ಯಳಂದೂರು: ಸ್ಥಳೀಯವಾಗಿ ಕಾವೇರಿಯ ಜಲ ಹುಲಿ, ದೇವರ ಮೀನು ಎಂದು ಕರೆಸಿಕೊಳ್ಳುವ ಅಳಿವಿನಂಚಿನಲ್ಲಿರುವ ಮತ್ಸ್ಯ ಪ್ರಬೇಧವಾಗಿರುವ ಮಹಶೀರ್ ಮೀನಿನ ಸಂಕುಲವನ್ನು ಉಳಿಸಲು ಸರ್ಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಮಹಶೀರ್ ಗಣತಿ ಆರಂಭಿಸಿವೆ.
ಮಹಶೀರ್ ಮತ್ಸ್ಯ ಪ್ರಬೇಧ ದೇಶದ ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ದಕ್ಷಿಣ ಭಾಗಗಳಲ್ಲಿ ಬಹಳ ವಿರಳ. ದಖನ್ ಪ್ರಸ್ಥಭೂಮಿ ಮತ್ತು ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಅಪರೂಪಕ್ಕೆ ಮಹಶೀರ್ ಮೀನುಗಳು ಕಂಡುಬರುತ್ತವೆ.
ಮುಂಗಾರು ಎಲ್ಲೆಡೆ ಅಬ್ಬರಿಸುತ್ತಿದ್ದು ಹೊಳೆ, ನದಿಗಳಲ್ಲಿ ಜಲ ವೈಭವ ಕಂಡುಬಂದಿದೆ. ಕಬಿನಿ ಕಾವೇರಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಇದೇ ವೇಳೆ ಜಲಾಶಯಗಳ ನೀರಿನ ಜೊತೆ ಮಹಶೀರ್ ಜಾತಿಯ ಮೀನುಗಳು ಅಲ್ಲಲ್ಲಿ ಕಾಣಸಿಗುತ್ತಿದ್ದು ಮತ್ಸ್ಯ ಪ್ರಿಯರಿಗೆ ಸಂತಸ ತಂದಿದೆ. ಮಹಶೀರ್ ಸಂತತಿ ಉಳಿಸುವ ದಿಸೆಯಲ್ಲಿ ಶ್ರಮಿಸುತ್ತಿದೆ ವಾಸಿ (ವೈಲ್ಡ್ ಲೈಫ್ ಆಸೋಸಿಯನ್ ಆಫ್ ಸೌತ್ ಇಂಡಿಯಾ) ಸಂಸ್ಥೆ.
ಮಹಶೀರ್ ಮೀನು ಸಂತತಿಗೆ ಸರೋವರ ಮತ್ತು ನದಿಗಳೇ ಆವಾಸಸ್ಥಾನ. ಇವುಗಳ 47 ಪ್ರಭೇದಗಳು ಈಗಾಗಲೇ ಮರೆಯಾಗಿವೆ. ಭಾರತದಲ್ಲಿ 15 ಜಾತಿಯ ಮಹಶೀರ್ ಮೀನುಗಳು ಮಾತ್ರ ಉಳಿದಿದೆ. ಒಮ್ಮೊಮ್ಮೆ ಕಾವೇರಿ ನದಿ ಇಲ್ಲವೆ ಮೊಯಾರ್ ನದಿಗಳಲ್ಲಿ ಈ ಮೀನುಗಳು ಕಾಣಿಸಿಕೊಳ್ಳುತ್ತಿದ್ದು ಅವುಗಳ ಮೂಲ ಮತ್ತು ಜೀವನ ಶೈಲಿಯ ಬಗ್ಗೆ ಹಡುಕಾಟ ಆರಂಭವಾಗಿದೆ. ಐಯುಸಿಎನ್ ಇವುಗಳನ್ನು ಕೆಂಪುಪಟ್ಟಿಯಲ್ಲಿ ಸೇರಿಸಿದೆ ಎನ್ನುತ್ತಾರೆ ವಾಸಿ ಸಂಸ್ಥೆಯ ಸ್ವಯಂ ಸೇವಕ ಬಿಳಿಗಿರಿಬೆಟ್ಟದ ಪರಿಸರ ತಜ್ಞ ನವೀನ್ ಜಗಲಿ.
ಆಮ್ಲಜನಕ ಸೂಚಕ ಜಲ ಜೀವಿ:
ನದಿ ನೀರಿನ ಹರಿವಿಗೆ ವಿರುದ್ಧವಾಗಿ ವೇಗವಾಗಿ ಈಜುವ ಕಲೆಗಾರಿಕೆ ಈ ಮಹಶೀರ್ ಮೀನುಗಳಿಗೆ ಸಿದ್ಧಿಸಿದೆ. ಗರಿಷ್ಠ 9 ಅಡಿ ಉದ್ದ, 55 ಕೆಜಿಯವರೆಗೂ ತೂಗುವ ಇವು ನೀರಿನಲ್ಲಿ ಸಿಗುವ ಕೀಟ, ಸಸ್ಯ ಮತ್ತಿತರ ಕೊಳೆತಿನಿಗಳನ್ನು ಸೇವಿಸಿ ಜಲಮೂಲವನ್ನು ಸ್ವಚ್ಛಗೊಳಿಸುತ್ತವೆ. ನೀರಿನಲ್ಲಿ ಪ್ರಾಣವಾಯು ಸ್ಥಿರೀಕರಣದ ಸೂಚಿಯಾಗಿಯೂ ಇವುಗಳನ್ನು ಜಲತಜ್ಞರು ಗುರುತಿಸಿದ್ದಾರೆ ಎನ್ನುತ್ತಾರೆ ನವೀನ್ ಜಗಲಿ.
