ADVERTISEMENT

ಯಳಂದೂರು: ತಾಂಡವವಾಡುತ್ತಿದೆ ಅನೈರ್ಮಲ್ಯ

ತುಂಬಿ ತುಳುಕುತ್ತಿರುವ ಕಸದ ರಾಶಿ, ಅಸ್ವಚ್ಛತೆಯಿಂದ ರೋಗ ಭೀತಿ, ನೀರು ಕಲುಷಿತ-: ನಿವಾಸಿಗಳ ಆರೋಪ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 6:38 IST
Last Updated 15 ಫೆಬ್ರುವರಿ 2021, 6:38 IST
ಜನ ವಸತಿ ಪ್ರದೇಶಕ್ಕೆ ಹೊಂದಿಕೊಂಡ ಬಾರ್ ಒಂದರ ಹಿಂಭಾಗದ ಗೋಡೆ ಸಾರ್ವಜನಿಕರ ಶೌಚಾಲಯವಾಗಿ ಬಳಕೆ ಆಗುತ್ತಿದೆ
ಜನ ವಸತಿ ಪ್ರದೇಶಕ್ಕೆ ಹೊಂದಿಕೊಂಡ ಬಾರ್ ಒಂದರ ಹಿಂಭಾಗದ ಗೋಡೆ ಸಾರ್ವಜನಿಕರ ಶೌಚಾಲಯವಾಗಿ ಬಳಕೆ ಆಗುತ್ತಿದೆ   

ಯಳಂದೂರು: ಪಟ್ಟಣದ ಪ್ರಮುಖ ಸ್ಥಳಗಳು ಹಾಗೂ ಹಲವು ವಾರ್ಡ್‌ಗಳಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದ್ದು, ರೋಗ ರುಜಿನಗಳ ಭೀತಿಯಲ್ಲಿ ಜನರಿದ್ದಾರೆ.

ಬಳೇಪೇಟೆ ಪ್ರದೇಶದಲ್ಲಿ ಕೆಲವು ದಿನಗಳಿಂದ‌ ಮಕ್ಕಳು ಹಾಗೂ ನಿವಾಸಿಗಳಲ್ಲಿ ಜಾಂಡಿಸ್ ಕಾಣಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನೈರ್ಮಲ್ಯ ಹಾಗೂ ಕಲುಷಿತ ನೀರಿನಿಂದಾಗಿ ಜನರು ಅಸ್ವಸ್ಥಗೊಂಡಿದ್ದಾರೆ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.

ನೀರು ಶುದ್ಧವಾಗಿದ್ದು, ಜನರು‌ ಆತಂಕ ಪಡಬೇಕಾಗಿಲ್ಲ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಪಟ್ಟಣದಲ್ಲೂ ಸ್ವಚ್ಛ ಭಾರತ ಅಭಿಯಾನ ಯೋಜನೆ ಜಾರಿಯಲ್ಲಿದೆ. ಆದರೆ, ಒಂದು ಸುತ್ತು ಓಡಾಡಿದರೆ ಯೋಜನೆ ಅನುಷ್ಠಾನದ ಯಾವ ಲಕ್ಷಣವೂ ಕಂಡು ಬರುತ್ತಿಲ್ಲ.

ಪಟ್ಟಣದ ವ್ಯಾಪ್ತಿಯ ಹಲವು ಕಡೆಗಳಲ್ಲಿ ಕಸ ಕಡ್ಡಿಗಳು ತುಂಬಿ ತುಳುತ್ತಿವೆ. ಖಾಲಿ ನಿವೇಶನಗಳು ಕಸದ ತೊಟ್ಟಿಗಳಾಗಿವೆ. ಬಡಾವಣೆಗಳಲ್ಲಿರುವ ಮನೆಗಳ ಸುತ್ತಮುತ್ತಲಿನ ಖಾಲಿ ಜಾಗ ಬಯಲು ಬಹಿರ್ದೆಸೆ ತಾಣವಾಗಿದೆ. ವಾಸದ ಸ್ಥಳದಲ್ಲಿ ಕೊಚ್ಚೆ ತುಂಬಿದ ಚರಂಡಿ, ಸಮೀಪದ ನಿವಾಸಿಗಳ ನಿದ್ದೆಗೆಡಿಸಿದರೆ, ಅಲ್ಲಲ್ಲಿ ಪೊದೆಗಳು ಆವರಿಸಿ, ಇಲಿ-ಹೆಗ್ಗಣಗಳು, ಸೊಳ್ಳೆ, ಕ್ರಿಮಿ ಕೀಟಗಳ ಹಾವಳಿ ಕಾಯಿಲೆ ಭೀತಿಯನ್ನು ಹರಡಿವೆ.

