ADVERTISEMENT

ಈಜುಕೊಳದಲ್ಲಿ ಅಕ್ರಮವಾಗಿ ಮೋಜು ಮಸ್ತಿ

ಬರೀ ಮೈಯಲ್ಲಿ ಕೊಳಕ್ಕಿಳಿದು ಜನ್ಮದಿನ ಆಚರಣೆ; ಹೊರಗುತ್ತಿಗೆ ನೌಕರರ ವರ್ತನೆಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 7 ಜೂನ್ 2018, 6:39 IST
Last Updated 7 ಜೂನ್ 2018, 6:39 IST
ಚಿಕ್ಕಬಳ್ಳಾಪುರದ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳದಲ್ಲಿ ಬುಧವಾರ ಹುಟ್ಟುಹಬ್ಬದ ಆಚರಣೆಯ ಮೋಜಿನಲ್ಲಿ ತೊಡಗಿದ ಹೊರಗುತ್ತಿಗೆ ನೌಕರರು
ಚಿಕ್ಕಬಳ್ಳಾಪುರದ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳದಲ್ಲಿ ಬುಧವಾರ ಹುಟ್ಟುಹಬ್ಬದ ಆಚರಣೆಯ ಮೋಜಿನಲ್ಲಿ ತೊಡಗಿದ ಹೊರಗುತ್ತಿಗೆ ನೌಕರರು   

ಚಿಕ್ಕಬಳ್ಳಾಪುರ: ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣ ದಲ್ಲಿರುವ ಈಜುಕೊಳದಲ್ಲಿ ಬುಧವಾರ ಕೆಲ ಹೊರಗುತ್ತಿಗೆ ನೌಕರರು ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಿಬ್ಬಂದಿ ಅಕ್ರಮವಾಗಿ ಹುಟ್ಟುಹಬ್ಬದ ನೆಪದಲ್ಲಿ ನಿಯಮ ಮೀರಿ ನೀರಿಗಿಳಿದು ಮೋಜು ಮಸ್ತಿ ನಡೆಸಿರುವುದು ಕ್ರೀಡಾ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಒಳಾಂಗಣ ಕ್ರೀಡಾಂಗಣದಲ್ಲಿರುವ ಷೆಟಲ್ ಬ್ಯಾಡ್ಮಿಂಟನ್ ಅಂಕಣ ನೋಡಿಕೊಳ್ಳುವ ಮಂಜುನಾಥ್ ಎಂಬ ಹೊರಗುತ್ತಿಗೆ ನೌಕರರನ ಹುಟ್ಟುಹಬ್ಬದ ನೆಪದಲ್ಲಿ ಬುಧವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಆರು ಜನರು ಬರೀ ಮೈಯಲ್ಲಿ ಈಜುಕೊಳಕ್ಕಿಳಿದು ನೀರಿನಲ್ಲಿ ಕೇಕ್ ಕತ್ತರಿಸಿ ಪರಸ್ಪರ ಮುಖಕ್ಕೆ ಬಳಿದುಕೊಂಡು ನಡೆಸಿದ ಮೋಜಿನ ಚಿತ್ರಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಈಜುಕೋಳದ ಉಸ್ತುವಾರಿ ದಿನಗೂಲಿ ನೌಕರ ಬಾಬು, ಯುವಜನ ಸೇವಾ ಇಲಾಖೆ ಕಚೇರಿ ಸಿಬ್ಬಂದಿ ಬಾಲರಾಜ್, ಮತ್ತು ಕ್ರೀಡಾಂಗಣದಲ್ಲಿರುವ ಕ್ರೀಡಾ ಶಾಲೆ ಮೇಲ್ವಿಚಾರಕ ಮೂರ್ತಿ ಸೇರಿಕೊಂಡು ಈಜುಕೊಳದಲ್ಲಿ ಕಾನೂನುಬಾಹಿರ ಕೃತ್ಯ ನಡೆಸಿದ್ದಾರೆ ಎಂದು ಕ್ರೀಡಾಪಟುಗಳು ಆರೋಪಿಸುತ್ತಿದ್ದಾರೆ.

ADVERTISEMENT

‘ಇದು ತುಂಬಾ ನಾಚಿಕೆಗೇಡಿನ ಸಂಗತಿ. ಅಂತರರಾಷ್ಟ್ರೀಯ ಮಟ್ಟದ ಈಜುಕೊಳವನ್ನು ಹೇಗೆ ನಿರ್ವಹಿಸಬೇಕು ಎಂಬ ಪ್ರಜ್ಞೆ ಇಲ್ಲದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಇಂತಹ ಘಟನೆ ನಡೆದಿದೆ. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದರೆ ಪೋಷಕರು ತಮ್ಮ ಮಕ್ಕಳು ಈಜುಕೊಳಕ್ಕೆ ತರಬೇತಿಗೆ, ಈಜಲು ಕಳುಹಿಸಲು ಒಪ್ಪುವುದಿಲ್ಲ’ ಎಂದು ಹಿರಿಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು.

