಹೆಸರು ಮೊದಲಾದ ಸಸ್ಯಗಳಿಂದ ಹಸಿರು ಗೊಬ್ಬರ ಮಾಡಿಕೊಳ್ಳಬಹುದು. ಗಿಡಗಳು ಅಪಾರ ಸಸ್ಯ ಪೋಷಕಾಂಶ ಹೊಂದಿವೆ. ಇವುಗಳ ನಿಯಮಿತವಾಗಿ ಹೊಲ, ಗದ್ದೆಗಳಿಗೆ ಸೇರಿಸುವುದರಿಂದ ರಾಸಾಯನಿಕ ಗೊಬ್ಬರಕ್ಕೆ ಖರ್ಚಾಗುವ ಹಣ ಉಳಿಸಬಹುದು. ಮಣ್ಣಿನ ಫಲವತ್ತತೆ ಮತ್ತು ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿ, ಹೆಚ್ಚಿನ ಇಳುವರಿ ಮತ್ತು ಲಾಭ ಪಡೆಯಬಹುದು’ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಹಸಿರೆಲೆ ಗೊಬ್ಬರ ಗಿಡವನ್ನು ಅಂತರ ಬೆಳೆಯಾಗಿ ಬೆಳೆಸಬಹುದು. ದೀರ್ಘಾವಧಿ ಬೆಳೆಗಳಲ್ಲಿ ಎರಡು ಸಾಲುಗಳ ನಡುವೆ ನೆಟ್ಟು ಇದರ ಎಲೆ ಮತ್ತು ಹೂವು ಮಣ್ಣಿನಲ್ಲಿ ಸೇರುವಂತೆ ನೋಡಿಕೊಂಡಲ್ಲಿ ಮಣ್ಣಿನ ಆರೋಗ್ಯವೂ ಸುಧಾರಿಸುತ್ತದೆ. ವಾತಾವರಣದ ಸಾರಜನಕ ಸ್ಥಿರೀಕರಣ ಸಾಧ್ಯವಾಗಲಿದೆ. ಮಣ್ಣಿನ ಮೈಲ್ಮೈ ಹೊದಿಕೆಯಾಗಿ ಬಳಕೆ ಆಗುವುದರಿಂದ ಮಣ್ಣಿನ ಸವೆತ ತಪ್ಪುತ್ತದೆ. ಮಳೆ ನೀರು ಭೂಮಿಯಲ್ಲಿ ಸೇರಿ ಫಲವತ್ತತೆಗೆ ನೆರವಾಗುತ್ತದೆ’ ಎಂದು ರೈತರಾದ ಅಂಬಳೆ ಮಹದೇವ ಮತ್ತು ಮಹೇಶ್ ಹೇಳುತ್ತಾರೆ.
ಹಸಿರೆಲೆ ಗೊಬ್ಬರದ ಬೆಳೆಗಳನ್ನು ಸಕಾಲದಲ್ಲಿ ಬೆಳೆಯಬೇಕು. ಇಲ್ಲದಿದ್ದರೆ ನಾರಿನಂಶ ಉಳಿದು ಪೋಷಕಾಂಶ ಕ್ಷೀಣಿಸುತ್ತದೆ. ಎಲ್ಲ ತರಹದ ಸಸ್ಯ ವರ್ಗಗಳನ್ನು ಹಸಿರು ಗೊಬ್ಬರವಾಗಿ ಪರಿವರ್ತಿಸಲಾಗದು. ಕೆಲವು ಗಿಡಗಳು ಸಾಕು ಪ್ರಾಣಿ ಬಳಕೆಗೆ ಯೋಗ್ಯವಲ್ಲ. ಮಾವು, ತೆಂಗು, ಚಿಕ್ಕು ತಾಕುಗಳ ನಡುವೆ ಗ್ಲಿರಿಸಿಡಿಯಾ ಬೆಳೆದು, ಜುಲೈ-ಆಗಸ್ಟ್ ನಂತರ ಗೊಬ್ಬರವಾಗಿ ಪರಿವರ್ತಿಸಬೇಕು. ಅರಣ್ಯ ಇಲಾಖೆಯೂ ಈ ಸಸ್ಯ ಅಭಿವೃದ್ಧಿ ಪಡಿಸಿದೆ ಎನ್ನುತ್ತಾರೆ ಸಾಗುವಳಿದಾರರು.
ಸರ್ವ ಋತುವಿನಲ್ಲೂ ಹಸಿರುಟ್ಟು ನಳನಳಿಸುವ ಗಿಡ ಪರಿಸರ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ ರಾಸಾಯನಿಕ ಗೊಬ್ಬರದ ಖರ್ಚು ಉಳಿಯಲಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.