ADVERTISEMENT

ಅಸಮರ್ಪಕ ವೇತನ: ಆರೋಪ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 9:50 IST
Last Updated 15 ಮಾರ್ಚ್ 2011, 9:50 IST

ಬಾಗೇಪಲ್ಲಿ: ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆ ಸಮರ್ಪಕವಾಗಿ ಕೂಲಿ ನೀಡಲಾಗುತ್ತಿಲ್ಲ ಎಂದು ಆರೋಪಿಸಿ ಕೂಲಿ ಸಂಘದ ನೇತೃತ್ವದಲ್ಲಿ ಕೂಲಿ ಕಾರ್ಮಿಕರು ಸೋಮವಾರ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಯೋಜನೆಯ ಹೆಸರಿನಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ ಅವರು, ‘ಯೋಜನೆ ಸಮರ್ಪಕವಾಗಿ ಜಾರಿಗೊಳಿಸಲಾಗಿಲ್ಲ. ಹಣ ದುರ್ಬಳಕೆ ಜತೆ ಜಾಬ್ ಕಾರ್ಡ್‌ಗಳನ್ನು ಸಹ ವಿತರಣೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೂಲಿ ಸಂಘದ ಅಧ್ಯಕ್ಷ ವೆಂಕಟನರಸಪ್ಪ ಮಾತನಾಡಿ, ‘ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಹೆಸರಿನಲ್ಲಿ ಕೆಲ ಅಧಿಕಾರಿಗಳು ಮತ್ತು ರಾಜಕೀಯ ವ್ಯಕ್ತಿಗಳು ಭ್ರಷ್ಟಾಚಾರ ಮಾಡುತ್ತಿದ್ದಾರೆ. ತಾಲ್ಲೂಕಿನ ಸೋಮನಾಥಪುರ, ಪಾಳ್ಯಕೆರೆ, ಬಿಳ್ಳೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಜಾಬ್ ಕಾರ್ಡ್ ಸಮರ್ಪಕವಾಗಿ ವಿತರಿಸಲಾಗಿಲ್ಲ’ ಎಂದು ಆರೋಪಿಸಿದರು. ಕೂಲಿ ಸಂಘದ ಮುಖಂಡ ಗೋವಿಂದಪ್ಪ ಮಾತನಾಡಿ,  ‘ಕೂಲಿಕಾರರಿಗೆ ಶೀಘ್ರವೇ ಕೂಲಿ ನೀಡದಿದ್ದಲ್ಲಿ, ನಿರ್ಲಕ್ಷ್ಯ ತೋರುವುದು ಮುಂದುವರೆಸಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ತಾ.ಪಂ. ವ್ಯವಸ್ಥಾಪಕಿ ಲಕ್ಷ್ಮಿದೇವಮ್ಮ ಅವರು ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿದರು. ತಾಲ್ಲೂಕು ಕೂಲಿ ಸಂಘದ ಖಜಾಂಚಿ ಎಲ್.ಆಂಜಿನಪ್ಪ, ಪ್ರಸಾದ್, ರಾಧಮ್ಮ, ಮಂಜುಳಮ್ಮ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.