ಪಟ್ಟಣದಲ್ಲಿ 12 ವಾರ್ಡ್‌ಗಳಿವೆ. 2011ರ ಜನಗಣತಿ ಪ್ರಕಾರ 8,779 ಜನಸಂಖ್ಯೆ ಹೊಂದಿದೆ. ಈಗ ಅದು 12 ಸಾವಿರ ತಲುಪಿದೆ. 3000 ಕುಟುಂಬಗಳಿವೆ. ಜನಸಂಖ್ಯೆ‌ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪಟ್ಟಣದ ನೈರ್ಮಲ್ಯ ವ್ಯವಸ್ಥೆ ಸುಧಾರಿಸಿಲ್ಲ. ಒಳಚರಂಡಿ ವ್ಯವಸ್ಥೆ‌ ಇನ್ನೂ ಆಗಿಲ್ಲ. ಇದರಿಂದಾಗಿ ಶುದ್ಧ ನೀರು ಪೂರೈಕೆ ಹಾಗೂ ನೈರ್ಮಲ್ಯ ಕಾಪಾಡುವುದಕ್ಕೆ ತೊಂದರೆಯಾಗುತ್ತಿದೆ. ಕೆಲವು ಕಡೆಗಳಲ್ಲಿ ಚರಂಡಿಯ ಕೊಳಚೆ ನೀರು ಶುದ್ಧ ನೀರಿನೊಂದಿಗೆ‌ ಸೇರುವ ನಿದರ್ಶನಗಳೂ ಇವೆ.

ಬಳೇಪೇಟೆ ಮತ್ತು ಬಸ್ ನಿಲ್ದಾಣ ಸಮೀಪದ ಪ್ರದೇಶ ಸ್ವಚ್ಛ ಪರಿಸರ ಹೊಂದಿಲ್ಲ. ಪೂರ್ಣಯ್ಯ ಬಂಗಲೆ ಸುತ್ತಲೂ ಕಸ, ಪೊದೆ ನಿರ್ಮಾಣವಾಗಿದ್ದು, ಸೊಳ್ಳೆಗಳ ಆವಾಸ ಸ್ಥಾನವಾಗಿ ಬದಲಾಗಿದೆ. ಮಳೆಗಾಲದಲ್ಲಿ ಓಡಾಡಲು ತೊಂದರೆ ಆಗಿದೆ ಎನ್ನುತ್ತಾರೆ ನಿವಾಸಿಗಳು.

ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಬಳೇಪೇಟೆಯಲ್ಲಿ ಇನ್ನೂ ಚರಂಡಿ ವ್ಯವಸ್ಥೆ ಸುಧಾರಿಸಿಲ್ಲ. ಇಲ್ಲಿ ಹಾದು ಹೋಗುವ ಚರಂಡಿ ಕಿರಿದಾಗಿದ್ದು, ಕೊಳಚೆ ನಿಂತು, ಗಬ್ಬೆದ್ದು ನಾರುತ್ತಿದೆ.

ಬಹುತೇಕ ಮನೆಗಳ ನಲ್ಲಿ ಸಂಪರ್ಕಕ್ಕೆ ಚರಂಡಿ ತಳಭಾಗದಲ್ಲಿ ಪೈಪ್ ಲೈನ್ ಹಾಕಲಾಗಿದ್ದು,ಕುಡಿಯುವ ನೀರಿನಲ್ಲಿ ಆಗಾಗ ಹುಳುಗಳು ಕಂಡು ಬರುತ್ತವೆ. ಇಂತಹ ಕಲುಷಿತನೀರನ್ನು ಸೇವಿಸಿದ ಬಹಳಷ್ಟು ಮಕ್ಕಳು ಮತ್ತು ಜನರು ಕಾಮಾಲೆಗೆ ತುತ್ತಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು 10ನೇ ವಾರ್ಡ್‌ನ ಶಾಹಿದಾಬಾನು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊತ್ತದ ಕೇರಿಗೆ ಹೊಂದಿಕೊಂಡ ನದಿ ಸಮೀಪದ ಬೀದಿಗಳಲ್ಲಿ ಬಯಲು ಬಹಿರ್ದೆಸೆ ಸಾಮಾನ್ಯವಾಗಿದೆ. ಕೆಲವೆಡೆ ಮಲ ಮೂತ್ರದ ವಾಸನೆ ಮೂಗಿಗೆ ರಾಚುತ್ತದೆ. ರಸ್ತೆ ಮಧ್ಯಭಾಗದಲ್ಲಿ ಮಾತ್ರ ಸಂಚರಿಸಬೇಕು. ಗಾಳಿ ಬೀಸಿದಾಗ ದುರ್ವಾಸನೆ ಉಸಿರಾಡಬೇಕಾದ ದುಃಸ್ಥಿತಿ ಇದೆ’ ಎಂದು ಪಟ್ಟಣದ ನಿವಾಸಿ ಶ್ರೀನಿವಾಸ ಅವರು ದೂರಿದರು.

