ADVERTISEMENT

ಕಣ್ಣುಮುಚ್ಚುತ್ತಿವೆ ಶಾಲೆಗಳು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 8:10 IST
Last Updated 19 ಅಕ್ಟೋಬರ್ 2012, 8:10 IST

ಗೌರಿಬಿದನೂರು: ಹತ್ತಕ್ಕಿಂತ ಕಡಿಮೆ ಸಂಖ್ಯೆ ವಿದ್ಯಾರ್ಥಿಗಳಿರುವ ತಾಲ್ಲೂಕಿನ ಒಂಬತ್ತು ಸರ್ಕಾರಿ ಶಾಲೆಗಳನ್ನು ಹತ್ತಿರದ ಶಾಲೆಗಳ ಜೊತೆ ವಿಲೀನಗೊಳಿಸಲಾಗಿದೆ.   ತಾಲ್ಲೂಕಿನಲ್ಲಿ 183 ಸರ್ಕಾರಿ ಕಿರಿಯ ಪ್ರಾಥಮಿಕ ಮತ್ತು 125 ಹಿರಿಯ ಪ್ರಾಥಮಿಕ  ಶಾಲೆಗಳಿದ್ದು, ಒಟ್ಟು 308 ಸರ್ಕಾರಿ ಶಾಲೆ ಹಾಗೂ 7 ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸೇರಿ  ಒಟ್ಟು 315 ಶಾಲೆ 24 ಕ್ಲಸ್ಟರ್‌ಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಜರಬಂಡಹಳ್ಳಿ ಕ್ಲಸ್ಟರ್‌ನ ಎಂ.ಹೊಸಹಳ್ಳಿ ಶಾಲೆಯನ್ನು ಸಮೀಪದ ಮಿಣಕನಗುರ್ಕಿ ಹಿರಿಯ ಪ್ರಾಥಮಿಕ ಶಾಲೆಗೆ, ನಗರಗೆರೆ ಕ್ಲಸ್ಟರ್ ಬಂಡಮೀದತಾಂಡ ಕಿರಿಯ ಶಾಲೆಯನ್ನು ಪಕ್ಕದ ಸುಕಾಲಿತಾಂಡ ಶಾಲೆಗೆ, ಕಂತಾರ‌್ಲಹಳ್ಳಿ ಶಾಲೆಯನ್ನು ಸಮೀಪದ ಬಂದಾರ‌್ಲಹಳ್ಳಿ ಹಿರಿಯ  ಪ್ರಾಥಮಿಕ ಶಾಲೆಗೆ, ಡಿ.ಪಾಳ್ಯ ಕ್ಲಸ್ಟರ್ ಗೋಲ್ಲಚನ್ನೇನಹಳ್ಳಿ ಶಾಲೆಯನ್ನು ವದ್ದೇನಹಳ್ಳಿ ಶಾಲೆಗೆ, ದಿನ್ನೇನಹಳ್ಳಿ ಶಾಲೆಯನ್ನು ಚಿಂಚಾನಹಳ್ಳಿ ಶಾಲೆಗೆ, ಅಲ್ಲಿಪುರ ಕ್ಲಸ್ಟರ್‌ನ ದ್ಯಾವಸಂದ್ರ ಶಾಲೆಯನ್ನು ಹತ್ತಿರದ ಮೈಲಗಾನಹಳ್ಳಿ ಶಾಲೆಗೆ, ಅಗ್ರಹಾರ ಹೊಸಹಳ್ಳಿ ಶಾಲೆಯನ್ನು ತರಿದಾಳು ಶಾಲೆ, ತೊಂಡೇಭಾವಿ ಕ್ಲಸ್ಟರ್‌ನ ಭೂಮೇನಹಳ್ಳಿ ಶಾಲೆಯನ್ನು ಬೆಳಚಿಕ್ಕನಹಳ್ಳಿ ಶಾಲೆಗೆ, ಹುದುಗೂರು ಕ್ಲಸ್ಟರ್‌ನ ಹನುಮಂತಪುರ ಶಾಲೆಯನ್ನು ಕಾಟನಕಲ್ಲು ಶಾಲೆಗೆ ವಿಲೀನಗೊಳಿಸಲಾಗಿದೆ.

ಸದ್ಯಕ್ಕೆ 9 ಶಾಲೆಗೆ ಬೀಗ ಬಿದ್ದಿದೆ. ಇದೀಗ ಇಡಗೂರು ಕ್ಲಸ್ಟರ್‌ನ ಜಕ್ಕೇನಹಳ್ಳಿ ಶಾಲೆ, ಕಲ್ಲಿನಾಯಕನಹಳ್ಳಿ ಕ್ಲಸ್ಟರ್‌ನ ಕಂಬಾಲಹಳ್ಳಿ ಶಾಲೆ ಹಾಗೂ ನಗರಗೆರೆ ಕ್ಲಸ್ಟರ್‌ನ ಬಟ್ಟದೆಪ್ಪನಹಳ್ಳಿ ಶಾಲೆ ಕಣ್ಣುಮುಚ್ಚಲು ಸಿದ್ಧವಾಗಿವೆ.

`ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು ಎಂದು ಅನೇಕ ಕನ್ನಡ ಪರ ಸಂಘಟನೆಗಳು, ಸಾಹಿತಿಗಳು ಒತ್ತಾಯಿಸುತ್ತಿದ್ದಾರೆ. ಆದರೂ ಸದ್ದಿಲ್ಲದೆ ಒಂದೊಂದೇ ಶಾಲೆ ಮುಚ್ಚಲಾಗುತ್ತಿದೆ. ಇತ್ತೀಚೆಗೆ ಖಾಸಗಿ ಶಾಲೆಗಳು ನಾಯಿ ಕೊಡೆಗಳಂತೆ ತಲೆ ಎತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಜೊತೆಗೆ ಪೋಷಕರು ಖಾಸಗಿ ಶಾಲೆ ವ್ಯಾಮೋಹಕ್ಕೆ ಬಿದ್ದಿರುವುದರಿಂದ ಇಂತಹ ಪರಿಸ್ಥಿತಿ ಉಂಟಾಗಿದೆ~  ಎಂಬುದು ಕೆಲವರ ಅಭಿಪ್ರಾಯ.. 

`ಮುಂದಿನ ಹತ್ತು ವರ್ಷಗಳಲ್ಲಿ  ಸರ್ಕಾರಿ ಶಾಲೆಗಳೇ ಇರುವುದಿಲ್ಲ. ಬಡವರ ಪಾಲಿಗೆ ಶಿಕ್ಷಣ ಮರಿಚೀಕೆಯಾಗಲಿದೆ~ ಎನ್ನುತ್ತಾರೆ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಕೆ,ನಾರಾಯಣಸ್ವಾಮಿ. 
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ  ಖಾಸಗಿ ಶಾಲೆಗಳ ಪ್ರಭುತ್ವಕ್ಕೆ ಕಡಿವಾಣ ಹಾಕಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.