ಮತ್ಸ್ಯೋದ್ಯಮ ನಂಬಿದವರು ಈ ಮೀನು ಬಲೆಗೆ ಬಿದ್ದರೆ ವಾಪಸ್ ನದಿಗೆ ಬಿಡುತ್ತಾರೆ. ಆದರೆ ಕಾವೇರಿ ನದಿ ಪಾತ್ರಗಳಲ್ಲಿ ಗಾಳಕ್ಕೆ ಮಹಶೀರ್ ಮೀನು ಸಿಕ್ಕರೆ ತಿನ್ನಲು ಬಳಸಲಾಗುತ್ತಿದೆ. ಅವುಗಳ ಪರಿಸಾರಿಕ ಮಹತ್ವ ಮನಗಂಡು, ಅವುಗಳನ್ನು ರಕ್ಷಿಸಲು ಈಚೆಗೆ ವಾಸಿ ಮುಖ್ಯಸ್ಥ ನರೇನ್ ಶಿವನಸಮುದ್ರ, ಬಿಆರ್‌ಟಿ, ಕಾವೇರಿ ನದಿಗುಂಟಗಳಲ್ಲಿ ಜಾಗೃತಿ ಮೂಡಿಸಿದರು.
ಮಹಶೀರ್ ಹಿಡಿಯುವುದು ಅಪರಾಧ:
ಬ್ರಿಟಿಷರು ಮಹಶೀರ್ ಜೀವ ವಿಕಾಸದ ಹಾದಿಯನ್ನು ದಾಖಲಿಸಿದ್ದು ಮುತ್ತತ್ತಿ ಭೀಮೇಶ್ವರಿ ಕ್ಯಾಂಪ್‌ನಲ್ಲಿ ಈ ಮೀನುಗಳ ಹತ್ತಾರು ಬಗೆಯನ್ನು ಪಟ್ಟಿಮಾಡಿ, ಅವುಗಳ ತಲೆ ಮತ್ತಿತರ ಭಾಗಗಳನ್ನು ರಕ್ಷಿಸಿ ಇಟ್ಟಿದ್ದಾರೆ. ಕೇಂದ್ರ ಸರ್ಕಾರ ಅಂಚೆಚೀಟಿಗಳಲ್ಲಿ ಮಹಶೀರ್ ಮೀನುಗಳ ಚಿತ್ರ ಟಂಕಿಸಿದೆ. ಇವುಗಳನ್ನು ಉಳಿಸಲು ಸರ್ಕಾರ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದ್ದು, ನದಿಗಳಲ್ಲಿ ಈ ಮೀನು ಇಡಿಯುವುದು ಅಪರಾಧವಾಗಿದೆ.
ಗೋಲ್ಡ್, ಸಿಲ್ವರ್; ಬ್ಲೂ ಮಹಶೀರ್ ಪತ್ತೆ:
ಮಹಶೀರ್ ಮೀನಿನ ವೈಜ್ಞಾನಿಕ ಹೆಸರು ‘ತಾರ್ ಪುಟಿತೋರಾ’. ಕಾವೇರಿ ವಲಯದಲ್ಲಿ ತಾರ್ ರೆಮಾದೇವಿ ಎನ್ನಲಾಗುತ್ತದೆ. ಮಧ್ಯಪ್ರದೇಶ ಮತ್ತು ಪಾಕಿಸ್ತಾನದ ರಾಷ್ಟ್ರೀಯ ಮೀನು ಎಂಬ ಗೌರವ ಮಹಶೀರ್ ಮೀನಿಗಿದೆ. ಕಾವೇರಿ ನದಿಯಲ್ಲಿ ಈಚೆಗೆ ಗೋಲ್ಡ್, ಸಿಲ್ವರ್ ಮತ್ತು ಬ್ಲೂ ಬಣ್ಣದ ದೇಹ ಹಾಗೂ ರೆಕ್ಕೆ ಹೊಂದಿರುವ ಮಹಶೀರ್‌ಗಳನ್ನು ಜಲ ತಜ್ಞರು ಪತ್ತೆ ಹಚ್ಚಿದ್ದಾರೆ.
‘ಮಹಶೀರ್ ಸಂಕುಲಕ್ಕೆ ಆತಂಕ’
ಮೀನುಗಾರಿಕೆಗೆ ಬಳಸುವ ಡೈನಮೈಟ್ ಹಾಗೂ ನೀರಿನಲ್ಲಿ ಸಿಡಿಸುವ ರಸಾಯನಿಕಗಳಿಂದ ಮಹಶೀರ್ ಜಾತಿಯ ಜೀವಕ್ಕೆ ಕುತ್ತು ಎದುರಾಗಿದೆ. ಇತರ ಮೀನುಗಳಂತೆ ಇವುಗಳ ವಂಶೋದ್ಧಾರ ಪ್ರಕ್ರಿಯೆ ಮಾಡಲಾಗದು. ಹಾಗಾಗಿ ಮೀನು ತಜ್ಞರು ಅವುಗಳನ್ನು ಕೃತಕವಾಗಿ ಉತ್ಪಾದಿಸಿ ರಕ್ಷಿಸುವ ಬಗ್ಗೆ ಯೋಜನೆ ರೂಪಿಸುತ್ತಿದ್ದಾರೆ ಎಂದು ತಾಲ್ಲೂಕು ಮೀನುಗಾರಿಕಾ ಇಲಾಖೆಯ ನಿರ್ದೇಶಕ ವಿವೇಕ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.