‘ಈಜುಕೊಳಕ್ಕೆ ಇಳಿಯಬೇಕಾದರೆ ಅದರದೇ ಆದ ಒಂದು ಶಿಸ್ತಿದೆ. ಅದನ್ನು ಪಾಲಿಸುವಂತೆ ನಾಗರಿಕರಿಗೆ ಬುದ್ಧಿ ಹೇಳುವವರೇ ಶಿಸ್ತನ್ನು ಮೀರಿ ಕೊಳವನ್ನು ತಮ್ಮ ಮನೆಯ ಆಸ್ತಿಯಂತೆ ಮನಸೋ ಇಚ್ಛೆ ವರ್ತಿಸಿರುವುದು ಖಂಡನೀಯ. ಇದಕ್ಕೆ ಕಾರಣಕರ್ತರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸುತ್ತೇವೆ’ ಎಂದು ತಿಳಿಸಿದರು.

‘ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಅಧಿಕಾರ ಅಸಡ್ಡೆಯಂತೂ ಬಣ್ಣಿಸಲಾಗದಷ್ಟಿದೆ. ಹೊರಗಡೆಯಿಂದ ಬರುವ ಜನರಿಗೆ ಕೊಳಕ್ಕೆ ಇಳಿಯಲು ಈಜುಡುಗೆ ಧರಿಸಿ ಎಂದು ಸಲಹೆ ನೀಡುವವರೇ ಬರಿ ಮೈಯಲ್ಲಿ ನೀರಿಗಿಳಿದು ಕಪಿಚೆಷ್ಟೇ ಮಾಡಿರುವುದು ಅಕ್ಷಮ್ಯ. ಇಷ್ಟೆಲ್ಲ ನಡೆದರೂ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತ ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ’ ಎಂದು ಕ್ರೀಡಾಪಟು ಜಯಂತಿಗ್ರಾಮದ ನಾರಾಯಣಸ್ವಾಮಿ ಆರೋಪಿಸಿದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ. ರುದ್ರಪ್ಪ ಅವರನ್ನು ಸಂಪರ್ಕಿಸಲಾಯಿತು. ಆದರೆ ಅವರ ಮೊಬೈಲ್ ಸ್ವಿಚ್ಡ್‌ಆಫ್ ಆಗಿತ್ತು.

2016ರ ಮಾರ್ಚ್‌ನಲ್ಲಿ ವಿದ್ಯಾರ್ಥಿಯೊಬ್ಬ ಕೊಳದಲ್ಲಿ ಈಜಾಡಲು ಹೋಗಿ ಮುಳುಗಿ ಮೃತಪಟ್ಟಿದ್ದ. ಆ ಘಟನೆಯ ಬಳಿಕ ಕೊಳ ಬಂದ್ ಮಾಡಲಾಗಿತ್ತು. ನಂತರ ಸುಮಾರು 10 ತಿಂಗಳು ಬೀಗ ಹಾಕಿದ್ದ ಈಜುಕೊಳವನ್ನು ಕಳೆದ ಏಪ್ರಿಲ್‌ನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನವೀಕರಣಗೊಳಿಸಿತ್ತು. ಖಾಸಗಿಯವರಿಗೆ ಗುತ್ತಿಗೆ ನೀಡದೆ ತಾನೇ ನಿರ್ವಹಿಸಲು ಆರಂಭಿಸಿತ್ತು.

ವರ್ಷದ ಬಹುತೇಕ ತಿಂಗಳು ಈಜುವವರಿಲ್ಲದೆ ಕೊಳ ಭಣಗುಟ್ಟುತ್ತಿದೆ. ಹೀಗಾಗಿ ದಿನೇ ದಿನೇ ಕೊಳದ ನೀರು ಶುದ್ಧೀಕರಿಸುವ ಪ್ರಕ್ರಿಯೆಗೆ ಆದಾಯಕ್ಕಿಂತ ಹೆಚ್ಚು ಖರ್ಚಾಗಿ ನಿರ್ವಹಣೆ ದುಬಾರಿಯಾಗುತ್ತಿದೆ. ಇದೇ ಹೊತ್ತಿನಲ್ಲಿ ಕೊಳ ನಿರ್ವಹಣೆಗೆ ಇರುವವರೇ ಮಾಡಬಾರದ ಕೆಲಸ ನೀರು ಗಲೀಜು ಮಾಡಿದ್ದು ಕ್ರೀಡಾಪಟುಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.