ಚಿಕ್ಕಬಳ್ಳಾಪುರ: ಕಾರುವೊಂದು ಸರಕು ಸಾಗಣೆ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಏಳು ವರ್ಷದ ಮಗು ಸೇರಿದಂತೆ 12 ಮಂದಿ ತೀವ್ರ ಸ್ವರೂಪದಲ್ಲಿ ಗಾಯಗೊಂಡ ಘಟನೆ ನಗರದ ಹೊರವಲಯದ ಹಾರೋಬಂಡೆ ಬಳಿ ಬುಧವಾರ ಸಂಜೆ ನಡೆದಿದೆ. 12 ಜನರ ಸ್ಥಿತಿಯು ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಎಲ್ಲರನ್ನೂ ಅಂಬುಲೆನ್ಸ್ ಮೂಲಕ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಎಲ್ಲರಿಗೂ ಮುಖದ ಮೇಲೆಯೇ ಗಾಯಗಳಾಗಿದ್ದು, ಬಾಯ್ತೆರೆದು ಮಾತನಾಡಲಾಗದೇ ನೋವಿನಿಂದ ಸಂಕಷ್ಟಪಡುತ್ತಿದ್ದರು.
ಬೆಂಗಳೂರಿನ ನಿವಾಸಿಗಳಾದ ಜೆ.ಮಹಮ್ಮದ್ (25), ಅರಬಿನ್ (14), ಜನ್ನದ್ (8), ಆಲಂ (30), ಇಚ್ಚು (7), ಫರ‌್ಹಾನ್ ತಾಜ್ (17), ಶಹನಾವಜ್ (20), ಹಬೀಬಾ (40), ಆಮೀರ್ (45) ಮತ್ತು ಸೈಯದ್ (40) ಗಾಯಗೊಂಡವರು. ಇನ್ನಿಬ್ಬರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವಿವರ: `ಬೆಂಗಳೂರಿನ ನಿವಾಸಿಗಳಾದ 12 ಮಂದಿ ಬಕ್ರೀದ್ ಹಿನ್ನೆಲೆಯಲ್ಲಿ ಪೆನುಕೊಂಡಕ್ಕೆ ಹೋಗಿದ್ದರು. ಪ್ರಾರ್ಥನೆ ಸಲ್ಲಿಸಿ ಅವರೆಲ್ಲರೂ ಕಾರಿನಲ್ಲಿ ಬೆಂಗಳೂರಿಗೆ ಮರಳುತ್ತಿದ್ದರು. ಕಾರನ್ನು ಮಹಿಳೆಯೊಬ್ಬರು ಚಾಲನೆ ಮಾಡುತ್ತಿದ್ದರು. ಹಾರೋಬಂಡೆ ಬಳಿ ಕಾರು ಮೇಲೆ ಚಾಲಕಿ ನಿಯಂತ್ರಣ ಕಳೆದುಕೊಂಡರು. ಎದುರು ಹೋಗುತ್ತಿದ್ದ ಸರಕುಸಾಗಣೆ ವಾಹನಕ್ಕೆ ಕಾರು ಡಿಕ್ಕಿ ಹೊಡೆಯಿತು. ಇದರ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರಿಗೆಲ್ಲ ಗಾಯಗಳಾದವು. ಘಟನೆ ಜರುಗಿದ ಕೆಲವೇ ಕ್ಷಣಗಳಲ್ಲಿ ಹಾರೋಬಂಡೆ ಗ್ರಾಮಸ್ಥರ ನೆರವಿನೊಂದಿಗೆ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪೊಲೀಸರು ತಿಳಿಸಿದರು.
`ಕಾರು ಡಿಕ್ಕಿ ಹೊಡೆದ ಮರುಕ್ಷಣವೇ ಜೋರಾಗಿ ಎಲ್ಲರೂ ಮುಂದೆ ಬಾಗ್ದ್ದಿದರಿಂದ ಮುಖಕ್ಕೆ ಗಾಯವಾಗಿದೆ. ಒಬ್ಬರ ಬೆನ್ನೆಲುಬಿಗೂ ಭಾರಿ ಪೆಟ್ಟು ಬಿದ್ದಿದೆ. ಪೂರ್ಣಪ್ರಮಾಣದಲ್ಲಿ ಚೇತರಿಕೆಕಷ್ಟ~ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದರು.
ಆಸ್ಪತ್ರೆ ಸೌಕರ್ಯ ಕೊರತೆ; ಮಾತಿನ ಚಕಮಕಿ
ಚಿಕ್ಕಬಳ್ಳಾಪುರ: ಹಾರೋಬಂಡೆ ಬಳಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡ 12 ಮಂದಿಗೆ ಸಕಾಲಕ್ಕೆ ಸೂಕ್ತ ರೀತಿಯ ಚಿಕಿತ್ಸೆ ನೀಡುವಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ವಿಫಲರಾಗಿದ್ದಾರೆ ಎಂದು ಹಾರೋಬಂಡೆಯ ಗ್ರಾಮಸ್ಥರು ತರಾಟೆ ತೆಗೆದುಕೊಂಡರು.
ಅಪಘಾತ ವಿಷಯ ತಿಳಿದ ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದ ಗ್ರಾಮಸ್ಥರು, `ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆಯಿಲ್ಲ..ರೋಗಿಗಳನ್ನು ಕರೆದೊಯ್ಯಲು ಸಮರ್ಪಕವಾದ ಅಂಬುಲೆನ್ಸ್ ವ್ಯವಸ್ಥೆಯಿಲ್ಲ~ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಸಮಾಧಾನಪಡಿಸಲು ಯತ್ನಿಸಿದರೂ ಗ್ರಾಮಸ್ಥರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ತುರ್ತು ಚಿಕಿತ್ಸೆ ಕೊಡಿ~ ಎಂದು ಪಟ್ಟು ಹಿಡಿದರು. ನಂತರ ಸರ್ಕಾರಿ ಆಸ್ಪತ್ರೆಯ 3 ಅಂಬುಲೆನ್ಸ್ ಮತ್ತು ಖಾಸಗಿ ಆಸ್ಪತ್ರೆಗಳ ಮೂರು ಅಂಬುಲೆನ್ಸ್‌ಗಳ ನೆರವಿನಿಂದ ಗಾಯಾಳುಗಳನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಶ್ರಮಿಸಬೇಕಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.