‘10ನೇ ವಾರ್ಡ್ ಸಮೀಪದ ಬಾರ್‌ಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಖಾಲಿ ನಿವೇಶನಗಳಲ್ಲಿ ಹಾಕುತ್ತಾರೆ. ಬಾರ್ ಶೌಚಾಲಯಗಳ ಸಂಪರ್ಕವನ್ನು ಚರಂಡಿಗೆ ಸೇರಿಸಲಾಗಿದೆ. ಇಲ್ಲಿ ಮೂತ್ರ ವಿಸರ್ಜಿಸುತ್ತಾರೆ. ಈ ಬಗ್ಗೆ ಪಟ್ಟಣ ಪಂಚಾಯಿತಿಗೆ ದೂರು ನೀಡಿದರೂ, ಜಾಣ ಮೌನ ಪಾಲಿಸುತ್ತಾರೆ’ ಎಂದು ಅಮಾನ್ ಉಲ್ಲಾಷರೀಫ್ ಅವರು ಬೇಸರ ವ್ಯಕ್ತಪಡಿಸಿದರು.

‘ಬಸ್ ನಿಲ್ದಾಣದಿಂದ ಕುಂಬಾರಗುಂಡಿಗೆ ಹಾದುಹೋಗುವ ರಸ್ತೆ ಬದಿ ಚರಂಡಿ ನಾರುತ್ತಿದೆ. ಈಮಾರ್ಗದಲ್ಲಿ ಪದವಿ ವಿದ್ಯಾರ್ಥಿಗಳು ಮತ್ತು ಸರ್ಕಾರಿ ನೌಕರರ ವಸತಿ ಗೃಹಗಳು ಇದ್ದು, ಕುಡಿಯುವ ನೀರಿನ ಪೈಪ್‌ಲೈನ್‌ ಹಾದುಹೋಗಿದೆ. ಕೆಲವೆಡೆ ಶೌಚಾಲಯದ ತ್ಯಾಜ್ಯವನ್ನು ಮಾರ್ಗದಲ್ಲಿ ಹರಿಸುವುದರಿಂದ ಶುದ್ಧ ನೀರು ಕಲುಷಿತಗೊಳ್ಳುತ್ತದೆ. ಈ ಬಗ್ಗೆ ಪಂಚಾಯಿತಿಗೆ ತಿಳಿಸಿದರೂ ಪ್ರಯೋಜನ ಆಗಿಲ್ಲ’ ಎಂದು ರಾಜೇಶ್, ಜಿಯಾಉಲ್ಲಾ ಅವರುಅಳಲು ತೋಡಿಕೊಂಡರು.‌

‘ಪಟ್ಟಣದ ಬಹುತೇಕ ಕುಟುಂಬಗಳು ನೀರಿನ ಸಂಪು ಮತ್ತು ಶೌಚಾಲಯ ಗುಂಡಿಗಳನ್ನು ಅಕ್ಕಪಕ್ಕದಲ್ಲಿ ನಿರ್ಮಿಸಿಕೊಂಡಿವೆ. ಕೆಲ ಬಡಾವಣೆಗಳಲ್ಲಿ ಚರಂಡಿಗೆ ನೇರವಾಗಿ ಶೌಚದನೀರು ಮತ್ತು ತ್ಯಾಜ್ಯ ಹರಿಸುವುದರಿಂದ ಕೊಳಚೆ ಸೃಷ್ಟಿ ಯಾಗಿದೆ. ಕೋಳಿ ತ್ಯಾಜ್ಯವನ್ನು ರಸ್ತೆ ಸುತ್ತಮುತ್ತ ಚೆಲ್ಲಲಾಗುತ್ತಿದೆ. ಅಧಿಕಾರಿಗಳು ಯಾವ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ‌‌’ಎಂದು ಮಹದೇವಮ್ಮ ದೂರಿದರು.

