ADVERTISEMENT

ಕತ್ತಲೆಯಲ್ಲಿ ಜಂಗಾಲಹಳ್ಳಿ : ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಮೇ 2012, 5:30 IST
Last Updated 4 ಮೇ 2012, 5:30 IST

ಚಿಂತಾಮಣಿ: ತಾಲ್ಲೂಕಿನ ಜಂಗಾಲಹಳ್ಳಿ ಗ್ರಾಮಕ್ಕೆ ಕಳೆದ ಹತ್ತು ದಿನಗಳಿಂದ ವಿದ್ಯುತ್ ಪೂರೈಕೆಯಾಗದಿರುವುದನ್ನು ಖಂಡಿಸಿ ಗ್ರಾಮಸ್ಥರು ನಗರದ ಬೆಸ್ಕಾಂ ಗ್ರಾಮಾಂತರ ಶಾಖಾ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಗಂಗಾ ಕಲ್ಯಾಣ ಯೋಜನೆ ಅಡಿ ಫಲಾನುಭವಿಗಳ ಪಂಪ್‌ಸೆಟ್‌ಗೆ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಲ್ಪಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ದೂರಿದರು.ಈ ಸಂದರ್ಭದಲ್ಲಿ  ತಾಲ್ಲೂಕು ಪಂಚಾಯಿತಿ ಸದಸ್ಯ ಜೆ.ಸಿ.ನಾಗರಾಜ್, ಬೆಸ್ಕಾಂನ ಅಕ್ರಮ, ಸಕ್ರಮ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಗುಡಿ ಕೈಗಾರಿಕೆಗಳು ಮತ್ತು ಸಣ್ಣ ಕೈಗಾರಿಕೆಗಳಿಗೆ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಅಧಿಕಾರಿಗಳು ಟ್ರಾನ್ಸ್‌ಫಾರ್ಮ್‌ಗಳ ಸಾಗಾಣಿಕೆ ವೆಚ್ಚವೆಂದು ಹಣವನ್ನು ರೈತರಿಂದ ಪಡೆಯುತ್ತಿದ್ದಾರೆ ಎಂದು ಆಕ್ರೋಶದಿಂದ ನುಡಿದರು.

ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವ ಸಲುವಾಗಿ ಕಚೇರಿಗಳಿಗೆ ತೆರಳಿದರೆ ಅಧಿಕಾರಿಗಳು ಕಚೇರಿಯಲ್ಲಿ ಇರುವುದಿಲ್ಲ. ಸಮಸ್ಯೆಗಳು ಇತ್ಯರ್ಥವಾಗದೆ ನೆನೆಗುದಿಗೆ ಬಿದ್ದಿವೆ. ಸಂಬಂಧಪಟ್ಟ ಮೇಲಾಧಿಕಾರಿಗಳು ಕೂಡಲೇ ಗಮನ ಹರಿಸಿ ತಪ್ಪಿತಸ್ಥ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕು ಎಂದು ಪಟ್ಟು ಹಿಡಿದರು.

ಬೆಸ್ಕಾಂನ ಮುಖ್ಯ ಎಂಜಿನಿಯರ್ ಉದಯ್‌ಕುಮಾರ್ ಮಾತನಾಡಿ, ನಿರಂತರ ಜ್ಯೋತಿ ಯೋಜನೆ ಗ್ರಾಹಕರಿಗೆ ಅನುಕೂಲವಾಗಲಿದೆ. ಗ್ರಾಮಾಂತರ ಶಾಖಾ ಕಚೇರಿಗೆ ಕಡತಗಳ ಪರಿಶೀಲಿಸ್ದ್ದಿದಾರೆ. ನಗರ ವ್ಯಾಪ್ತಿಯಲ್ಲಿ ಎರಡು ತಿಂಗಳ ಒಳಗೆ ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು 2 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.

ರೈತರು ಯಾವುದೇ ಸಮಸ್ಯೆಗಳಿದ್ದರೂ ಕಂಟ್ರೋಲ್ ರೂಮ್ ಮೊ. 9483515003ಗೆ ಕರೆ ಮಾಡಿ, ಸಮಸ್ಯೆ ಪರಿಹರಿಸಲಾಗುವುದು ಎಂದರು. ಬೆಸ್ಕಾಂ ಇಲಾಖೆ ಗ್ರಾಮೀಣ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಲು ಸಿಬ್ಬಂದಿ ಸಹ ಹೆಚ್ಚಿಸಿದ್ದು, ಪ್ರತಿ ಶಾಖೆಗೆ 12 ಮಂದಿ ಸಿಬ್ಬಂದಿ ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ. ಪ್ರತಿ ವಿಭಾಗಕ್ಕೂ ವಾಹನ ನೀಡಲಾಗುತ್ತಿದೆ ಎಂದು ಉದಯ್‌ಕುಮಾರ್ ಹೇಳಿದರು.

ಪ್ರತಿಭಟನೆಯಲ್ಲಿ ಬೈರಾರೆಡ್ಡಿ, ಅಶ್ವತ್ಥರೆಡ್ಡಿ, ಸುಧಾಕರ್, ಜಯಣ್ಣ, ವೆಂಕಟರೆಡ್ಡಿ, ರಾಮಚಂದ್ರ, ಗಂಗುಲಪ್ಪ, ಶ್ರೀನಿವಾಸ್, ನಾರಾಯಣಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.