ADVERTISEMENT

ಅಪ್ರತಿಮ ವ್ಯಕ್ತಿತ್ವದ ಶಿವಾಜಿ ಸ್ಮರಣೀಯ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2012, 8:35 IST
Last Updated 24 ಏಪ್ರಿಲ್ 2012, 8:35 IST

 ಚಿಕ್ಕಬಳ್ಳಾಪುರ: `ಮಹಾರಾಷ್ಟ್ರ ಭಕ್ತಿಪಂಥ ಚಳವಳಿ ಪ್ರಭಾವಕ್ಕೆ ಒಳಗಾಗಿ ಧೈರ್ಯ ಮತ್ತು ಶೌರ್ಯದಿಂದ ತಮ್ಮದೇ ಆದ ಸಾಮ್ರಾಜ್ಯವನ್ನು ಸ್ಥಾಪಿಸಿದ ಶಿವಾಜಿ ಬೇರೆ ಬೇರೆ ಕಾರಣಗಳಿಂದಾಗಿ ಇಂದಿಗೂ ಸ್ಮರಣೀಯರು~ ಎಂದು ಶಿಕ್ಷಣ ತಜ್ಞ ಪ್ರೊ. ಕೋಡಿರಂಗಪ್ಪ ತಿಳಿಸಿದರು.

ಛತ್ರಪತಿ ಶಿವಾಜಿ ಜಯಂತಿ ಅಂಗವಾಗಿ ನಗರದ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಹಲವಾರು ಸವಾಲುಗಳನ್ನು ಎದುರಿಸಿಯೂ ಆಳ್ವಿಕೆ ನಡೆಸಿದ ಕೆಲವೇ ರಾಜರಲ್ಲಿ ಶಿವಾಜಿ ಕೂಡ ಒಬ್ಬರು~ ಎಂದರು.

`ರಾಜ ಮನೆತನದ ಆಸರೆಯಿಲ್ಲದೆ ಮತ್ತು ಶ್ರೀಮಂತಿಕೆಯ ನೆರಳಿಲ್ಲದೆ ತಮ್ಮದೇ ಆದ ಅಸ್ತಿತ್ವ ಸ್ಥಾಪಿಸಿಕೊಂಡ ಶಿವಾಜಿ ಎಂದಿಗೂ ಮಣಿಯುತ್ತಿರಲಿಲ್ಲ. ತಾಯಿ ಜೀಜಾಬಾಯಿ, ದಾದಾಜಿ ಕೊಂಡದೇವ ಅವರ ಸ್ಫೂರ್ತಿ ಮತ್ತು ಮಾರ್ಗದರ್ಶನದಲ್ಲಿ ಶಿವಾಜಿ ಆತ್ಮವಿಶ್ವಾಸದಿಂದ ಮುನ್ನಡೆದರು~ ಎಂದು ಅವರು ತಿಳಿಸಿದರು.

ಸರ್ಕಾರಿ ಬಿ.ಎಡ್ ಕಾಲೇಜಿನ ಉಪನ್ಯಾಸಕಿ ಸಿ.ಎಂ.ಲೀಲಾವತಿ, `ವಿಜ್ಞಾನ ಮತ್ತು ತಂತ್ರಜ್ಞಾನದ ದಟ್ಟ ಪ್ರಭಾವಕ್ಕೆ ಒಳಗಾಗಿ ಇಂದಿನ ಯುವಜನರು ದೇಶದ ಮಹನೀಯರು ಸಾರಿದ ತತ್ವ, ಮೌಲ್ಯ ಮತ್ತು ಆದರ್ಶಗಳನ್ನು ಮರೆಯುತ್ತಿದ್ದಾರೆ. ಶಿವಾಜಿಯವರ ಬಗ್ಗೆ ಆಳವಾದ ಅಧ್ಯಯನ ಮಾಡಬೇಕಿದೆ. ಅವರ ಕುರಿತು ಜ್ಞಾನವನ್ನು ವೃದ್ಧಿಸಿಕೊಳ್ಳಬೇಕಿದೆ~ ಎಂದರು.

ಶಾಸಕ ಕೆ.ಪಿ.ಬಚ್ಚೇಗೌಡ, ಜಿಲ್ಲಾಧಿಕಾರಿ ಡಾ. ಎನ್.ಮಂಜುಳಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ವಿ.ಕೃಷ್ಣಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಎಸ್.ಶೇಖರಪ್ಪ, ಸದಸ್ಯ ಪಿ.ಎನ್.ಮುನೇಗೌಡ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ವೆಂಕಟನಾರಾಯಣಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ವೆಂಕಟೇಶ್, ಉಪವಿಭಾಗಾಧಿಕಾರಿ ಸತೀಶ್‌ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎಂ.ಮಾದೇಗೌಡ, ತಹಶೀಲ್ದಾರ್ ಎನ್.ಭಾಸ್ಕರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.