ಶುದ್ಧ ನೀರು ಪೂರೈಕೆ:‘ವಾರ್ಡ್‌ಗಳಲ್ಲಿ ಶುಚಿತ್ವ ಕಾಪಾಡಲು ಬ್ಲೀಚಿಂಗ್ ಪೌಡರ್ ಹಾಕಲಾಗುತ್ತಿದೆ. ಚರಂಡಿಗಳ ಹೂಳು ತೆಗೆದು ಸ್ವಚ್ಛತೆ ಕಾಪಾಡಲಾಗಿದೆ. ಕುಡಿಯುವ ನೀರನ್ನು ಪರೀಕ್ಷಾ ಕೇದ್ರಕ್ಕೆ ಕಳುಹಿಸಿ ವರದಿ ಪಡೆಯಲಾಗಿದ್ದು, ಯಾವುದೇ ದೋಷ ಕಂಡುಬಂದಿಲ್ಲ. ಜನರು ಆತಂಕಕ್ಕೆ ಒಳಗಾಗಬೇಕಿಲ್ಲ‌‌’ ಎಂದು ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕ ಮಹೇಶ್ ಕುಮಾರ್ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

-----

ಜನರಲ್ಲೂ ಮೂಡಬೇಕಿದೆ ಜಾಗೃತಿ

‌ಪಟ್ಟಣ ಪಂಚಾಯಿತಿಯು ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಂಡರೂ ಅದರಲ್ಲಿ ಸಂಪೂರ್ಣ ಯಶಸ್ಸು ಕಾಣುತ್ತಿಲ್ಲ. ಜನರು ಕೂಡ ಸ್ವತಃ ಸ್ವಚ್ಛತೆ ಕಾಪಾಡುವುದರ ಬಗ್ಗೆ ಗಮನಹರಿಸಬೇಕಾಗಿದೆ.

ಕಸವನ್ನು ಎಲ್ಲೆಂದರಲ್ಲಿ ಎಸೆಯುವ ಪ್ರವೃತ್ತಿ ಕೆಲವರಲ್ಲಿದೆ.‌ ಮೂಲದಲ್ಲೇ ಕಸ ಬೇರ್ಪಡಿಸಬೇಕು ಎಂಬ ಸೂಚನೆ ಇದ್ದರೂ, ಪಾಲನೆ ಸರಿಯಾಗಿ ಆಗುತ್ತಿಲ್ಲ. ಶೌಚಾಲಯಗಳಿದ್ದರೂ ಬಹಿರ್ದೆಸೆಗೆ ಬಯಲನ್ನೇ ಆಶ್ರಯಿಸುವವರು ಹಲವರು ಇದ್ದಾರೆ.

-----

ಜನರು ಏನಂತಾರೆ...?

ಅಶುದ್ಧ ನೀರು ಪೂರೈಕೆ

ಬಳೇಪೇಟೆ ಸುತ್ತಮುತ್ತ ಹತ್ತಾರು ಮಕ್ಕಳು ಮತ್ತು ನಿವಾಸಿಗಳಲ್ಲಿ ಈಗಾಗಲೇ ಜಾಂಡಿಸ್ ಕಾಣಿಸಿಕೊಂಡಿದೆ. ಹಲವರು ತಿಂಗಳಿಂದ ಬಳಲಿದ್ದಾರೆ. ಅಶುಚಿತ್ವ ಮತ್ತು ಅಶುದ್ಧ ನೀರು ಪೂರೈಕೆಯಿಂದ ಇಂತಹ ಸಮಸ್ಯೆಗಳು ಬಾಧಿಸಿವೆ

-ಉಬೇದುಲ್ಲಾ ಖಾನ್,ಸ್ಥಳೀಯ ನಿವಾಸಿ

***

ತ್ಯಾಜ್ಯ ಸಾಗಿಸಲು ಲಂಚ

ಪಂಚಾಯಿತಿ ಸಿಬ್ಬಂದಿ ಆಗಾಗ ಬ್ಲೀಚಿಂಗ್ ಪೌಡರ್ ಹಾಕಿ ಹೋಗುತ್ತಾರೆ. ಚರಂಡಿ ಸ್ವಚ್ಛಗೊಳಿಸಿದ ನಂತರ ತ್ಯಾಜ್ಯವನ್ನು ಅಲ್ಲಿಯೇ ಬಿಡಲಾಗುತ್ತದೆ. ಇದನ್ನು ಹೊರಕ್ಕೆಸಾಗಿಸಲು ಲಂಚ ನೀಡಬೇಕಾದ ದುಃಸ್ಥಿತಿ ಇದೆ

-ಅಮಾನ್ ಉಲ್ಲಾ ಷರೀಫ್,ನಿವಾಸಿ

***

ಸೊಳ್ಳೆ, ಇಲಿಗಳ ಆವಾಸ

ಬಡಾವಣೆಯಲ್ಲಿರುವ ಖಾಲಿ ನಿವೇಶನಗಳಲ್ಲಿ ಬೇಕರಿ ಮತ್ತು ಬಾರ್‌ಗಳ ತ್ಯಾಜ್ಯ ಚೆಲ್ಲುವುದನ್ನು ನಿಯಂತ್ರಿಸಿ, ಸೊಳ್ಳೆ, ಇಲಿಗಳ ಆವಾಸವಾಗುವುದನ್ನು ತಡೆಯಬೇಕು. ಬೇಸಿಗೆಯಲ್ಲಿ ಕಾಡುವ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಕ್ರಮ ವಹಿಸಬೇಕು.

-ಶ್ರೀಕಂಠ ಮೂರ್ತಿ,ಯಳಂದೂರು

***

ಶುದ್ಧ ನೀರು ಪೂರೈಸಿ

ಪಟ್ಟಣದ ಕುಡಿಯುವ ನೀರನ್ನು ಪರೀಕ್ಷೆಗೆ ಒಳಪಡಿಸಬೇಕು. ಇಲ್ಲವೇ ಟ್ಯಾಂಕರ್‌ಗಳ ಮೂಲಕಶುದ್ಧ ನೀರು ಪೂರೈಸಬೇಕು. ಕೈಗವಸು ಧರಿಸಿ ಬೇಕರಿ ಮತ್ತು ಹೋಟೆಲ್‌ಗಳಲ್ಲಿ ಆಹಾರನೀಡುವಂತೆ ಮುನ್ನೆಚ್ಚರಿಕೆ ವಹಿಸಬೇಕು.

- ಶಾಹಿದಾಬಾನು,ಬಳೇಪೇಟೆ

----------

ಜಾಗೃತಿ ಮೂಡಿಸಲಾಗಿದೆ

ಜಾಂಡಿಸ್‌ ಕಾಣಿಸಿಕೊಂಡ ವಾರ್ಡ್ ಪರಿಶೀಲಿಸಿ, ಮನೆಗಳ ಸುತ್ತಮುತ್ತ ಉತ್ತಮ ಪರಿಸರ ಉಂಟು ಮಾಡುವ ದಿಸೆಯಲ್ಲಿ ಜಾಗೃತಿ ಮೂಡಿಸಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿ ಸೋಂಕಿತರ ಮಾಹಿತಿ ಪಡೆದು ಅರೋಗ್ಯ ಪೂರ್ಣ ಸಮಾಜ ನಿರ್ವಹಿಸಲಾಗಿದೆ

– ಎಂ.ಸಿ.ನಾಗರತ್ನ,ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ

***

ಶುದ್ಧ ನೀರು ಪೂರೈಸಲಾಗುತ್ತಿದೆ

ಪಟ್ಟಣ ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಈಗಾಗಲೇ ಚರಂಡಿ ಹೂಳು ತೆಗೆದು ಸ್ವಚ್ಛ ಗೊಳಿಸಲಾಗಿದೆ. ಸೋಂಕು ನಿವಾರಣೆ ಮಾಡುವ ದೆಸೆಯಲ್ಲಿ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಶುದ್ಧ ನೀರು ಪೂರೈಕೆ ಆಗುತ್ತಿದೆ.

–ಶಾಂತಮ್ಮ,ಪಟ್ಟಣ ಪಂಚಾಯಿತಿ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.